ಶಿವಮೊಗ್ಗ , ಮೇ.7 : ಮಹಾನಗರ ಪಾಲಿಕೆಯಲ್ಲಿ ಭಾರೀ ಭ್ರಷ್ಟಾಚಾರವಾಗುತ್ತಿದ್ದು ಅದನ್ನು ತಡೆಗಟ್ಟಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಭ್ರಷ್ಟಾಚಾರಗಳು ಹೆಚ್ಚಾಗುತ್ತಿವೆ. ಹಣಕೊಡದೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಫೈಲುಗಳು ಅಲ್ಲೇ ಉಳಿದುಕೊಳ್ಳುತ್ತಿವೆ. ಯಾರಾದರು ಅಧಿಕಾರಿಗಳು ಮೂರು-ನಾಲ್ಕು ದಿನ ರಜೆ ಹಾಕಿ ಹೋದರೆ ಅವರ ಬದಲು ಬೇರೆಯವರು ಕೆಲಸವನ್ನು ಮಾಡುವುದಿಲ್ಲ, ಅವರೇ ಬರಬೇಕು. ಇದರ ಜೊತೆಗೆ ಪಾಲಿಕೆಯ ಸಮಸ್ಯೆಗಳು ಕೂಡ ಮಿತಿಮಿರಿವೆ. ಅಶುದ್ಧ ಕುಡಿಯುವ ನೀರು ಸರಬರಾಜಾಗುತ್ತಿದೆ. 24 ಗಂಟೆ ಇರಲಿ, ಅರ್ಧಗಂಟೆಯೂ ನೀರು ಬರುವುದಿಲ್ಲ. ವಿದ್ಯುತ್ ದೀಪಗಳದ್ದು ಮತ್ತೊಂದು ಸಮಸ್ಯೆ ಹೀಗಾಗಿ ಪಾಲಿಕೆ ಸಮಸ್ಯೆಗಳ ಆಗರವಾಗಿದೆ ಎಂದರು.
ಗಮನಿಸಿ:ಕೊಲೆ ಯತ್ನ : ಮೂವ್ವರಿಗೆ ಜೈಲು ಶಿಕ್ಷೆ
ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದಲ್ಲಿಯೇ ಆಗಬೇಕೆಂಬುದು ನಮ್ಮ ಪಕ್ಷದ ಒತ್ತಾಯವಾಗಿದೆ. ಯಾವುದೇ ಕಾರಣಕ್ಕೂ ಮಂಗಳೂರಿನಲ್ಲಿ ಆಗುವುದು ಬೇಡ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ವಕೀಲರ ಸಂಘದಿಂದ ಹೈಕೋರ್ಟ್ ಪೀಠಕ್ಕೆ ಹೋರಾಟ ನಡೆಯುತ್ತಿದೆ. ನಾವು ಕೂಡ ಇದಕ್ಕೆ ಬೆಂಬಲ ನೀಡುತ್ತೇವೆ ಎಂದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ದಿವಂಗತ ಬಂಗಾರಪ್ಪನವರ ಹೆಸರಿಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕೇವಲ ಹೆಸರಿಟ್ಟರೆ ಸಾಲದು ಸಚಿವ ಮಧು ಬಂಗಾರಪ್ಪ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಈಗಾಗಲೇ ಗೋವಿಂದಾಪುರದಲ್ಲಿ ಆಶ್ರಯ ಮನೆಗಳು ಇದ್ದರೂ ಕೂಡಾ ಇನ್ನೂ ಹಂಚಿಕೆಯಾಗಿಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, ನಾನು ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಇಡೀ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದೇನೆ. ಮತ್ತು ಜಿಲ್ಲೆ, ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದೇನೆ. ವಿಧಾನಸಭಾ ಕ್ಷೇತ್ರಕ್ಕೂ ಕೂಡ ಸಮಿತಿ ಮಾಡಿದ್ದು ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ವಿವಿಧ ವಿಭಾಗಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಸುಮಾರು 74 ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರಲ್ಲದೆ, ಪಟ್ಟಿ ಬಿಡುಗಡೆ ಮಾಡಿದರು.
ಮುಖ್ಯವಾಗಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ದಾದಾಪೀರ್ ಹಾರ‍್ನಹಳ್ಳಿ, ನರಸಿಂಹ ಗಂಧದ ಮನೆ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್.ತ್ಯಾಗರಾಜ್, ಖಜಾಂಚಿಯಾಗಿ ರಮೇಶ್ ಬಿ.ನಾಯಕ್ ಆಯ್ಕೆಯಾಗಿದ್ದಾರೆ.
ಉಳಿದಂತೆ ಹಿರಿಯ ಉಪಾಧ್ಯಕ್ಷರನ್ನಾಗಿ 11 ಜನರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರನ್ನಾಗಿ 15 ಜನರನ್ನು ನೇಮಕ ಮಾಡಲಾಗಿದ್ದು, ಸುಮಾರು 14 ಜನರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ 10 ಜನರ ನೇಮಕವಾಗಿದೆ. ಕಾರ್ಯದರ್ಶಿಯಾಗಿ ಇಬ್ಬರನ್ನು ನೇಮಕ ಮಾಡಲಾಗಿದ್ದು, ಇದರ ಜೊತೆಗೆ ವಿವಿಧ ವಿಭಾಗಗಳ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರನ್ನಾಗಿ ಸುಮಾರು 13 ಜನರನ್ನು ನೇಮಕ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೀತಾಸತೀಶ್, ಕಡಿದಾಳ್ ಗೋಪಾಲ್, ಹೆಚ್.ಆರ್.ತ್ಯಾಗರಾಜ್, ರಾಕೇಶ್ ಡಿಸೋಜಾ, ಗಂಧದಮನೆ ನರಸಿಂಹ, ಹೆಚ್.ಎಂ.ಸಂಗಯ್ಯ, ಉಮಾಶಂಖರ ಉಪಾಧ್ಯಾಯ, ಲೋಹಿತ್, ಪ್ರಜ್ವಲ್ ಸೇರಿದಂತೆ ಮೊದಲಾದವರಿದ್ದರು.
