ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಮೇ.20
ಶರಾವತಿಯ ನದಿ ದಂಡೆಯ ಸಮೀಪದಲ್ಲಿ ಅಣು ಸ್ಥಾವರ ಘಟಕದ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅಲ್ಲಿನ ಜನರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯದ ಅಭಿವೃದ್ದಿಗೆ ಈ ಭಾಗದ ಜನರು ಇನ್ನೆಷ್ಟು ತ್ಯಾಗ ಮಾಡಬೇಕೆಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಶರಾವತಿ ದಂಡೆಯಲ್ಲಿರುವ 1800 ಎಕರೆ ಭೂಪ್ರದೇಶದಲ್ಲಿ ಈ ಯೋಜನೆ ಮಾಡಲು ಕೇಂದ್ರವೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ. ಈ ಅಣು ಸ್ಥಾವರ ಘಟಕ ಯೋಜನೆ ನಿರ್ಮಾಣಕ್ಕಾಗಿ ರಾಜ್ಯದ 8 ಜಾಗವನ್ನು ಗುರುತಿಸಿರುವ ಕೇಂದ್ರ ಸರ್ಕಾರವೂ ಶಿವಮೊಗ್ಗದ ಶರಾವತಿ ದಂಡೆಯನ್ನು ಆಯ್ಕೆ ಮಾಡಿಕೊಂಡಿದೆ.
ಗಮನಿಸಿ: ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ
ಲಿಂಗನಮಕ್ಕಿಯಿಂದ ಅಣುಸ್ಥಾವರದ ವರೆಗೂ:
ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಗಾಗಿ 1964 ರಲ್ಲಿ ಶರಾವತಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸಲಾಯಿತು. ಇದರಿಂದ 70 ಕಿ.ಮೀ ಗೂ ಹೆಚ್ಚಿನ ಪ್ರದೇಶ ನೀರಿನಲ್ಲಿ ಮುಳಗಿತು. ಅಂದಿನಿಂದ ಇಂದಿನವರೆಗೂ ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವಲ್ಲಿ ಸರ್ಕಾರ ವಿಫಲವಾಗುತ್ತಲೆ ಬಂದಿದೆ. ಇನ್ನೂ ಭಾರತ ಸರ್ಕಾರ ಶರಾವತಿ ಪಂಪ್ ಸ್ಟೋರೆಜ್ ಹೈಡ್ರೋಪವರ್ ಪ್ರಾಜೆಕ್ಟ್ ನಿರ್ಮಾಣ ಮಾಡುವ ಮುಂದಾಗಿದ್ದು, ಇದರಿಂದ ಸಾವಿರಾರು ಮರಗಳು ಹಾಗೂ ಶರಾವತಿ ವನ್ಯ ಸಂಪತ್ತಿನಲ್ಲಿರುವ ಸಿಂಗಳಿಕ ಸಂತತಿಗಳು ನಿರ್ನಾಮವಾಗುತ್ತಿದ್ದವು. ಆದರೆ ಮಲೆನಾಡಿನ ಪರಿಸರವಾದಿಗಳ ಹೋರಾಟದಿಂದ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಇದರ ಮುಂದುವರೆದ ಭಾಗವಾಗಿ ಶರಾವತಿ ನದಿಯಲ್ಲಿ ದಂಡೆದಲ್ಲಿ ಅಣು ಸ್ಥಾವರ ಘಟಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಶರಾವತಿ ಜನರನ್ನು ಮತ್ತಷ್ಟು ಬಗೆದು ತಿನ್ನುವ ಹುನ್ನಾರದಲ್ಲಿ ಸರ್ಕಾರವಿದೆ.

ಅಣು ಸ್ಥಾವರ ಘಟಕದಿಂದ ಉಂಟಾಗುವ ಪರಿಣಾಮ:
ಶರಾವತಿ ನದಿ ಜಲಾನಯನ ಪ್ರದೇಶವು ಕರ್ನಾಟಕದ ಎರಡು ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಶಿವಮೊಗ್ಗಕ್ಕೆ ಸೇರುತ್ತದೆ ಮೇಲ್ಭಾಗದ ನದಿ ಜಲಾನಯನ ಪ್ರದೇಶವು ಹೊಸನಗರ ಮತ್ತು ಸಾಗರ ಎಂಬ ಎರಡು ತಾಲ್ಲೂಕುಗಳಿಗೆ ವಿಸ್ತರಿಸಿದೆ. ಈ ಯೋಜನೆಯಿಂದ 40 ಕಿಮೀ ರೆಡಿಯಷನ್ ಉಂಟಾಗುತ್ತದೆ. ಇದರಿಂದ ಪರಿಸರಕ್ಕೆ ಹಾಗೂ ಜಲ ಸಂಪನ್ಮೂಲಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಈಗಾಗಲೇ ಶರಾವತಿ ನದಿಯು ಹೊನ್ನಾವರ, ತೀರ್ಥಹಳ್ಳಿ,ಸೊರಬ, ಸಾಗರ ಭಾಗದಲ್ಲಿ ಸೇರಿದಂತೆ ಅನೇಕ ಊರಿನ ಜೀವನಾಡಿಯಾಗಿದೆ. ಶರಾವತಿ ನದಿಗೆ ಅಡ್ಡಲಾಗಿ 7 ಅಣೆಕಟ್ಟೆ ಕಟ್ಟಲಾಗಿದ್ದು, ಅಣು ಸ್ಥಾವರ ಘಟಕ ನಿರ್ಮಾಣದ ನದಿ ದಂಡೆಯಲ್ಲಿ 2 ಅಣೆಕಟ್ಟೆ ಇದೆ. ಅಣು ಸ್ಥಾವರ ಘಟಕಕ್ಕೆ ಸುಮಾರು 2 ಲಕ್ಷ ಲೀಟರ್ ನೀರು ಬೇಕಾಗಲಿದ್ದು, ಈ ಯೋಜನೆಗೆ ಬಳಕೆಯಾಗುವ ನೀರು ಮತ್ತೇ ಶರಾವತಿಗೆ ಸೇರುತ್ತದೆ. ಇದರಿಂದ ಅಣೆಕಟ್ಟಿನ ನೀರು ಕಲುಷಿತವಾಗುತ್ತದೆ.

ವಸತಿ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ:
ಅಣು ಸ್ಥಾವರ ಘಟಕ ಯೋಜನೆ ನಿರ್ಮಾಣ ಮಾಡುವ ಜಾಗವು ಅರಣ್ಯ ಇಲಾಖೆ, ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಆ ಪ್ರದೇಶದಲ್ಲಿ 500 ಕ್ಕೂ ಹೆಚ್ಚು ಮನೆಗಳಿರುವ ಜನವಾಸಿಸುವ ಪ್ರದೇಶ ಇದಾಗಿದೆ ಎಂಬುದು ಸ್ಥಳೀಯ ಮೂಲಗಳು ತಿಳಿಸಿದ್ದು, ಅಣು ಸ್ಥಾವರ ಘಟಕ ನಿರ್ಮಾಣ ಹಿನ್ನೆಲೆಯಲ್ಲಿ 500 ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಇನ್ನೂ ಬಗೆಹರಿಯದ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳಿದ್ದರೂ ಅದಾಗಲೆ ಮತ್ತೇ ಸರ್ಕಾರ ಶರಾವತಿ ಜನರ ಮೇಲೆ ಅಣು ಸ್ಥಾವರ ಘಟಕ ನಿರ್ಮಾಣ ಮಾಡುವ ಮೂಲಕ ಅಭಿವೃದ್ದಿ ನೆಪದಲ್ಲಿ ಅವರನ್ನು ಶೋಷಿಸಲು ಮುಂದಾಗುತ್ತಿದೆ.
