ಶಿವಮೊಗ್ಗ, ಏ.6: ಸ್ನೇಹ ಮತ್ತು ಸಾಮರಸ್ಯವನ್ನು ಗಲ್ಲಿ (ಬಾಕ್ಸ್) ಕ್ರಿಕೆಟ್ ಹೆಚ್ಚಿಸುವಲ್ಲಿ ಜನಪ್ರಿಯವಾಗಿದೆಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ಗೋಪಾಲಗೌಡ ಬಡಾವಣೆಯಲ್ಲಿರುವ ಚಂದನಾ ಆರೋಗ್ಯ ಪಾರ್ಕ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ–೩ಕ್ಕೆ ಚಾಲನೆ ನೀಡಿ ಮಾತನಾಡಿದರು.
ಐಪಿಎಲ್ ದೇಶದ ಗಮನ ಸೆಳೆಯುತ್ತಿದ್ದರೆ ಚಂದನ ಪಾರ್ಕ್ ನಲ್ಲಿ ಈ ಹೊನಲು ಬೆಳಕಿನ ಬಾಕ್ಸ್ ಕ್ರಿಕೆಟ್ ಜಿಲ್ಲೆಯ ಗಮನ ಸೆಳೆಯುತ್ತಿದೆ. ಯುವಕರು ಮಾತ್ರವಲ್ಲದೆ ವಯಸ್ಕರೂ ಕೂಡಾ ಈ ಗಲ್ಲಿ ಕ್ರಿಕೆಟ್ ಆಡಬಹುದಾಗಿದೆ. ಪಾರ್ಕ್ ನ ಬೆಳೆಯರು 60 ವರ್ಷ ಮೇಲ್ಪಟ್ಟ ಹಿರಿಯರನ್ನೂ ಕೂಡಾ ಈ ಬಾಕ್ಸ್ ಕ್ರಿಕಟ್ ಆಡುವಂತೆ ಪ್ರೇರೀಪಿಸಿದ್ದು ಸ್ವಾಗತಾರ್ಹವಾಗಿದೆ ಎಂದರು.
ಇಂತಹ ಕ್ರೀಡೆಗಳು ಸದಾ ನಗು, ಸಂತೋಷ, ಸಾಮರಸ್ಯ, ಜೀವನ ಉತ್ಸಾಹ ಮತ್ತು ಲವಲವಿಕೆಯನ್ನು ನೀಡುತ್ತದೆ. ಅದರಲ್ಲೂ ಪಕ್ಷಾತೀತವಾಗಿರುವುದರಿಂದ ಇವು ನಮ್ಮ ನಮ್ಮಲ್ಲಿ ಸೌಹಾರ್ಧತೆಯನ್ನು ಉಂಟುಮಾಡುತ್ತದೆ. ವಯಸ್ಸನ್ನು ಕಡಿಮೆ ಮಾಡಿ ಆಯಸ್ಸು ಹೆಚ್ಚಿಸುತ್ತದೆ. ಅಷ್ಟೆ ಅಲ್ಲದೆ ಉತ್ತಮ ಆರೋಗ್ಯ ದೊರೆಯಲು ಕೂಡಾ ಕಾರಣವಾಗುತ್ತದೆ ಎಂದರು.
ಪಾರ್ಕ್ ಸದಸ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ಜಿ.ಡಿ.ಮಂಜುನಾಥ್, ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಬ್ಯಾಟಿಂಗ್ಗೆ ಬೌಲಿಂಗ್ ಮಾಡುವ ಮೂಲಕ ಪಂದ್ಯ ಉದ್ಘಾಟಿಸಿ ಮಾತನಾಡಿ, ವಯಸ್ಕರೂ ಆಡಬಹುದಾದ ಆಟ ಇದು. ಇಲ್ಲಿನ ವಯಸ್ಸಿನ ಬೇಧವಿಲ್ಲ. ಇದೊಂದು ಸ್ನೇಹ ಸಾಮರಸ್ಯಗಳ ಕಣಜವೇಆಗಿದೆ. ಮುಂದಿನ ದಿನಗಳಲ್ಲಿ ಬಾಕ್ಸ್ ಕ್ರಿಕೆಟ್ ಕೂಡಾ ವಿಜೃಂಭಿಸಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಂದನ ಪಾರ್ಕ್ ನ ಕಾರ್ಯದರ್ಶಿ ಹಾಗೂ ಸಂಚಾಲಕ ಗುರುರಾಜ್. ಎಲ್, ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಗೋಪಾಲಗೌಡ ಬಡಾವಣೆಯ ಎಲ್ಲಾ ಜನರನ್ನು ಸೌಹಾರ್ದತೆಯಿಂದ ನೋಡುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಇಲ್ಲಿ ಪತ್ರಕರ್ತರು, ಪೊಲೀಸರು ಪಾರ್ಕ್ ನ ವಯಸ್ಕರು, ಯುವಕರು ಹೀಗೆ ಎಲ್ಲರೂ ಕೂಡಾ ಸಂಭ್ರಮದಿಂದ ಕ್ರಿಕೆಟ್ ಆಡಿದ್ದಾರೆ. ನಮ್ಮ ಪಾರ್ಕ್ ರಾಜ್ಯದ ಗಮನ ಸೆಳೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ರಿಕೆಟ್ ವೀಕ್ಷಕರಿಗೂ ಕೂಡಾ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಯಿತು. ಪತ್ರಕರ್ತ ಗಣೇಶ್ ತಮ್ಮಡಿಹಳ್ಳಿ ಸೇರಿದಂತೆ 5 ಜನರಿಗೆ ಕುಕ್ಕರ್ ನೀಡಲಾಯಿತು. ಚಿತ್ರನಟರು ಕೂಡಾ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಆರ್. ರಾಜಶೇಖರ್, ಲಕ್ಷೀಟ್ರ್ಯಾಕ್ಟರ್ ಮಾಲೀಕ ರವೀಂದ್ರ, ಗೆದ್ದವರಿಗೆ ಬಹುಮಾನ ನೀಡಿದರು.
ಈ ವೇಳೆ ಎ.ಹಾಲೇಶಪ್ಪ, ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಗೆಳೆಯರ ಬಳಗದ ಕ್ರೀಡಾ ಕಾರ್ಯದರ್ಶಿ ಜಿ.ಎಸ್.ಶಿವಕುಮಾರ್ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಪಾರ್ಕ್ ನ ಗೌರವಾಧ್ಯಕ್ಷ ಕಲಗೋಡು ರತ್ನಾಕರ್, ಅಧ್ಯಕ್ಷ ಜಯಕುಮಾರ್ ಗೌಡ್ರು, ಉಪಾಧ್ಯಕ್ಷರಾದ ಆರ್. ರಾಜಶೇಖರ್, ಬೋರೇಗೌಡ್ರು, ಖಜಾಂಚಿ ಬಸವರಾಜ್ ಹೆಚ್.ಕೆ., ಪ್ರಮುಖರಾದ ಪ್ರಕಾಶ್ ಸಿ.ಹೆಚ್., ರವಿ ಬಿ.ಆರ್., ರಂಗೇಗೌಡ್ರು, ಹಾಲೇಶಪ್ಪ, ಸುಬ್ರಮಣ್ಯ, ನವಿಲಪ್ಪ, ಶಿವಕುಮಾರ್, ಪ್ರಭಾಕರ್ ಆಶೋಕ್ ,ಸುಧಾಕರ್ ಸೇರಿದಂತೆ ಹಲವರಿದ್ದರು.
ಫಲಿತಾಂಶ : ಜಿಲ್ಲಾ ಮಟ್ಟದ ಈ ಹೊನಲು ಬೆಳಕಿನ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಸಿಸಿ ಎ–ತಂಡ ಮೊದಲ ಬಹುಮಾನ, ಚಂದನ–ಎ ತಂಡ ಎರಡನೇ ಬಹುಮಾನ, ಎಂಸಿಸಿ ಬಿ–ತಂಡ ಮೂರನೇ ಬಹುಮಾನವನ್ನು ಪಡೆಯಿತು. ಹಾಗೆಯೇ ಪೊಲೀಸರು ಮತ್ತು ಪತ್ರಕರ್ತರ ನಡುವೆ ನಡೆದ ಪಂದ್ಯ ಅತ್ಯಂತ ರೋಚಕವಾಗಿದ್ದು ಟೈ ಆಗಿ ನಂತರ ಪೊಲೀಸರ ತಂಡ ಗೆದ್ದಿತು. ಪೊಲೀಸರ ತಂಡದ ನೇತೃತ್ವವನ್ನು ಅರುಣ್ಕುಮಾರ್ ವಹಿಸಿದ್ದರೆ ಪತ್ರಕರ್ತರ ತಂಡದ ನೇತೃತ್ವವನ್ನು ತಮ್ಮಡಿಹಳ್ಳಿ ಗಣೇಶ್ ವಹಿಸಿದ್ದರು.
ಲೆಜೆಂಡರ್ಸ್ ವಯಸ್ಕರ ತಂಡದ ಸ್ಪರ್ಧೆಯಲ್ಲಿ ಜಿ.ಎಸ್.ಶಿವಕುಮಾರ್ ಅವರ ತಂಡ ಪ್ರಥಮ ಬಹುಮಾನ, ಬಸವರಾಜ್ ಹೆಚ್.ಕೆ. ತಂಡ ಎರಡನೇ ಬಹುಮಾನ ಪಡೆದರು.
