Homeಜಿಲ್ಲೆಮೊದಲ ಹಂತದಲ್ಲಿ ಶಿವಮೊಗ್ಗಕ್ಕಿಲ್ಲ ಸಚಿವ ಸ್ಥಾನ?!

ಮೊದಲ ಹಂತದಲ್ಲಿ ಶಿವಮೊಗ್ಗಕ್ಕಿಲ್ಲ ಸಚಿವ ಸ್ಥಾನ?!

Spread the love

ಮೊದಲ ಹಂತದಲ್ಲಿ ಶಿವಮೊಗ್ಗಕ್ಕಿಲ್ಲ ಸಚಿವ ಸ್ಥಾನ?!

ಬೆಂಗಳೂರು: ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ನಾಳೆ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಮೊದಲ ಹಂತದ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ತೀವ್ರ ಪ್ರಯತ್ನದಲ್ಲಿದ್ದಾರೆ. ಆದರೆ ಹಾಲಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಜಿಲ್ಲೆಯ ಯಾವೊಬ್ಬ ಕಾಂಗ್ರೆಸ್ ಶಾಸಕರಿಗೂ ನಾಳೆ ನಡೆಯುಲಿರುವ ಪ್ರಮಾಣ ವಚನ ಸಂದರ್ಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳು ಕ್ಷೀಣಗೊಳ್ಳತೊಡಗಿವೆ.

ಡಿ ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಮಧುಬಂಗಾರಪ್ಪ ಅವರು ಡಿ ಕೆ ಶಿವಕುಮಾರ್ ಸಂಪುಟದಲ್ಲೂ ಮುಂದುವರೆಯುವ ಪ್ರಯತ್ನದಲ್ಲಿದ್ದರೆ, ಅದಕ್ಕೆ ಪೂರಕವಾದ ಸ್ಪಂದನೆ ಹೈಕಮಾಂಡ್ ನಿಂದಾಗಲಿ, ಡಿ ಕೆ ಶಿವಕುಮಾರ್ ಅವರಿಂದಲೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರುಗಳು ಈ ಬಾರಿ ಸಚಿವರಾಗಲೇಬೇಕೆಂಬ ಎಲ್ಲಾ ರೀತಿಯ ಲಾಭಿಗೆ ಇಳಿದಿದ್ದಾರೆ. ಸಿನಿಯಾರಿಟಿ ಪ್ರಕಾರ ಬಿ.ಕೆ ಸಂಗಮೇಶ್ವರ್ ಅವರು ಸಚಿವ ಸ್ಥಾನಕ್ಕೆ ಹಕ್ಕುದಾರಿಕೆ ಮಂಡಿಸಿದ್ದು, ಬೇಳೂರು ಗೋಪಾಲಕೃಷ್ಣ ಅವರು ಹಿಂದುಳಿದ ವರ್ಗಗಳ ಪ್ರಾತಿನಿಧ್ಯದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈಗಾಗಲೆ ಕಾಂಗ್ರೆಸ್ ನ ಹಿರಿಯನಾಯಕ , ಎಂಎಲ್ ಸಿ ಬಿ ಕೆ ಹರಿಪ್ರಸಾದ್ ಅವರು ಸಂಪುಟ ಸೇರುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹಿಂದುಳಿದ ವರ್ಗ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕುವುದರಿಂದ ಮಧುಬಂಗಾರಪ್ಪ, ಬೇಳೂರುಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಅಷ್ಟು ಸುಲಭವಲ್ಲ ಎಂಬ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ. ಹಾಗೊಮ್ಮೆ ಹರಿಪ್ರಸಾದ್ ಅವರು ಸಚಿವ ಸಂಪುಟ ಸೇರ‍್ಪಡೆಗೊಂಡರೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕೂಡ ಅವರ ಕೈ ವಶವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಬಿ.ಕೆ ಸಂಗಮೇಶ್ವರ್ ಲಿಂಗಾಯಿತ ಕೋಟಾದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಷ್ಟೇ ಅಲ್ಲ, ಅವರು ಡಿ. ಕೆ ಶಿವಕುಮಾರ್ ಅವರೊಂದಿಗೆ ಉತ್ತಮ ಸಂಪರ್ಕ ಸಂಬಂಧ ಹೊಂದಿರುವುದರಿಂದ ಈ ಬಾರಿ ಸಚಿವ ಸ್ಥಾನ ಗ್ಯಾರಂಟಿ ಎಂಬ ನೀರಿಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ.ಬೆಳಗಾಂನ ತಮ್ಮ ಬೀಗರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಚಿವರಾಗಲೇ ಬೇಕೆಂಬ ಪಟ್ಟು ಹಿಡಿದಿದ್ದಾರೆ.

ವಿಧಾನಪರಿಷತ್ ಸದಸ್ಯರಾಗಿರುವ ಶ್ರೀಮತಿ ಬಲ್ಕೀಶ್ ಬಾನು ಅವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಅಲ್ಪಸಂಖ್ಯಾತ ಮಹಿಳಾ ಕೋಟಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಲಾಭಿಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ನೆಲಕಚ್ಚಿದೆ. ಮುಂದಿನ ವಿಧಾನಸಭಾ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಗಟ್ಟಗೊಳಿಸಬೇಕಿದೆ. ಈ ಹಿನ್ನಲೆಯಲ್ಲಿಯೇ ಜಿಲ್ಲೆಯ ಉಸ್ತುವಾರಿಗೆ ಸಮರ್ಥ ರಾದವರನ್ನೆ ಸಚಿವರನ್ನಾಗಿಸಬೇಕೆಂಬ ಆಲೋಚನೆ ಕೂಡ ಡಿ.ಕೆ ಶಿವಕುಮಾರ್ ಅವರದ್ದಾಗಿದೆ. ನಾಳೆ ಸಂಜೆ ರಾಜಭವನದಲ್ಲಿ ಡಿ.ಕೆ ಶಿವಕುಮಾರ್ ಮತ್ತು ಅವರ ಮೊದಲ ಹಂತದ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಈ ಕ್ಷಣದ ವರೆಗೂ ಶಿವಮೊಗ್ಗ ಜಿಲ್ಲೆಯ ಯಾವೊಬ್ಬ ಕಾಂಗೇಸ್ ಶಾಸಕರಿಗೂ ಸಚಿವ ಸ್ಥಾನದ ಭರವಸೆ ಸಿಕ್ಕಿಲ್ಲ. ಬಹುತೇಕ ನಾಳಿನ ಪ್ರಮಾಣ ವಚನದಲ್ಲಿ ಶಿವಮೊಗ್ಗದ ಯಾರೊಬ್ಬರೂ ಸಚಿವರಾಗಿ ಪ್ರಮಾಣ ವಚನದ ಸ್ವೀಕರಿಸುವ ಸಾಧ್ಯತೆ ಇಲ್ಲ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಿಂದಲೇ ಕೇಳಿಬರುತ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments