’ಮಧುಗೆ ತಂದೆಯ ಯೋಗ್ಯತೆ ಬಂದಿಲ್ಲ’
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮತ್ತು ಬಿಜೆಪಿ ಶಾಸಕ ಆರಗಜ್ಞಾನೇಂದ್ರ ಅವರ ನಡುವಿನ ಮಾತಿನ ಯುದ್ಧ ಮುಂದುವರೆದಿದ್ದು, ಮಧುಬಂಗಾರಪ್ಪ ಅವರಿಗೆ ಅವರ ತಂದೆ (ಬಂಗಾರಪ್ಪ ) ಅವರ ಯೋಗ್ಯತೆ ಬಂದಿಲ್ಲ. ಮೊದಲು ಅವರು ತಂದೆಯ ಆದರ್ಶಗಳನ್ನು ಪಾಲಿಸುವುದನ್ನು ಕಲಿಯಲಿ ಎಂದು ಶಾಸಕ ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.
ಆರಗ ಜ್ಞಾನೇಂದ್ರ ಬಚ್ಚಾ ಎಂದು ಸಚಿವ ಮಧುಬಂಗಾರಪ್ಪನವರು ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಆರಗ ಜ್ಞಾನೇಂದ್ರ, ಮಧುಬಂಗಾರಪ್ಪ ತಂದೆಯ ಹೆಸರಿನ ಬಲದಿಂದ ರಾಜಕಾರಣಕ್ಕೆ ಬಂದವರು. ಆದರೆ ತಂದೆಯ ನಡವಳಿಕೆ ಅವರಲ್ಲಿ ಬರಲಿಲ್ಲ. ಅವರ ಅಂತಸ್ತಿನಲ್ಲೇ ಮಾತನಾಡಬೇಕಿತ್ತು. ನಾನೇನು ಅವರ ಟೀಕೆಗೆ ಪ್ರತಿಕ್ರಯಿಸಲ್ಲ. ಮಧು ಬಂಗಾರಪ್ಪನವರ ರಕ್ತದಲ್ಲೇ ರಾಜಕಾರಣ ಬಂದಿದೆ. ನಾವೆಲ್ಲಾ ಸೊನ್ನೆಯಿಂದ ರಾಜಕಾರಣಕ್ಕೆ ಬಂದವರು. ಅತ್ಯಂತ ಕೀಳುಮಟ್ಟದ ಟೀಕೆಗೆ ರಾಜಕಾರಣಿಗಳು ಇಳಿಯಬಾರದು ಎಂದರು.
