ಶಿವಮೊಗ್ಗ, ಏ.9: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನವು ಸೂಫಿಸಂತರ ನಾಡು ಬೀದರ್ ನಗರದಲ್ಲಿ ಏ.11 ಮತ್ತು 12 ರಂದು ನಡೆಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಿಂದ 100 ಕ್ಕೂ ಹೆಚ್ಚು ಪತ್ರಕರ್ತರುಗಳು ಪಾಲ್ಗೊಳ್ಳುತ್ತಿದ್ದು, ವಿಶೇಷವಾಗಿ ಈ ಸಮ್ಮೇಳನದಲ್ಲಿ ಜಿಲ್ಲೆಯ ಮೂವರು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಘದ ರಾಜ್ಯ ಸಮಿತಿ ಸದಸ್ಯಕೆ.ವಿ.ಶಿವಕುಮಾರ್ ತಿಳಿಸಿದರು.
ಗಮನಿಸಿ: ಏ.11 ರಂದು ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ವಿದ್ಯುತ್ ಕೊರತೆ, ಸಂಪೂರ್ಣ ಮಾಹಿತಿ ಇಲ್ಲಿದೆ
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೀದರ್‌ನಲ್ಲಿ ನಡೆಯುತ್ತಿರುವ 40 ನೇ ರಾಜ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ತಮ್ಮ ಹಿರಿಯ ಪತ್ರಕರ್ತರು ಭಾಗವಹಿಸುತ್ತಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಶತಮಾನೋತ್ಸವದ ಕಡೆಗೆ ಹೆಜ್ಜೆ ಇಟ್ಟಿದೆ. ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಮೊದಲ ದೇಣಿಗೆಯಿಂದ ಡಿ.ವಿ.ಗುಂಡಪ್ಪ (ಡಿವಿಜಿ) ಅವರಿಂದ ಸ್ಥಾಪಿತಗೊಂಡ ಮೈಸೂರು ಪತ್ರಕರ್ತರ ಸಂಘವು 1956 ರಲ್ಲಿ ಏಕೀಕರಣದ ಬಳಿಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದಾಗಿ ಕಾರ್ಯನಿರತ ಪತ್ರಕರ್ತರ ಹಿತರಕ್ಷಣೆ ಮತ್ತು ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು.
ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನಗಳನ್ನು ನಡೆಸುವ ಮೂಲಕ ಪತ್ರಕರ್ತರ ಸಮಸ್ಯೆಗಳನ್ನು, ವೃತ್ತಿಪರ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವುದಲ್ಲದೆ. ವೃತ್ತಿ ಕೌಶಲ್ಯದ ಉನ್ನತೀಕರಣಕ್ಕಾಗಿ ಅನೇಕ ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿರುವುದಕ್ಕೆ ವರ್ಷ ಪೂರ್ತಿ ಕೆಯುಡಬ್ಲ್ಯೂಜೆ ಅಂಗಳದಲ್ಲಿ ನಡೆಯುವ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಯು.ಹೆಚ್.ವೈದ್ಯನಾಥ್ ಮಾತನಾಡಿ, ಕೆಯುಡಬ್ಲ್ಯೂಜೆ ಸಮ್ಮೇಳನವು ಪತ್ರಕರ್ತರಿಗೆ ಹಬ್ಬದ ಸಂದರ್ಭವೇ ಆಗಿದೆ. ಎಲ್ಲರೂ ಒಂದೆಡೆ ಸೇರುವುದರ ಜೊತೆಗೆ ಪತ್ರಿಕೋದ್ಯಮದ, ಪತ್ರಕರ್ತರ ಕುರಿತಾದ ಗುಣಾತ್ಮಕ ವಿಚಾರ ಸಂಕಿರಣಗಳು, ಸಮಾಲೋಚನೆಗಳು ಸಮ್ಮೇಳನದ ಭಾಗವಾಗಿವೆ. ಕೆಯುಡಬ್ಲ್ಯೂಜೆ ಕೇವಲ ಸಂಘಟನೆಯಲ್ಲ. ಅದೊಂದು ಭರವಸೆ ಎಂದರು.
ದಶಕಗಳ ಹಿಂದೆ ಪ್ರತಿವರ್ಷ ಒಂದು ದಿನಕ್ಕೆ ಸೀಮಿತವಾಗಿ ನಡೆಯುತ್ತಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನಗಳು ಕಳೆದ 10 ವರ್ಷಗಳಿಂದ ಎರಡು ದಿನಗಳ ಕಾಲ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಸಮ್ಮೇಳನಗಳು ಆಯಾ ಜಿಲ್ಲೆಯ ಪ್ರಗತಿ, ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಸಮ್ಮೇಳನದ್ದಾಗಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ಉಪಾಧ್ಯಕ್ಷರಾದ ದೀಪಕ್ ಸಾಗರ್, ದೇಶಾದ್ರಿ ಹೊಸ್ಮನೆ, ಖಜಾಂಚಿ ಎಸ್.ಆರ್.ರೋಹಿತ್ ಉಪಸ್ಥಿತರಿದ್ದರು.
