ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.15
ಹೊನ್ನಾಳಿಯ ದುರ್ಗಿಪಟ್ಟಣದ ಶ್ರೀ ದುರ್ಗಮ್ಮ ದೇವಿ ಮತ್ತು ಓಂ ಗಣೇಶ ಸೇವಾ ಸಮಿತಿ ಆಡಳಿತ ಮಂಡಳಿಯು 3.5 ಲಕ್ಷ ಮೌಲ್ಯದ ಬೆಳ್ಳಿ ಆಭರಣವನ್ನು ಕಾಣಿಕೆ ನೀಡುವ ಈ ಬಾರಿ ಗಣೇಶನನ್ನು ವಿನೂತವಾಗಿ ಬರಮಾಡಿಕೊಂಡಿದ್ದಾರೆ.

ದುರ್ಗಿಪಟ್ಟಣದ ಶ್ರೀ ದುರ್ಗಮ್ಮ ದೇವಿ ಮತ್ತು ಓಂ ಗಣೇಶ ಸೇವಾ ಸಮಿತಿ ಆಡಳಿತ ಮಂಡಳಿಯು ಅನಗತ್ಯ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿ ಉಳಿಸಿದ ಹಣ ಹಾಗೂ ಸಮಿತಿಯ ಸದಸ್ಯರ ವಂತಿಕೆಯನ್ನು ಕ್ರೋಢೀಕರಿಸಿ, ಶ್ರೀ ಗಣಪತಿಗೆ ಸುಮಾರು 3.5 ಲಕ್ಷಕ್ಕೂ ಹೆಚ್ಚು ಮೌಲ್ಯದ 1.5 ಕೆ.ಜಿ. ತೂಕದ ಆಕರ್ಷಕ ಬೆಳ್ಳಿ ಕಿರೀಟ, ಹಸ್ತ ಹಾಗೂ ಆಯುಧಗಳನ್ನು ಸಮರ್ಪಿಸಿದ್ದು, ಈ ಬೆಳ್ಳಿಯ ಆಭರಣಗಳನ್ನು ಸೇವಾ ಸಮಿತಿಯವರು ಪ್ರಸಿದ್ಧ ಹೊನ್ನಾಳಿ ಹಿರೇಕಲ್ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿ ಗಣೇಶ ಮೂರ್ತಿಗೆ ಹಾಕಲಾಗಿದೆ.
ಮೆರವಣಿಗೆ ರದ್ದು, ಸರಳ ಆಚರಣೆ:

ಕಳೆದ 40 ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿರುವ ಸಮಿತಿಯು, ಈ ಬಾರಿ ತಾಲೂಕಿನಲ್ಲಿ ಎದುರಾಗಿರುವ ಮಳೆ ಅಭಾವ ಹಾಗೂ ಬರಗಾಲದ ಪರಿಸ್ಥಿತಿ ಉಂಟಾಗಿರುವುದರಿಂದ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ವೈಭವೋಪೇತ ಧ್ವನಿವರ್ಧಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಸಾರ್ವಜನಿಕರಿಂದ ಶ್ಲಾಘನೆ:
ಕ್ಷಣಿಕ ಆಡಂಬರದ ಕಾರ್ಯಕ್ರಮಗಳಿಗಿಂತ ದೇವರಿಗೆ ಶಾಶ್ವತ ಆಸ್ತಿಯಾಗುವ ಹಾಗೂ ಭಕ್ತಿಯ ಸಂಕೇತವಾಗುವ ಕೊಡುಗೆ ನೀಡಿದ ದುರ್ಗಿಗುಡಿ ಯುವಕರ ಈ ಜನಪರ ನಿರ್ಧಾರಕ್ಕೆ ಪಟ್ಟಣದ ಹಿರಿಯರು, ವರ್ತಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮೂರನೇ ದಿನ ಗಣೇಶಮೂರ್ತಿ ವಿಸರ್ಜನೆ:
ಮೂರು ದಿನಗಳ ಕಾಲ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಗಳು ನೆರವೇರಲಿದ್ದು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಸರಳವಾಗಿ ವಿಜೃಂಭಣೆ ಇಲ್ಲದೆ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
