ಶಿವಮೊಗ್ಗ ,ಏ.17 : ಸಂವಿಧಾನ ಎನ್ನುವುದು ಈ ದೇಶದ ಡಿಎನ್‌ಎ ಇದ್ದಹಾಗೆ. ಇದನ್ನು ಸ್ಕ್ಯಾನ್ ಮಾಡಿದರೆ ದೇಶದ ಎಲ್ಲಾ ವೈವಿಧ್ಯತೆಗಳ ಅರಿವಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಬಿದ್ಲಗಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರಾಘವೇಂದ್ರ ಕಿಣಿ ಹೇಳಿದರು.
ಅವರು ಇಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಂವಿಧಾನಿಕ ಮೌಲ್ಯಗಳು-ಒಂದು ಪ್ರವೇಶಿಕೆ ಎಂಬ ವಿಶೇಷ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಈ ದೇಶದಲ್ಲಿ ನಾನಾ ಜಾತಿಗಳಿವೆ. ನಾನಾ ಧರ್ಮಗಳಿವೆ. ಪಂಗಡಗಳಿವೆ. ಬಡವ-ಬಲ್ಲಿದರಿದ್ದಾರೆ. ಇವರೆಲ್ಲರನ್ನೂ ಹಿಡಿದಿಡುವ ಶಕ್ತಿ ಎಂದರೆ ಅದು ಸಂವಿಧಾನ ಮಾತ್ರ. ನಮ್ಮ ದಿನನಿತ್ಯದ ಬದುಕನ್ನು ನಡೆಸಲು ಸಂವಿಧಾನವೇ ಪ್ರಮುಖವಾಗುತ್ತದೆ. ಇದರ ಉದ್ದೇಶ ಮತ್ತು ಗುರಿ ಬಹಳಷ್ಟಿದ್ದು ಸಂವಿಧಾನದ ಮೌಲ್ಯಗಳು ಪ್ರಮುಖವಾಗಿ ನಮ್ಮ ಯುವ ಸಮುದಾಯಕ್ಕೆ ತಲುಪಬೇಕಾಗಿದೆ ಎಂದರು.
ಗಮನಿಸಿ: ಇನ್ನು ಕ್ಷಮೆ ಇಲ್ಲ, ಸಮಸ್ಯೆಗಳನ್ನು ಸರಿಪಡಿಸಬೇಕು: ಶಾಸಕರು ಹೇಳಿದ್ಯಾರಿಗೆ
ನಮ್ಮ ಸಂವಿಧಾನವು ಜಗತ್ತಿನಲ್ಲಿಯೇ ಸರ್ವಶ್ರೇಷ್ಠವಾಗಿದೆ. ಇಲ್ಲಿ ಮೂಲಭೂತ ಮೌಲ್ಯಗಳು, ಉದ್ದೇಶಗಳು ಮತ್ತು ತತ್ವಗಳು ಅಡಗಿವೆ. ಇಡೀ ದೇಶದ ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕತೆಯನ್ನು ಎತ್ತಿ ಹಿಡಿದು ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ಇದು ನೀಡುತ್ತದೆ.
1972 ರಲ್ಲಿ ಜಾತ್ಯಾತೀತ ರಾಷ್ಟ್ರವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಭಾರತದ ಸಂವಿಧಾನ ಇಡೀ ದೇಶದ ಅಖಂಡತೆ ಮತ್ತು ದೇಶದ ಸರ್ವೋಚ್ಛ ಕಾನೂನಿನ ತಳಹದಿಯಾಗಿವೆ. ಅದಕ್ಕಾಗಿಯೇ ನಮ್ಮ ಸಂವಿಧಾನವನ್ನು ಪ್ರಜೆಗಳಿಗಾಗಿಯೇ ಅರ್ಪಿಸಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಅವಿನಾಶ್ ಮಾತನಾಡಿ, ಸಂವಿಧಾನದ ಆಶಯಗಳನ್ನು ಸಾರ್ವಜನಿಕ ಬದುಕಿನಲ್ಲಿ ಪಾಲಿಸಬೇಕಾಗುತ್ತದೆ. ಅದು ಪಠ್ಯದ ಒಂದು ಭಾಗವೂ ಹೌದು. ಸಂವಿಧಾನ ಮೌಲ್ಯಗಳೆಂದರೆ ಕೇವಲ ಸಾಂವಿಧಾನಿಕ ತತ್ವಗಳಲ್ಲ. ನಮ್ಮ ದೈನಂದಿನ ಜೀವನದ ಮೌಲ್ಯಗಳಾಗಿವೆ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಮಾಜವಾದ, ಜಾತ್ಯಾತೀತತೆಯ ಜೊತೆಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಾರ್ಗವೂ ಆಗಿದೆ ಎಂದರು.
ನಮ್ಮ ಸಂವಿಧಾನವು ಭಾರತೀಯರಾದ ನಮಗೆ ಸ್ವತಂತ್ರ್ಯವಾಗಿ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಕೊಟ್ಟಿದೆ. ಅದರ ಜೊತೆಗೆ ಎಲ್ಲರಿಗೂ ಸಮಾನವಾಗಿ ಬದುಕುವ ಅವಕಾಶ ನೀಡಿದೆ. ಸಾರ್ವಜನಿಕ ಜೀವನದಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಾದ ಗ್ರಂಥ ಇದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಪ್ರಕಾಶ್ ಮರಗನಳ್ಳಿ, ಲವ ಜಿ.ಆರ್., ಪರಶುರಾಮ್ ಎಂ., ಗಿರೀಶ್ ಕಾರಂತ್, ದೊಡ್ಡನಾಯ್ಕ, ಸಹನಾ ಬಿ. ಸೇರಿದಂತೆ ಹಲವರಿದ್ದರು.
