ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.22
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಬಿಜೆಪಿಯಲ್ಲಿನ ಒಳ ಬೇಗುದಿಯನ್ನು ಬಹಿರಂಗಪಡಿಸಿದೆ. ಬಿಜೆಪಿಯ ಶಾಸಕರುಗಳು ಅಡ್ಡ ಮತದಾನ ಮಾಡಿರುವುದರ ಹಿಂದೆ ಪಕ್ಷದ ನಾಯಕತ್ವದ ಬಗ್ಗೆಯೇ ಇರುವ ಅಸಮಾಧಾನ ಎಂದು ಬಿಜೆಪಿ ನಾಯಕರುಗಳೇ ವ್ಯಾಖ್ಯಾನಿಸುತ್ತಿರುವುದು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.
ಮತ ಪ್ರಮಾಣದಲ್ಲಿ ಏನೇ ಲೆಕ್ಕಾಚಾರ ಹಾಕಿದರೂ ಬಿಜೆಪಿ ಅವಿರೋಧವಾಗಿ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶವಿತ್ತು. ಆದರೆ ಯಾವುದೇ ಗೆಲುವಿನ ಸಾಧ್ಯತೆಗಳೇ ಇಲ್ಲದ ಮೈತ್ರಿ ಪಕ್ಷ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಬಿಜೆಪಿ ಶಾಸಕರ ನಿಷ್ಠೆಯನ್ನು ಬೀದಿಗೆ ತಂದತಾಗಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಅವಕಾಶ ಕೊಡಬಾರದಿತ್ತು. ಸಾಮಾನ್ಯ ಲೆಕ್ಕಾಚಾರದಲ್ಲೂ ಆಡಳಿತ ಪಕ್ಷದ ವಿರುದ್ದ ತಮ್ಮ ಅಭ್ಯರ್ಥಿ ಗೆಲುವು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಗೊತ್ತಿದ್ದರೂ ಸ್ಪರ್ಧೆಗೆ ಕಣಕ್ಕಿಳಿಸಿದ್ದು ಇದು ಜೆಡಿಎಸ್ ಗಿಂತ ಬಿಜೆಪಿಗೆ ಆದ ದೊಡ್ಡ ಮುಖಭಂಗ ಎಂಬುದನ್ನು ಬಿಜೆಪಿ ಶಾಸಕರುಗಳೇ ಹೇಳುತ್ತಿದ್ದಾರೆ.
ಗಮನಿಸಿ: ಜಿಲ್ಲಾ ಪತ್ರಕರ್ತರ ಸಂಘದ ಬೆಂಬಲ, ಪಾಲಿಕೆಗೆ ಆನೆ ಬಲ: ಉಪ ಆಯುಕ್ತರು
ಯಾಕೆ ಹೀಗೆಲ್ಲಾ ಆಯಿತು ಎನ್ನುವ ಪ್ರಶ್ನೆಗೆ ರಾಜ್ಯ ಬಿಜೆಪಿಯಲ್ಲಿ ಹಿರಿಯರ ನಾಯಕತ್ವ ಇಲ್ಲದಿರುವುದೇ ಇದಕ್ಕೆ ಮುಖ್ಯಕಾರಣ, ಕುಮಾರಸ್ವಾಮಿ ಅವರ ನಡವಳಿಕೆಗೆ ಬುದ್ದಿ ಹೇಳುವವರು ಯಾರು? ಅಂತಹ ಸಾಮರ್ಥ್ಯ ಯಾರಿಗಿದೆ? ಇದರಿಂದಾಗಿಯೇ ಬಿಜೆಪಿ ಈ ರೀತಿ ಮುಖಭಂಗಕ್ಕೆ ತುತ್ತಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಬಿಜೆಪಿಯಲ್ಲಿ ರಾಜ್ಯ ನಾಯಕತ್ವದ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಾ ಬಂದಿರುವ ಗುಂಪೊಂದು ಅಡ್ಡಮತದಾನ ಪ್ರಕರಣವನ್ನೆ ಮುಂದಿಟ್ಟುಕೊಂಡು ಮತ್ತೆ ರಾಜ್ಯ ಅಧ್ಯಕ್ಷ ಸ್ಥಾನದಲ್ಲಿರುವ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ಸಲ್ಲಿಸಿದೆ ಎನ್ನಲಾಗುತ್ತಿದೆ.
ಮೊನ್ನೆಯಷ್ಟೇ ಮಂಡ್ಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಅಡ್ಡ ಮತದಾನ ಪ್ರಕರಣವನ್ನೆ ಮುಂದಿಟ್ಟುಕೊಂಡು ಬಿಜೆಪಿ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ತಮ್ಮ ಪಕ್ಷದ ನಾಯಕತ್ವದ ಬಗ್ಗೆಯೇ ಬೆರಳು ತೋರಿದ್ದಾರೆ.
ರಾಜ್ಯದ ಬಿಜೆಪಿ ನಾಯಕತ್ವ ವಹಿಸಿಕೊಂಡಿರುವವರ ಹೊಂದಾಣಿಕೆ ರಾಜಕಾರಣ ದಿಂದಾಗಿ ಪಕ್ಷ ಹಿನ್ನಡೆ ಅನುಭವಿಸುವಂತಾಗುತ್ತಿದೆ. ಪಕ್ಷದ ಸಂಘಟನೆ ಜವಾಬ್ದಾರಿ ವಹಿಸಿಕೊಂಡಿರುವ ರಾಜ್ಯಾಧ್ಯಕ್ಷರ ಸಮಪರ್ಕಕವಾಗಿ ಕಾರ್ಯನಿರ್ವಹಿಸದ ಕಾರಣ ಸಮಾನ ಮನಸ್ಕನಾಯಕರು ಧ್ವನಿ ಎತ್ತುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಆಣೆ ಪ್ರಮಾಣಕ್ಕೆ ಹಿರಿಯ ನಾಯಕರ ಆಕ್ಷೇಪ:
ಅಡ್ಡ ಮತದಾನ ಮಾಡಿದ ಶಾಸಕರು ಯಾರು ಎಂದು ಕಂಡು ಹಿಡಿಯಲು ಧರ್ಮಸ್ಥಳ ಕ್ಷೇತ್ರದಲ್ಲಿ ಶಾಸಕಾಂಗ ಸಭೆ ನಡೆಸಿ ಪ್ರಮಾಣ ಮಾಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಹೇಳಿಕೆಗೆ ಪಕ್ಷದ ಹಿರಿಯ ನಾಯಕರಿಂದಲೆ ತೀವ್ರ ವಿರೋಧ ವ್ಯಕ್ತವಾಗಿದೆ.

ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಈ ಬಗ್ಗೆ ರಾಜ್ಯ ಅಧ್ಯಕ್ಷರ ಜೊತೆ ಮಾತಾಡುತ್ತೇನೆ ಎಂದಷ್ಟೆ ಹೇಳಿದರೆ, ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಕೂಡ ಇಂತಹ ನಡವಳಿಕೆ ಬೇಡ ಎಂದು ಸೂಚಿಸಿದ್ದಾರೆ.
ಒಟ್ಟಾರೆ ಬಿಜೆಪಿಯಲ್ಲಿ ಅಡ್ಡಮತದಾನ ದೊಡ್ಡ ಬಿರುಗಾಳಿಯನ್ನೆ ಎಬ್ಬಿಸಿದ್ದು, ಬಿಜೆಪಿ ರಾಜ್ಯ ನಾಯಕತ್ವ ಮತ್ತು ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆಯೂ ಪುನರ್ ವಿಮರ್ಶೆ ಮಾಡುವ ಒತ್ತಡವನ್ನು ತಂದಿಟ್ಟಿದೆ. ವಿಜಯೇಂದ್ರ ಅವರ ವಿರೋಧಿ ಪಾಳಯಕ್ಕಂತೂ ದೊಡ್ಡ ಅಸ್ತ್ರಸಿಕ್ಕಂತಾಗಿದೆ.
