ಬೆಂಗಳೂರು,ಸೆ.17: ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಿ, ಅವರ ಜೀವನ ಮತ್ತು ಹೋರಾಟಗಳನ್ನು ತಿಳಿದುಕೊಂಡಿರುವವರು ಅವರ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಅವರು ಪತ್ರಕರ್ತ ಎನ್.ರವಿಕುಮಾರ್ ಟೆಲೆಕ್ಸ್ ಅವರು ಬರೆದ ” ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ “ ಕಿರು ಹೊತ್ತಿಗೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಡುಗಡೆ ಮಾಡಿ ಮಾತನಾಡಿದರು.
ಗಮನಿಸಿ: ಸಾಮಾಜಿಕ ನ್ಯಾಯಕ್ಕೆ ಮಾಧ್ಯಮ ಧ್ವನಿಯಾಗಲಿ: ಕೆ ಹೆಚ್ ಮುನಿಯಪ್ಪ
1949ರ ನವೆಂಬರ್ 25ರಂದು ಸಂವಿಧಾನ ಅಂಗೀಕಾರಕ್ಕೂ ಮುನ್ನ ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಅಂಬೇಡ್ಕರ್ ಅವರು ಅಸಮಾನತೆ ಮುಂದುವರಿದರೆ, ಅದರ ನೋವನ್ನು ಅನುಭವಿಸುವ ಜನರು ಪ್ರಜಾಪ್ರಭುತ್ವದ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದರು ಎಂದು ಹೇಳಿದರು.
ಸಂವಿಧಾನವನ್ನು ವಿರೋಧಿಸಿದವರು ಹಾಗೂ ಅಸ್ಪೃಶ್ಯತೆಯನ್ನು ಪ್ರತಿಪಾದಿಸಿದವರೊಂದಿಗೆ ಕೇವಲ ಸ್ವಾರ್ಥಕ್ಕಾಗಿ ಕೈಜೋಡಿಸುವುದು ಸರಿಯಲ್ಲ. ಮನುಸ್ಮೃತಿ ಹಾಗೂ ಮನುವಾದದ ಪರವಾಗಿರುವವರೊಂದಿಗೆ ಸೇರಿಕೊಂಡು ಸಾಮಾಜಿಕ ಬದಲಾವಣೆ ತರಲು ಸಾಧ್ಯವಿಲ್ಲ. ಒಬ್ಬರಿಗೆ ಸ್ಥಾನಮಾನ ಸಿಗಬಹುದು, ಶಾಸಕರಾಗಬಹುದು, ರಾಜ್ಯಸಭಾ ಸದಸ್ಯರಾಗಬಹುದು ಅಥವಾ ಲೋಕಸಭಾ ಸದಸ್ಯರಾಗಬಹುದು. ಆದರೆ ಇದರಿಂದ ಸಮಾಜದಲ್ಲಿ ಮೂಲಭೂತ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಇಷ್ಟು ವರ್ಷಗಳಾದರೂ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದರು.
ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ. ಆದರೆ ಸಾಮಾಜಿಕ ಬದಲಾವಣೆಯ ದಾರಿಯಲ್ಲಿ ನಡೆಯುವಪ್ರಯತ್ನ ಮಾಡಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಇಲ್ಲದಿದ್ದರೆ ತಾವು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಲು ಸಾಧ್ಯವಾಗಿರುವುದಕ್ಕೂ ಸಂವಿಧಾನವೇ ಕಾರಣ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿರುವುದು ಸಂವಿಧಾನ ಎಂದು ಹೇಳಿದರು.
ತಾವು 2013ರಿಂದ 2018ರವರೆಗೆ ಹಾಗೂ 2023ರಿಂದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಕಾಲ ಸಾಮಾಜಿಕ ಸಮಾನತೆಯ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಿರುವುದಾಗಿ ತಿಳಿಸಿದರು. ಇದರಿಂದ ಸಂಪೂರ್ಣ ಬದಲಾವಣೆ ಆಗಿದೆ ಎಂದು ಹೇಳಲಾಗದು. ಆದರೆ ಆ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗಾಗಿ ಎಸ್‌ಸಿ ಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಕೇಂದ್ರ ಸರ್ಕಾರದಲ್ಲೂ ಜಾರಿಗೆ ತರಬೇಕಾಗಿದೆ. ಜನರು ಮತ ನೀಡಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದಾರೆ. ಕೇಂದ್ರದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಏಕೆ ಜಾರಿಯಾಗಿಲ್ಲ ಎಂಬುದನ್ನು ಪ್ರಶ್ನಿಸಬೇಕು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಇಂತಹ ಕಾಯ್ದೆ ಜಾರಿಯಲ್ಲಿದೆ ಎಂದು ಹೇಳಿದರು.
ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ರೂಪಿಸುವಂತೆ ಅವರಿಗೆ ಸೂಚಿಸಿ, ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ಪ್ರಸ್ತುತ ಕರ್ನಾಟಕದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿಯಲ್ಲಿ ಸುಮಾರು 44 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತಿದೆ. ರಾಜ್ಯದ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಇರಬೇಕೆಂಬ ನಿಯಮದಂತೆ ಈ ಅನುದಾನ ಮೀಸಲಿಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಂಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಸಂದರ್ಭದಲ್ಲಿ ರತ್ನಪ್ರಭಾ ಸಮಿತಿಯ ವರದಿ ತರಿಸಿ, ದೇಶದಲ್ಲೇ ಮೊದಲ ಬಾರಿಗೆ ಕಾನೂನು ರೂಪಿಸುವ ಮೂಲಕ ಮುಂಬಡ್ತಿ ಮೀಸಲಾತಿಯನ್ನು ರಕ್ಷಿಸಿದ ರಾಜ್ಯ ಕರ್ನಾಟಕವಾಗಿದೆ ಎಂದುಹೇಳಿದರು.
ಯಾವುದೇ ಹಕ್ಕುಗಳು ಸ್ವಯಂಚಾಲಿತವಾಗಿ ದೊರೆಯುವುದಿಲ್ಲ. ಹಕ್ಕುಗಳಿಗಾಗಿ ಒತ್ತಡ ಹೇರಿ, ಹೋರಾಟ ನಡೆಸಬೇಕು. ಸಾಮಾಜಿಕ ಬದಲಾವಣೆಗೆ ಸಂಘಟಿತರಾಗಿ ಪ್ರಯತ್ನಿಸುವುದು ಅಗತ್ಯ ಎಂದು ಕರೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ವೆಂಕಟೇಶ್, ಶಾಸಕರಾದ ಎ. ಆರ್ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, kuwj ಉಪಾಧ್ಯಕ್ಷ ಹೆಚ್ ಬಿ ಮದನ ಗೌಡ, ಉಪಸ್ತಿತರಿದ್ದರು.
ಸಮಾರಂಭದಲ್ಲಿ ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ ಅವರಿಗೆ ” ಬಿ. ರಾಚಯ್ಯ ದತ್ತಿ ಪ್ರಶಸ್ತಿ“, ದೀಪಕ್ ಕೆ ಅವರಿಗೆ ” ಡಾ. ಬಿ. ಆರ್ ಅಂಬೇಡ್ಕರ್ ದತ್ತಿ ಪ್ರಶಸ್ತಿ“ ಗುರುಪ್ರಸಾದ್ ಕೆರಗೋಡು ಅವರಿಗೆ ” ಪ್ರೊ. ಬಿ ಕೃಷ್ಣಪ್ಪ ದತ್ತಿ ಪ್ರಶಸ್ತಿ“, ಯತಿರಾಜ್ ಬ್ಯಾಲಹಳ್ಳಿ ಅವರಿಗೆ ” ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿ” ಹಾಗೂ ಸಂಪಾದಕರಾದ ಚಂದ್ರಣ್ಣ, ಕರಿಯಮ್ಮ, ದೇವೇಂದ್ರಪ್ಪ ಕಪನೂರು, ಅನೂಪ್ ಕುಮಾರ್, ಅವರುಗಳಿಗೆ ಸಂಘದ ಗೌರವ ಪ್ರಶಸ್ತಿನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷರಾದ ಚೆಲುವರಾಜು ಅಧ್ಯಕ್ಷತೆ ವಹಿಸಿದ್ದರು.
