ಶಿವಮೊಗ್ಗ, ಮಾ. 30: ತ್ಯಾಗ ಎಂದರೆ ಮಹಾವೀರರು. ಅವರು ತಮ್ಮ ಜೀವನವನ್ನೆ ಸಮಾಜಕ್ಕೆ ಮುಡಿಪಾಗಿಟ್ಟಿದ್ದರು. ಆ ಮೂಲಕ ತಮ್ಮ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿಕೊಟ್ಟರು ಎಂದು ಎಂಎಲ್ ಎ ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಜೈನ ಸಮಾಜದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸೋಮವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವೀರರು ಸಮಾಜಕ್ಕೆ ಬೇಕಾದ ಮಾರ್ಗದರ್ಶನವನ್ನು ಕೊಟ್ಟಿದ್ದಾರೆ. 12 ವರ್ಷ ತಪಸ್ಸು ಮಾಡಿ ಆ ತಪಸ್ಸಿನಿಂದ ಪಡೆದ ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆದಿದ್ದಾರೆ . ಮಹಾವೀರರು ಅವರಿಗಾಗಿ ಬದುಕಲಿಲ್ಲ ಸಮಾಜಕ್ಕಾಗಿ ಬದುಕಿದವರು. ಇಂತಹ ಮಹಾನೀಯರನ್ನು ಅನುಸರಿಸೊಣ ಆ ಮೂಲಕ ಉತ್ತಮ ಜೀವನ ನಡೆಸಲು ಸಾಧ್ಯ. ನಮ್ಮ ಮಕ್ಕಳಿಗೆ ಮಹಾವೀರರ ತತ್ವಗಳನ್ನು ತಿಳಿಸೊಣ ಎಂದರು.
ಸಾಗರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ ಟಿ ಸ್ವಾಮಿ ಉಪನ್ಯಾಸ ನೀಡಿ, ದೇಶದಲ್ಲಿರುವ ಜೈನ ಸಮುದಾಯವು ದೇಶಕ್ಕೆ 32.5 ಲಕ್ಷ ರಷ್ಟು ಆರ್ಥಿಕ ಬೆಂಬಲ ನೀಡುತ್ತಿದೆ. ಉದ್ಯೋಗ ಮತ್ತು ಜಿಎಸ್ ಟಿ ಯಲ್ಲಿ ಅವರ ಕೊಡುಗೆ ಹೆಚ್ಚಿದೆ ಎಂದರು.
ಜೈನರ ಆದರ್ಶ ಮತ್ತು ತತ್ವಗಳನ್ನು ತಿಳಿಯುವುದೇ ಮಹಾವೀರರ ಜಯಂತಿ ಉದ್ದೇಶವಾಗಿದೆ. ಹೃದಯ ಮುಟ್ಟುವ ಸಂದೇಶವನ್ನು ತಲುಪಿಸುವ ಸಂದರ್ಭವೇ ಇಂತಹ ಜಯಂತಿಗಳ ಮಹಾಕಾರ್ಯ. ಮಹಾವೀರರು ನಿರಂತರವಾಗಿ ಸತ್ಯದ ಹುಡುಕಾಟದಲ್ಲಿದ್ದರು. ಮಹಿಳೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಸುಳ್ಳು ತಡೆಯಲು ಮಹಾವೀರ ಅನೇಕ ಶ್ರಮ ಪಟ್ಟರು ಎಂದರು.
ಆತ್ಮ ಸಂಬಂಧಗಳು ಬಹಳ ಮುಖ್ಯವಾಗಿದೆ. ಮಹಾವೀರರು ಮನಸ್ಸಿನಲ್ಲಿದ್ದಾರೆ ಸಾಕಾಗದು ನಾವು ಅವರನ್ನು ಹೃದಯಕ್ಕೆ ಇಳಿಸಿಕೊಳ್ಳಬೇಕು. ಪ್ರಸ್ತುತ ಸಮಾಜದಲ್ಲಿ ಮಹಾವೀರನ ಸಿದ್ದಾಂತಗಳನ್ನು ನಾವು ಅನುಷ್ಠಾನ ಮಾಡಬೇಕು. ವೇದಗಳ ಕಾಲಕ್ಕಿಂತಲೂ ಮೊದಲು ಜೈನ ತತ್ವಗಳು ಚಾಲ್ತಿಯಲ್ಲಿದ್ದವು. ಮಹಾವೀರರು ಸತ್ಯ, ಅಹಿಂಸೆ ಸಾರವನ್ನು ಜಗತ್ತಿಗೆ ಸಾರಿದ್ದಾರೆ. ಬದುಕನ್ನು ಬದುಕಲ್ಲಿಕ್ಕೆ ಬಿಡು ಎಂಬ ಸಂದೇಶವನ್ನು ಕೊಟ್ಟಿದ್ದಾರೆ.
ಮಹಾವೀರರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು , ಜಗತ್ತಿನಲ್ಲಿ ಜೈನಧರ್ಮವು ತ್ಯಾಗದ ಮಾರ್ಗದಲ್ಲಿ ಸಾಗುತ್ತಿದೆ. ಒಳ್ಳೆಯದು ಮಾಡಿದರೆ ಒಳ್ಳೆದಾಗುತ್ತೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತೆ ಎಂದು ಮಹಾವೀರ ಕರ್ಮ ಸಿದ್ದಾಂತವನ್ನು ಸರಳವಾಗಿ ತಿಳಿಸಿದ್ದಾರೆ.
ಮಕ್ಕಳಿಗೆ ಜೈನ ಸಿದ್ದಾಂತವನ್ನು, ಅಹಿಂಸ ಭೋದನೆಯನ್ನು ತಿಳಿಸಿ ಕೊಡಬೇಕು. ಈಗೀನ ಕಾಲದಲ್ಲಿ ಸಂಬಂಧ , ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದೇವೆ ಮಹಾವೀರನ ತತ್ವದ ಮೂಲಕ ಅದನ್ನು ಹಿಂಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್. ಉಮೇಶ್ , ಶ್ವೇತಾಂಬರ ಮತ್ತು ದಿಗಂಬರ ಸಮಾಜ ಮುಖಂಡರುಗಳು ಹಾಜರಿದ್ದರು.
