ಶಿವಮೊಗ್ಗ,ಅ.29: ಬಿಜೆಪಿ ಕಾರ್ಯಕರ್ತರು ಕೇವಲ ಕಾರ್ಯಕರ್ತರಲ್ಲ, ಅವರೇ ಪಕ್ಷದ ನಿಜವಾದ ನಾಯಕರು. ಅವರನ್ನು ವಿಶ್ವಾಸಕ್ಕೆ ಪಡೆದು ಗೌರವಿಸಿದಾಗ ಮಾತ್ರ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠವಾಗಿ ಸಂಘಟಿಸಲು ಸಾಧ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಹಮ್ಮಿಕೊಂಡಿರುವ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ’ ಅಭಿಯಾನದ ಭಾಗವಾಗಿ ಗುರುವಾರ ಬೆಳಗ್ಗೆ ನಗರದ ವಿನೋಬನಗರದಲ್ಲಿರುವ ಬಿಜೆಪಿ ಎಸ್ ಸಿ ಮೋರ್ಚಾ ಉಸ್ತುವಾರಿ ಹಾಗೂ ಭೋವಿ ಸಮಾಜದ ಮುಖಂಡ ವೀರಭದ್ರಪ್ಪ ಪೂಜಾರಿ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
ಮರು ಓದು: ಮೀಸಲಾತಿ ಕಾಯ್ದೆ-ಕೇಂದ್ರಕ್ಕೆ ಒತ್ತಡ ಹಾಕಲು ಸರ್ಕಾರ ಸಿದ್ದ: ಉಗ್ರಪ್ಪ
ಶಿವಮೊಗ್ಗ ಜಿಲ್ಲೆ ಹಿಂದುತ್ವಕ್ಕೆ ಗಟ್ಟಿಯಾದ ನೆಲೆ ಒದಗಿಸಿದ ಪ್ರದೇಶವಾಗಿದೆ. ಬೆಂಗಳೂರು ರಾಜಧಾನಿಯಾಗಿದ್ದರೂ ಶಿವಮೊಗ್ಗಕ್ಕೆ ಹೋಲಿಸಿದರೆ ಅಲ್ಲಿ ಬಿಜೆಪಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಅಲ್ಲಿ ಕಾರ್ಯಕರ್ತರು ನಾಯಕರಂತೆ ಕೆಲಸ ಮಾಡುತ್ತಿದ್ದರೂ, ಅವರ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಸೂಕ್ತ ಗೌರವ ದೊರೆಯಬೇಕು. ಸಮಾಜದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಪಕ್ಷದ ಜವಾಬ್ದಾರಿಯಾಗಿದೆ. ಕಾರ್ಯಕರ್ತರ ವಿಶ್ವಾಸ ಮತ್ತು ಶಕ್ತಿಯನ್ನು ಹೆಚ್ಚಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಬೆಳವಣಿಗೆಗಳು ಹಾಗೂ ಗೊಂದಲಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷದ ರಾಜಕೀಯ ನಡೆಗಳ ಬಗ್ಗೆಯೂ ಟೀಕಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿನ ನಾಲ್ಕು ಸ್ಥಾನಗಳಲ್ಲಿನ ಗೆಲುವು ಪಕ್ಷದ ಕಾರ್ಯಕರ್ತರಲ್ಲಿನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಆ ಮೂಲಕ ಪಕ್ಷದ ಕಾರ್ಯಕರ್ತರು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪಕ್ಷದ ಉದ್ದೇಶಗಳು ಹಾಗೂ ವಿಚಾರಗಳನ್ನು ಜನರಿಗೆ ತಲುಪಿಸುವ ಮೂಲಕ ಜನರೊಂದಿಗೆ ಸಂಪರ್ಕವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಹರಿಕೃಷ್ಣ, ಮೋಹನ್ ರೆಡ್ಡಿ, ಕೆ.ಎನ್. ಜಗದೀಶ್, ವೀರಭದ್ರಪ್ಪ ಪೂಜಾರಿ, ಬಳ್ಳೆಕೆರೆ ಸಂತೋಷ್, ರಾಮು, ಮೂರ್ತಿ, ಲಿಂಗರಾಜು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
