Homeಜಿಲ್ಲೆಜಿಲ್ಲೆಗೆ ಮತ್ತೆ ಮಧು ಬಂಗಾರಪ್ಪ-ಅಳೆದು ತೂಗಿ ಸಂಪುಟ ವಿಸ್ತರಣೆ

ಜಿಲ್ಲೆಗೆ ಮತ್ತೆ ಮಧು ಬಂಗಾರಪ್ಪ-ಅಳೆದು ತೂಗಿ ಸಂಪುಟ ವಿಸ್ತರಣೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ3

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಕೊನೆಗೆ ವಿಸ್ತರಣೆ ಆಗಿದ್ದು, ಬಾಕಿ ಉಳಿದ 20 ಸಚಿವ ಸ್ಥಾನಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಳೆದು ತೂಗಿ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿ ಸಚಿವರನ್ನು ಆಯ್ಕೆ ಮಾಡಿದ್ದು, ಇಂದು ಸಂಜೆ ಪ್ರಮಾಣ ವಚನದ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರ ಸಂಪುಟದಲ್ಲಿದ್ದ ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಆದತ್ಯೆ ನೀಡಲಾಗಿದೆ. ಈ ವಿಸ್ತರಣೆಯ 20 ಸ್ಥಾನಗಳಿಗೆ 6 ಮಂದಿ ಹಳೆಬರಿಗೆ ಮತ್ತೆ ಸ್ಥಾನದ ಅದೃಷ್ಟ ಒಲಿದು ಬಂದಿದೆ. ಉಳಿದಂತೆ ಕಿರಿಯರಿಗೆ ಹೆಚ್ಚಿನ ಆದತ್ಯೆ ನೀಡಿರುವುದು ವಿಶೇಷವಾಗಿದೆ. ಸಂಪುಟ ವಿಸ್ತರಣೆ ಹಲವು ಕಾರಣಕ್ಕೆ ವಿಶೇಷತೆ ಹೊಂದಿದೆ.

ಮೊದಲ ಬಾರಿಗೆ ಶಾಸಕರಾದವರಿಗೂ ಸಚಿವರಾಗುವ ಅದೃಷ್ಟ ಒಲಿದಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಫಲಿತಾಂಶದ ವಿರುದ್ದ ಕಾನೂನು ಹೋರಾಟ ನಡೆಸಿ ಕೊನೆಗೆ ಜಯ ಸಾಧಿಸಿದ್ದ ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡರಿಗೆ ಸಚಿವರಾಗುವ ಬಂಪರ್ ಅವಕಾಶ ಸಿಕ್ಕಿದ್ದು, ಮಹಿಳಾ ಕೋಟಾದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರನ್ನು ವಿಧಾನ ಪರಿಷತ್‌ನ ಉಪಸಭಾಪತಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿದೆ.

ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಜಾತಿವಾರು ಲೆಕ್ಕದಲ್ಲಿ ಸಂಪುಟ ವಿಸ್ತರಣೆ ಮಾಡಿರುವುದು ಮೇಲ್ನೊಟಕ್ಕೆ ಕಾಣುತ್ತಿದೆ. ಈ ಬಾರಿ ಒಕ್ಕಲಿಗ ಕೋಟಾದಲ್ಲಿ ನಾಲ್ವರು ಸಂಪುಟ ಸೇರುವ ಅವಕಾಶ ಸಿಕ್ಕಿದೆ. ಮುಸ್ಲಿಂ ಕೋಟಾದಲ್ಲಿ ಮೂವರು ಸಚಿವರಾಗಿದ್ದಾರೆ. ಅದೇ ರೀತಿ ಎಡಗೈನಲ್ಲಿ ಒಬ್ಬರು, ಬಲಗೈನಲ್ಲಿ ಮೂವರು ಸೇರಿದಂತೆ ಸಣ್ಣ ಪುಟ್ಟ ಸಮುದಾಯಗಳಿಗೂ ಅವಕಾಶ ನೀಡಲಾಗಿದೆ.

ಎರಡನೇ ಹಂತದ ಸಂಪುಟದಲ್ಲಿ ನಾಗಮಂಗಲದ ಶಾಸಕ ಚಲುವರಾಯ ಸ್ವಾಮಿ, ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಸೊರಬ ಶಾಸಕ ಮಧು ಬಂಗಾರಪ್ಪ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್, ಕಲಘಟಗಿ ಶಾಸಕ ಸಂತೋಷ್ ಲಾಡ್, ಮಾಯಾಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕನಕಗಿರಿ ಶಾಸಕ ಶಿವರಾಜ್ ತಂಗಡಿಗ, ಬೆಂಗಳೂರು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಹದ್, ಅರಸಿಕೇರೆ ಶಾಸಕ ಶಿವಲಿಂಗೇಗೌಡ, ಅಥಣಿ ಲಕ್ಷ್ಮಣ್  ಸವದಿ, ಜೇವರ್ಗಿ ಶಾಸಕ ಅಜಯ್ ಸಿಂಗ್, ಹೊನ್ನಾವರ ಶಾಸಕ ಮಂಕಾಳ ವೈದ್ಯ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಯಲಬುರ್ಗ ಶಾಸಕ ಬಸರಾಜ ರಾಯರೆಡ್ಡಿ, ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಸಚಿವರುಗಳಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ವಿಧಾನ ಸಭೆ ಸಭಾಧ್ಯಕ್ಷರಾಗಿ ಜಿ.ಎಸ್.ಪಾಟೀಲ್, ಉಪಾ ಸಭಾಧ್ಯಕ್ಷರಾಗಿ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸಭಾಧ್ಯಕ್ಷರಾಗಿ ಸಲೀಂ ಅಹಮ್ಮದ್ ಸ್ಥಾನ ಪಡೆದಿದ್ದಾರೆ.

ಜಿಲ್ಲೆಗೆ ಮತ್ತೆ ಮಧು ಬಂಗಾರಪ್ಪ:

ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಸಂಪುಟ ವಿಸ್ತರಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಯಾರು ಮಂತ್ರಿಯಾಗಲಿದ್ದಾರೆ ಎಂಬ ತೀವ್ರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸೊರಬ ಶಾಸಕ ಹಾಗೂ ಮಾಜಿ ಸಚಿವ ಮಧು ಬಂಗಾರಪ್ಪ ಸಚಿವರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಮತ್ತೆ ಶಿಕ್ಷಣ ಖಾತೆಯಲ್ಲೆ ಮುಂದುವರೆಯಲ್ಲಿದ್ದಾರೆAಬ ಕುತೂಹಲ ಇದೆ.

ಸಚಿವ ಸ್ಥಾನಕ್ಕಾಗಿ ಜಿಲ್ಲೆಯಲ್ಲಿ ಮೂವರು ಶಾಸಕರುಗಳಲ್ಲಿ ತೀವ್ರ ಪೈಪೋಟಿಯೇ ನಡೆದಿತ್ತು. ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯ ಬಲ್ಕೀಶ್ ಬಾನು ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ತಾವು ನಿಷ್ಠೆ ಹೊಂದಿದ್ದ ನಾಯಕರ ನಡುವೆ ತೀವ್ರ ಒತ್ತಡ ಹಾಕಿದ್ದರು. ಆದರೆ ಕೊನೆಗೆ ಮಧು ಬಂಗಾರಪ್ಪವರಿಗೆ ಜಿಲ್ಲೆಯಲ್ಲಿ ಸ್ಥಾನ ಒಲಿದಿದೆ. ಸಹಜವಾಗಿಯೇ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದಾರೆ.

ಎಡಗೈ ಸಮುದಾಯದಲ್ಲಿ ಅಸಮಾಧಾನ:

ಸಚಿವರ ಸಂಪುಟ ವಿಸ್ತರಣೆ ಪಟ್ಟಿ ಬಿಡುಗಡೆಯಾಗಿದೆ. ಇನ್ನೇನು ಪ್ರಮಾಣ ವಚನ ಮಾತ್ರ ಬಾಕಿ ಉಳಿದಿದೆ. ಆದರೆ ಪಕ್ಷದೊಳಗೆ ಹಾಗೂ ಹೊರಗೆ ಅಸಮಾಧಾನ ಹೊಗೆಯಾಡುತ್ತಿದೆ. ಈ ಬಾರಿ ಸಚಿವ ಸ್ಥಾನಲ್ಲಿ ಬಲಗೈ ಸಮುದಾಯಕ್ಕೆ ಹೆಚ್ಚಿನ ಸ್ಥಾನ ನೀಡಿದ್ದು, ಎಡಗೈ ಸಮುದಾಯ-1 ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ-3 ಸ್ಥಾನವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ತಣಿಸುವಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments