ಕೊಲೆ ಯತ್ನ : ಮೂವ್ವರಿಗೆ ಜೈಲು ಶಿಕ್ಷೆ
ಭದ್ರಾವತಿ : ಇಲ್ಲಿಗೆ ಸಮೀಪದ ಕೊಮಾರನಹಳ್ಳಿಯ ರವಿನಾಯ್ಕ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ನಡೆಸಿದ ನಾಲ್ವರು ಆರೋಪಿಗಳಿಗೆ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನೆನ್ನೆ ತೀರ್ಪು ನೀಡಿದೆ.
ದಿನಾಂಕ:3/6/2021 ರಂದು ರಾತ್ರಿ ಕೊಮರನಹಳ್ಳಿ ತಾಂಡದ ಶರತ್, ವಿನಯ್ ಕುಮಾರ್, ಸರೋಜಾಬಾಯಿ, ಮತ್ತು ಜಯಾಬಾಯಿ ಅವರುಗಳು ಅದೇ ತಾಂಡಾದ ರವಿನಾಯ್ಕ ಎಂಬಾತನ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡುವ ಯತ್ನ ನಡೆಸಿದ್ದರು. ಇದೇ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ರಾಜಾನಾಯ್ಕ ಎಂಬುವರಿಗೂ ಶರತ್ ಚಾಕು ಇರಿದು ಗಾಯಗೊಳಿಸಿದ್ದನು. ಈ ಬಗ್ಗೆ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದು ಅಂದಿನ ಎಎಸ್ ಐ ತ್ಯಾಗರಾಜ್ ಆರೋಪಿಗಳ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಮೊದಲ ಆರೋಪಿ ಶರತ್ ಗೆ 8 ವರ್ಷ ಜೈಲು ಶಿಕ್ಷೆ, 2.31 ಲಕ್ಷ ರೂ ದಂಡ ವಿಧಿಸಿದ್ದಾರೆ. ಉಳಿದ ಮೂವ್ವರ ಆರೋಪಿಗಳಲ್ಲಿ ಜಯಬಾಯಿ ಅವರು ಮೃತಪಟ್ಟಿದ್ದು, ವಿನಯ್ ಕುಮಾರ್, ಸರೋಜಾಬಾಯಿ ಅವರಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ, 62 ಸಾವಿರ ರೂ. ದಂಡ ವಿಧಿಸಿದೆ.
