ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.20
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಚಿನ್ ಎನ್.ಜೆ ಅವರಿಗೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಘೋಷಿಸಿದೆ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, “ಅಭಿವೃದ್ಧಿ ಸಂವಹನದ ಮಾಧ್ಯಮವಾಗಿ ಚಲನಚಿತ್ರ: ಆಯ್ದ ಕನ್ನಡ ಚಲನಚಿತ್ರಗಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ“ಎಂಬ ವಿಷಯದ ಕುರಿತು ಸಚಿನ್ ಅವರು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನೆಗವಾಡಿ ಗ್ರಾಮದವರಾದ ಸಚಿನ್ ಎನ್.ಜೆ ಅವರು ಜಯಪ್ಪ ಮತ್ತು ಸುಜಾತ ದಂಪತಿಯ ಪುತ್ರರಾಗಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಿಪ್ಪನ್ಪೇಟೆಯ ಚಂದಳ್ಳಿಯಲ್ಲಿ ಪೂರೈಸಿದ್ದು, ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ರಿಪ್ಪನ್ಪೇಟೆಯಲ್ಲಿಯೇ ಮುಗಿಸಿದ್ದಾರೆ. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತುಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದರು.
ಪ್ರಸ್ತುತ ಇವರು ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ (ಸ್ವಾಯತ್ತ) ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
