ಶಿವಮೊಗ್ಗ,ಸೆ.22: ಸಂವಿಧಾನದ ಜಾತ್ಯಾತೀತ ಆಶಯದಂತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆಯನ್ನು ನೆರವೇರಿಸುತ್ತಿದ್ದು, ಇದು ಸಂವಿಧಾನಕ್ಕೆ ಸಂದ ಗೌರವವಾಗಿದೆ. ಸುಪ್ರೀಂ ಕೋರ್ಟ್ನ ಇಂತಹ ನಿರ್ಧಾರದಿಂದ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹರ್ಷ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಮಾಧ್ಯಮಗಾರರೊಂದಿಗೆ ಮಾಡಿನಾಡಿದ ಅವರು, ನಾಡಹಬ್ಬ ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಸರ್ಕಾರ ಇವರನ್ನು ಆಯ್ಕೆ ಮಾಡಿದ ದಿನದಿಂದ ವಿರೋಧ ಪಕ್ಷದವರು ಒಂದು ಕೋಮು ದೃಷ್ಟಿಯಿಂದ ಅವರನ್ನು ತಿರಸ್ಕರಿಸುತ್ತಾ, ಅಲ್ಲಗೆಳೆಯುತ್ತಾ ಬಂದಿದ್ದಾರೆ. ಅಲ್ಲದೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದೆಂದು ತಡೆ ತರಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನು ಹಾಕಿದ್ದರು. ಆದರೆ ಈಗ ಅರ್ಜಿಗಳೆಲ್ಲಾ ವಜಾ ಆಗಿದೆ. ಸುಪ್ರೀಂ ಕೋರ್ಟ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಎತ್ತಿ ಹಿಡಿದಿದೆ. ಆ ಮೂಲಕ ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಇದ್ದ ಅಡೆತಡೆಗಳನ್ನು ತೆಗೆದು ಹಾಕಿ ಉದ್ಘಾಟನೆಗೆ ಅವಕಾಶ ನೀಡಿದೆ ಎಂದರು.
ಜಾತಿ ಗಣತಿ ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿ, ವಿರೋಧ ಪಕ್ಷದವರು ಇರುವುದೇ ವಿರೋಧ ಮಾಡಲಿಕ್ಕೆ ಅದಕ್ಕೆ ಅವರು ಜಾತಿ ಗಣತಿಯನ್ನು ವಿರೋಧಿಸುತ್ತಿದ್ದಾರೆ. ಹಾಗಾದರೆ ಮೋದಿ ಸರ್ಕಾರವೂ ಜಾತಿ ಜನ ಗಣತಿ ಮಾಡಲು ಮುಂದಾಗಿದ್ದಾರಲ್ಲಾ ಅದನ್ನ ಯಾಕೆ ವಿರೋಧಿಸುತ್ತಿಲ್ಲ?. ನಮ್ಮ ಸರ್ಕಾರದ ಗ್ಯಾರಂಟಿಯನ್ನು ಕಾಪಿ ಮಾಡಿದ್ದಂತೆ ಸಮೀಕ್ಷೆಯನ್ನು ಕೂಡ ಕೇಂದ್ರ ಸರ್ಕಾರ ಅನುಸರಿಸಲು ಮುಂದಾಗುತ್ತಿದೆ. ಇವೆಲ್ಲನ್ನೂ ಒಪ್ಪುವ ನೀವು ನಮ್ಮ ಸರ್ಕಾರವನ್ನು ಯಾಕೆ ವಿರೋಧಿಸುತ್ತಿದ್ದಿರಾ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಸರ್ಕಾರ ಮಾಡುತ್ತಿರುವುದು ಜಾತಿ ಜನ ಗಣತಿ ಆದರೆ ನಾವು ರಾಜ್ಯದಲ್ಲಿ ಮಾಡುತ್ತಿರುವ ಜಾತಿ ಜನ ಗಣತಿ ಅಲ್ಲ. ಇದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ. ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದಾರೆ. ಜನರು ವಿರೋಧ ಪಕ್ಷಗಳ ಮಾತುಗಳಿಗೆ ಕಿವಿಕೊಡದೆ ಸಮೀಕ್ಷೆಗೆ ಸಹಕರಿಸಬೇಕು, ಸರಿಯಾದ ಮಾಹಿತಿ ನೀಡಬೇಕು. ಇದರಿಂದ ನಿಮ್ಮ ಹಕ್ಕಗಳನ್ನು ಪಡೆದುಕೊಳ್ಳಲು ಒಂದು ವ್ಯವಸ್ಥೆ ನಿರ್ಮಾಣವಾದಂತೆ ಆಗುತ್ತದೆ ಎಂದರು.
ಸಮೀಕ್ಷೆಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ರೀತಿ ತಯಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 5.50 ಲಕ್ಷ ಮನೆಗಳಿದ್ದು, ಸಮೀಕ್ಷೆಗೆಂದು 3500 ಶಿಕ್ಷಕರನ್ನು ನೇಮಿಸಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಿದ್ದು, ಸಮೀಕ್ಷೆಗೆ ಇಲಾಖೆಯಿಂದ 1.60 ಲಕ್ಷ ಶಿಕ್ಷಕರನ್ನು ನೇಮಿಸಲಾಗಿದೆ. ಇಲಾಖೆ ಸೂಚನೆಯಂತೆ ರಾಜ್ಯಾದ್ಯಾಂತ ನಮ್ಮ ಶಿಕ್ಷಕರು ಸಮೀಕ್ಷೆಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಸಂಭವಿಸುತ್ತಿರುವ ಕೊಳೆ ರೋಗದ ಹಾಗೂ ಬರಗಾಲ ಕುರಿತಾಗಿ ಅನುದಾನ ಕೇಳಲು ದೆಹಲಿಗೆ ನಮ್ಮ ನಾಯಕರೆಲ್ಲಾ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅದನ್ನು ಕೊಡಲು ಕೇಂದ್ರ ಸರ್ಕಾರ ಹಿಂದೆಟ್ಟು ಹಾಕಿತ್ತು. ನಂತರ ಸುಪ್ರೀಂ ಕೋರ್ಟ್ ತಾಕೀತು ಮಾಡಿದಾಗ ನೀಡಿದರು. ನಮ್ಮ ರಾಜ್ಯದಿಂದ ಅಧಿಕ ತೆರಿಗೆ ಹಣವನ್ನು ಕೇಂದ್ರ ಸರ್ಕಾರಕ್ಕೆ ಕಟ್ಟುತ್ತಿದ್ದೇವೆ ಅದರ ಪಾಲು ಇನ್ನೂ ಬಂದಿಲ್ಲ. ರಾಜ್ಯದ ಸಂಸದರು ಇದನ್ನು ಕೇಳದೆ ಮೂಕರಾಗಿದ್ದಾರೆ ಎಂದು ಟೀಕಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 83000 ಎಕರೆ ಅಡಿಕೆ ಬೆಳೆ ನಾಶವಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ವರದಿ ಕೊಟ್ಟಿದ್ದಾರೆ. 80 ಕೋಟಿ ರೂ. ನಮ್ಮ ಶಿವಮೊಗ್ಗ ಬರುವ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೂ ಈ ಬಗ್ಗೆ ಮನವಿ ಮಾಡಲಾಗಿದೆ ಎಂದರು.
