Homeಜಿಲ್ಲೆಆಳರಸರ ಊರಿನ ‘ಪಂಜುಗಾರ’ ಪತ್ರಕರ್ತ ರವಿಬಿದನೂರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ!

ಆಳರಸರ ಊರಿನ ‘ಪಂಜುಗಾರ’ ಪತ್ರಕರ್ತ ರವಿಬಿದನೂರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ!

Spread the love

ಆಳರಸರ ಊರಿನ ‘ಪಂಜುಗಾರ’ ಪತ್ರಕರ್ತ ರವಿಬಿದನೂರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿ!

ಪತ್ರಕರ್ತ ರವಿಬಿದನೂರಿಗೆ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ನೀಡುವ 2026 ನೇ ಸಾಲಿನ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿಲಭಿಸಿದೆ.
  ಉತ್ತರ ಪ್ರದೇಶದ ರಾಜಕಾರಣದಲ್ಲಿ ‘ಜನ್‌ನಾಯಕ’ (ಜನನಾಯಕ) ಎಂದೇ ಕರೆಯಲ್ಪಟ್ಟ ಕರ್ಪೂರಿ ಠಾಕೂರ್ ಅವರು ಭಾರತದ ಬಹುಜನ ರಾಜಕಾರಣದ ರೂವಾರಿಗಳಲ್ಲಿ ಒಬ್ಬರು. ಹಿಂದುಳಿದ ಹಾಗೂ ಅತಿಹಿಂದುಳಿದ ಜನಜಾತಿಗಳ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅವರು, ಮೀಸಲಾತಿ ರೂಪಿಸುವಲ್ಲಿ ತಮ್ಮ ಸೈದ್ದಾಂತಿಕ ಧೋರಣೆಯ ಮೂಲಕ ಬಹುಜನರ ಪಾಲಿಗೆ ವರವೂ, ಬಲವೂ ಆಗಿದ್ದಾರೆ.
ಇಂತಹ ಜನನಾಯಕ ಕರ್ಪೂರಿ ಠಾಕೂರ್ ಅವರ ಹೆಸರಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ಪ್ರತಿವರ್ಷ ಸಾಧಕ, ಸಮಾಜಮುಖಿ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವ ಮೂಲಕ ಬಹುಜನ ಹಿತ ಕಾಯುವ ಪರಂಪರೆಯನ್ನು ಮುಂದುವರಿಸಿದೆ.
  ರವಿಬಿದನೂರು ಕ್ರಿಯಾಶೀಲ ಪತ್ರಕರ್ತ. ಅಪ್ಪಟ ಗ್ರಾಮೀಣ ಪ್ರತಿಭೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ಬಿದನೂರು(ನಗರ-ಚಿಕ್ಕಪೇಟೆ) ಎಂಬ ಕಟ್ಟಕಡೆಯ ಗ್ರಾಮದಿಂದ ಕನ್ನಡ ಪತ್ರಿಕೋದ್ಯಮಕ್ಕೆ ಬಂದ ರವಿಬಿದನೂರು, ಈ ಹೊತ್ತಿನ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ಪತ್ರಕರ್ತರ ಸಾಲಿನಲ್ಲಿ ಗುರುತಿಸಬಹುದಾದ ವ್ಯಕ್ತಿ.
 ಬಡ ಕುಟುಂಬದ ಭೋಜಭಂಡಾರಿ ದಂಪತಿಗಳ ಮಗ ರವಿ ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮಕ್ಕೆ ಬಂದವರಲ್ಲ. ತಾನು ಬದುಕುತ್ತಿರುವ ಸಮಾಜದ ಸಾಮಾಜಿಕ ತಲ್ಲಣಗಳಿಗೆ ಮದ್ದು ಹುಡುಕಲು, ಇತಿಹಾಸದಲ್ಲಿ ಹೂತುಹೋಗಿದ್ದ ಕೆಳದಿ ಆಳರಸರ ಸಾಮ್ರಾಜ್ಯದ ವೈಭವವನ್ನು ಬೆಳಕಿಗೆ ತರುವುದಕ್ಕಾಗಿ, ಅಣೆಕಟ್ಟುಗಳು ಮತ್ತು ಅಭಿವೃದ್ಧಿಗಳ ಹೆಸರಿನಲ್ಲಿ ಮುಳುಗಿಹೋಗಿದ್ದ ತನ್ನೂರು, ತನ್ನ ಜನರ ಬದುಕು-ಬವಣೆಗಳನ್ನು ಲೋಕಕ್ಕೆ ತೋರಿಸಲು ಬಂದ ’ಪಂಜುಗಾರ’ನಂತೆ ಕಾಣುತ್ತಾರೆ.
  ಒಬ್ಬ ಪ್ರಾಮಾಣಿಕ, ವೃತ್ತಿಪರ ಪತ್ರಕರ್ತನಿಗೆ ಪತ್ರಿಕೋದ್ಯಮ ಸವಾಲಿನ ಬದುಕೇ ಸರಿ. ಒಮ್ಮೆ ಪತ್ರಿಕೋದ್ಯಮಕ್ಕೆ ಬಂದರೆ ಹಿಂತಿರುಗಲು ಸಾಧ್ಯವಿಲ್ಲ. ಉಸುಕಿನಲ್ಲಿ ಕಾಲಿಟ್ಟಂತಾಗಿ ಮತ್ತಷ್ಟು ಆಳಕ್ಕೆ ಇಳಿಯುತ್ತಲೇ ಇರಬೇಕಾಗುತ್ತದೆ. ರವಿಯ ಇಂತಹ ವೃತ್ತಿಪರ ಬದುಕಿಗೆ ಈಗಾಗಲೇ ಎರಡೂವರೆ ದಶಕಗಳು ಕಳೆದಿವೆ.
  ಸದ್ಯ ವಿಜಯವಾಣಿ ಪತ್ರಿಕೆಯ ಹೊಸನಗರ ತಾಲ್ಲೂಕು ವರದಿಗಾರರಾಗಿರುವ ರವಿಬಿದನೂರು ರಾಜ್ಯಮಟ್ಟದ ’’ಕನ್ನಡಪ್ರಭ’ ಕರುನಾಡ ಸಂಜೆ’,  ಸೇರಿದಂತೆ ಶಿವಮೊಗ್ಗ ಜಿಲ್ಲೆಯ ನಾವಿಕ, ನಮ್ಮನಾಡು, ಸೃಷ್ಟಿರಾಜ್ ಟೈಮ್ಸ್ ಮುಂತಾದ ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರಿಕೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ದೃಶ್ಯಮಾಧ್ಯಮಗಳಲ್ಲಿಯೂ ಅನುಭವ ಹೊಂದಿರುವ ಅವರು ’ಸಮಯ ನ್ಯೂಸ್’ ಸೇರಿದಂತೆ ಇಂದಿನ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ‘ಗುಡ್ ಕರ್ನಾಟಕ ಡಾಟ್ ಕಾಂ’ ಸೇರಿದಂತೆ ವೆಬ್ ನ್ಯೂಸ್ ಮಾಧ್ಯಮಗಳನ್ನು ನಡೆಸುತ್ತಿದ್ದಾರೆ.
   ಪತ್ರಕರ್ತನೊಳಗೊಬ್ಬ ಚಳವಳಿಗಾರ ಇರುತ್ತಾನೆ ಎನ್ನುವುದಕ್ಕೆ ರವಿಬಿದನೂರು ಸಾಕ್ಷಿ. ತನ್ನೂರಿನ ನೆಲ, ಜಲ, ಜನರ ಬದುಕಿನ ಪ್ರಶ್ನೆ ಬಂದಾಗ ಪತ್ರಿಕೋದ್ಯಮವನ್ನೇ ಚಳವಳಿಯೆಂದು ಭಾವಿಸಿ ಹೋರಾಡುತ್ತಾರೆ. ಗುರಿ ಮುಟ್ಟುವವರೆಗೂ ಬರೆಯುತ್ತಲೇ ಇರುತ್ತಾರೆ.
   ರಾಜಕೀಯದೊಂದಿಗೆ ಸಂಪರ್ಕ ಇದ್ದರೂ ಸಂಬಂಧದ ಗೊಡವೆಗೆ ಹೋಗುವುದಿಲ್ಲ. ಆದರೆ ರಾಜಕೀಯ ವರದಿಗಾರಿಕೆಯಲ್ಲಿ ವೃತ್ತಿಪರತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸುವ ಸೂಕ್ಷ್ಮಮತಿ. ಸಾಂಸ್ಕೃತಿಕ ವಲಯದ ಆತ್ಮೀಯ ಸಖ ಎಂದೇ ಕರೆಯಲ್ಪಡುವ ಜನರ ನಡುವಿನ ಪತ್ರಕರ್ತ.
  ರವಿಯ ವೃತ್ತಿಪರತೆಗೆ, ಜನಪರ ಪತ್ರಿಕೋದ್ಯಮಕ್ಕೆ ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅನೇಕ ಸಂಘ-ಸಂಸ್ಥೆಗಳ ಪ್ರಶಸ್ತಿ ಹಾಗೂ ಸಮ್ಮಾನಗಳು ಲಭಿಸಿವೆ. ಆದರೆ ಅವು ಎಂದಿಗೂ ಅಹಂಕಾರವನ್ನು ಅವರೊಳಗೆ ಹುಟ್ಟಿಸಿಲ್ಲ. ನಿಸ್ಪೃಹ ಗೆಳೆತನವೇ ರವಿಯ ಬಂಡವಾಳ.
  ಕೇಡು, ಸೇಡುಗಳಿಂದ ತನ್ನನ್ನು ತಾನು ಸದಾ ದೂರವಿಟ್ಟುಕೊಳ್ಳುವುದು ರವಿಗೆ ಕಷ್ಟವೇನಲ್ಲ. ಏಕೆಂದರೆ “ಎಲ್ಲರನ್ನೂ ಪ್ರೀತಿಸುವವರು ಯಾರನ್ನೂ ಕೊಲ್ಲಲು ಬಯಸುವುದಿಲ್ಲ” ಎಂಬ ಬುದ್ಧನ ತಾತ್ವಿಕತೆ ರವಿಯನ್ನು ಸಂತೈಸುತ್ತಿರುವಂತೆ ಕಾಣುತ್ತದೆ.
  ಸಾಮಾಜಿಕ ಸೇವೆಗಳ ಜೊತೆಗೂ ಕೈಜೋಡಿಸುವ ರವಿಯದ್ದು ಅಂತಃಕರಣದ ವ್ಯಕ್ತಿತ್ವ. ತನ್ನ ಸುತ್ತಲಿನ ಜನರ ಕಷ್ಟಗಳಿಗೆ ಮರುಗುವುದು, ಅವುಗಳ ಪರಿಹಾರಕ್ಕಾಗಿ ತನ್ನ ಮಿತಿಯನ್ನೂ ಮೀರಿ ಶ್ರಮಿಸುವುದು ರವಿಯ ದೌರ್ಬಲ್ಯ ಎಂದೇ ಹೇಳಬಹುದು.
   ಅದೇನೇ ಇರಲಿ, ರವಿಬಿದನೂರು ಬೆಂಗಳೂರು ಸೇರಿಕೊಂಡಿದ್ದರೆ ಈ ನಾಡಿನ ಖ್ಯಾತ ವೃತಿಪರ ಪತ್ರಕರ್ತರ ಸಾಲಿನಲ್ಲಿ ಗುರುತಿಸಲ್ಪಡುತ್ತಿದ್ದರು. ಆದರೆ ಹೊಸನಗರ ಎಂಬ ಮುಳುಗಡೆ ಊರಿನ ಮೂಲೆಯಲ್ಲಿ ಕುಳಿತು ಬರೆಯುತ್ತಿದ್ದಾರೆ. ತನ್ನೂರಿನ, ತನ್ನ ಸುತ್ತಮುತ್ತಲಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನೋವು-ನಲಿವುಗಳನ್ನು ಅಧಿಕಾರಸ್ಥರಿಗೆ ಮತ್ತು ಜಗತ್ತಿಗೆ ತೋರಿಸುವ ನೆಲದ ನಂಟು ಅವರನ್ನು ಬಿಡುತ್ತಿಲ್ಲ.
   ಪತ್ರಕರ್ತ ಈ ಸಮಾಜಕ್ಕೆ ಉತ್ತರದಾಯಿಯಾಗಿರಬೇಕು. ಅಂತಹ ಅರಿವಿನಿಂದಲೇ ಬರೆಯುತ್ತಿರುವ ಪತ್ರಕರ್ತ ರವಿಬಿದನೂರು ಅವರು ‘ಕರ್ಪೂರಿ ಠಾಕೂರ್ ಪ್ರಶಸ್ತಿ’ಗೆ ಆಯ್ಕೆಯಾಗಿರುವುದು ಜನಪರ ಪತ್ರಿಕೋದ್ಯಮಕ್ಕೂ, ವೃತ್ತಿಪರ ಪತ್ರಕರ್ತರಿಗೂ ಸಂದ ಗೌರವವಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments