Homeರಾಜಕೀಯಮೀಸಲಾತಿ ಕಾಯ್ದೆ-ಕೇಂದ್ರಕ್ಕೆ ಒತ್ತಡ ಹಾಕಲು ಸರ್ಕಾರ ಸಿದ್ದ: ಉಗ್ರಪ್ಪ

ಮೀಸಲಾತಿ ಕಾಯ್ದೆ-ಕೇಂದ್ರಕ್ಕೆ ಒತ್ತಡ ಹಾಕಲು ಸರ್ಕಾರ ಸಿದ್ದ: ಉಗ್ರಪ್ಪ

Spread the love

ಶಿವಮೊಗ್ಗ,ಅ.29: ರಾಜ್ಯದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಕಾಯ್ದೆಯ ನಿಬಂಧನೆಗಳನ್ನು ಹೈಕೋರ್ಟ್ ರದ್ದುಪಡಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದರು.

ಮರು ಓದು: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗಿದೆ: ಛಲವಾದಿ ನಾರಾಯಣಸ್ವಾಮಿ

2022 ರಿಂದ 2025 ರವರೆಗೆ ಈ ಕಾಯ್ದೆಯಡಿ ಅನೇಕರು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು, ನರ್ಸಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದು, ವಿವಿಧ ಇಲಾಖೆಗಳಲ್ಲಿಯೂ ಉದ್ಯೋಗ ಪಡೆದಿದ್ದಾರೆ. ಸುಮಾರು 72 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಧಾನಮಂತ್ರಿಗಳ ಮೇಲೆ ಒತ್ತಡ ತರಬೇಕು. ತಮಿಳುನಾಡಿನ ಶೇ.69ರ ಮೀಸಲಾತಿ ಕಾಯ್ದೆಗೆ ನೀಡಿರುವ ಮಾದರಿಯಲ್ಲಿ ಕರ್ನಾಟಕದ ಕಾಯ್ದೆಗೂ ಸಂವಿಧಾನಾತ್ಮಕ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಅಂದಿನ ರಾಜ್ಯ ಸರ್ಕಾರ 2023 ರ ಮಾರ್ಚ್ 23 ರಂದು ಹಾಗೂ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಏಪ್ರಿಲ್ 16ರಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ವಿಧಾನಮಂಡಲದ ಉಭಯ ಸದನಗಳಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪ್ರಧಾನ ಮಂತ್ರಿಗಳು ನವೆಂಬರ್ 5ರಂದು ಬೆಂಗಳೂರಿಗೆ ಭೇಟಿ ನೀಡುವ ಮುನ್ನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ ತೀವ್ರಗೊಳಿಸಿ, ಪ್ರಧಾನಮಂತ್ರಿಗಳ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

‘ನ್ಯಾಯಾಲಯಗಳ ಬಗ್ಗೆ ಗೌರವವಿದೆ. ಸಮಾಜದಲ್ಲಿ ಆಳುವ ವರ್ಗ ಮತ್ತು ಶೋಷಿತ ವರ್ಗಗಳಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇಲ್ಲದಂತಾಗಿದೆ. ಹೈಕೋರ್ಟ್ ಆದೇಶ ಮರಣಶಾಸನದಂತಿದ್ದು, ಸಂವಿಧಾನಬಾಹಿರವಾಗಿದೆ. ಇದು ಬಿಜೆಪಿಯ ಬೇಬಿ ಇದ್ದಂತೆ’ ಎಂದು ಟೀಕಿಸಿದರು.

ನಟ ಸುದೀಪ್ ವಿರುದ್ಧದ ಹೇಳಿಕೆ ವೈಯಕ್ತಿಕ ಟೀಕೆಯಲ್ಲ. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟಕ್ಕೆ ಅವರೂ ಕೈಜೋಡಿಸಬೇಕು ಎಂಬುದು ತಮ್ಮ ಮಾತಿನ ಉದ್ದೇಶವಾಗಿತ್ತು ಎಂದು ಸ್ಪಷ್ಟ ಪಡಿಸಿದರು.

ನಿವೃತ್ತ ಎಂಜಿನಿಯರ್ ಹನುಮಂತ ರಾಯಪ್ಪ, ಸಮಾನ ಮನಸ್ಕರ ವೇದಿಕೆಯ ಕಾರ್ಯಾಧ್ಯಕ್ಷ ನರಸಿಂಹರಾಜು, ಲಕ್ಷ್ಮಣಪ್ಪ, ರಾಜಪ್ಪ, ವೀರಪ್ಪ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments