ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.11
ಸಂಸ್ಕೃತ ಕಲಿಕೆಯಿಂದ ಜೀವನ ಶೈಲಿಯನ್ನು ಧನಾತ್ಮಕವಾಗಿ ಬದಲಾಯಿಸಿಕೊಳ್ಳಲು ಸಾಧ್ಯ ಎಂದು ಶರಾವತಿ ನಗರದ ಬಿಜಿಎಸ್ ಶಾಖ ಮಠದ ಶ್ರೀ ನಾದಮಯಾನಂದನಾಥ ಸ್ವಾಮಿಜಿ ನುಡಿದರು.
ಅವರು ದೇಶಿಯ ವಿದ್ಯಾಶಾಲಾ ಸಮಿತಿ (ಡಿವಿಎಸ್)ಯ ಸಂಸ್ಕೃತ ವಿಭಾಗ ಹಾಗೂ ಸಂಸ್ಕೃತ ಅಧ್ಯಯನ ವಿದ್ಯಾರ್ಥಿ ವೃಂದದ ವತಿಯಿಂದ ಕಾಲೇಜಿನ ಗ್ರಂಥಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತೋತ್ಸವ 2026-07’ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬದಲಾಗುತ್ತಿರುವ ನಮ್ಮ ಜೀವನ ಶೈಲಿಯಲ್ಲಿ ಮತ್ತೇ ಮತ್ತೇ ಅದನ್ನು ನೆಲೆಗಟ್ಟಿನ ಬದುಕನ್ನಾಗಿ ರೂಪಿಸಿಕೊಳ್ಳುವುದು ಭಾಷೆಯು ಒಂದು ಪ್ರಮುಖವಾದ ಕಾರಣವಾಗುತ್ತದೆ. ವರ್ತಮಾನದಲ್ಲಿ ಕೇವಲ ಒಂದು ಭಾಷೆಯನ್ನ ಕಲಿತರೆ ಸಾಲದು ಎಲ್ಲಾ ಭಾಷೆಗಳು ಪ್ರಮುಖವಾಗುತ್ತವೆ. ಹಾಗೆಯೇ ಸಂಸ್ಕೃತ ಭಾಷೆಯು ಕೂಡ ಬಹಳ ಮುಖ್ಯ. ಈ ಭಾಷೆಯನ್ನು ವಿದ್ಯಾರ್ಥಿಗಳು ಕೇವಲ ಅಂಕಕ್ಕಾಗಿ ಓದದೆ ಜೀವನ ಮೌಲ್ಯಗಳನ್ನು ವಿವಿಧ ಗ್ರಂಥಗಳ ಮೂಲಕ ಪಡೆದುಕೊಳ್ಳಬೇಕು ಎಂದರು.
ಸಂಸ್ಕೃತ ಕೇವಲ ಒಂದು ಸಂವಾಹನದ ಮಾಧ್ಯಮವಲ್ಲ. ಅದು ವ್ಯಕ್ತಿಯದೈಹಿಕ ಮಾನಸಿಕ ಮತ್ತು ಬೌದ್ದಿಕ ವಿಕಾಸಕ್ಕೆ ಪೂರಕವಾದ ಒಂದು ಜೀವನಕ್ರಮವಾಗಿದೆ ಸಂಸ್ಕೃತ ಪಠಣದಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದೊಂದು ದೈವದ ಭಾಷೆಕೂಡ ಒಳ್ಳೆಯ ವಿಚಾರಗಳು, ಆಚಾರಗಳು ಉನ್ನತ ಚಿಂತನೆಗಳು ವಿಶಾಲ ಮನೋಭಾವನೆ ಬರಲು ಸಾಧ್ಯಎಂದ ಅವರು ಇಂತಹ ಸಂಸ್ಕೃತೋತ್ಸವಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು ಎಂದರು.
ಸಂಸ್ಕೃತ ವಿಭಾಗದ ಮುಖ್ಯಸ್ಥರು ಹಾಗೂ ಕಾರ್ಯಕ್ರಮದ ಆಯೋಜಕರಾದ ವಿದ್ವಾನ್ ದತ್ತಮೂರ್ತಿ ಭಟ್ ಪ್ರಸ್ತಾವಿಕ ಮಾತನಾಡಿ, ನಮ್ಮಕಾಲೇಜಿನಲ್ಲಿ ಸಂಸ್ಕೃತ ಭಾಷೆಗೆ ಆದ್ಯತೆ ನೀಡಲಾಗುತ್ತಿದೆ. ಮೊದಮೊದಲು ಶೇ.80 ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದರು. ಈಗ ಅದು ಶೇ.50 ಕ್ಕೆ ಬಂದಿದ್ದರು ಕೂಡ ಇನ್ನು ಉತ್ತುಂಗದ ಸ್ಥಿತಿಯಲ್ಲಿದೆ.ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ಕಾಲೇಜಿನ 16 ವಿದ್ಯಾರ್ಥಿಗಳು ಸಂಸ್ಕೃತ ವಿಷಯಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಎಂದರು.
ಸಂಸ್ಕೃತ ಓದಿದವರಿಗೆ ಮೌಲ್ಯವು ಸಿಗುತ್ತದೆ.ಉದ್ಯೋಗವು ಸಿಗುತ್ತದೆ. ಸಂಸ್ಕೃತಿಯ ತಿಳುವಳಿಕೆ ಮೂಡುತ್ತದೆ.ಜ್ಞಾನದ ಪ್ರಕಾಶನವಾಗುತ್ತದೆ. ಸಂಸ್ಕೃತ ಎಂದರೆ ಚೆನ್ನಾಗಿ ಮಾಡಲ್ಪಟ್ಟದ್ದು ಎಂದೇ ಅರ್ಥ. ಒಳ್ಳೆಯ ಆಚಾರ ವಿಚಾರಗಳನ್ನು ಬೋಧಿಸುವ ಭಾಷೆಯಾಗಿ ಇದು ಬೆಳೆದು ಬಂದಿದೆ. ಇದೊಂದು ಅಪೂರ್ವ ಭಾಷೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಸಂಸ್ಕೃತ ಪ್ರಾಚೀನ ಭಾಷೆ ವೇದ, ಉಪನಿಷತ್, ಭಗವದ್ಗಿತೆ, ಧಾರ್ಮಿಕ ಆಚರಣೆಗಳು, ಶ್ಲೋಕಗಳು ಮುಂತಾದ ಮಹತ್ವದ ಗ್ರಂಥಗಳು ಸಂಸ್ಕೃತದಲ್ಲಿವೆ. ಇದು ಏಕಾಗ್ರತೆ, ಭಾಷಾ ಸಾಮರಸ್ಯ, ತಾತ್ವಿಕಚಿಂತನೆ ನೀಡುವುದರ ಜೊತೆಗೆ ಭಾರತೀಯ ಪರಂಪರೆಯನ್ನುಎತ್ತಿ ಹಿಡಿಯುತ್ತದೆ ಎಂದರು.
ಅಧಕ್ಷತೆ ವಹಿಸಿದ್ದ ಡಿವಿಎಸ್ ಸಂಸ್ಥೆ ಅಧ್ಯಕ್ಷ ಬಸಪ್ಪಗೌಡ ಮಾತನಾಡಿ, ಸಂಸ್ಕೃತ ಭಾಷೆಗೆ ತನ್ನದೆಯಾದ ಇತಿಹಾಸವಿದೆ. ಸಾಹಿತ್ಯದ ಪ್ರಕಾರಗಳಲ್ಲಿ ತನ್ನ ಪ್ರಭಾವವನ್ನ ಇದು ದಟ್ಟವಾಗಿ ಬೆಳೆದುಕೊಂಡು ಬಂದಿದೆ. ಸಂಸ್ಕೃತ ಕಲಿತರೆ ಜೀವನ ಮೌಲ್ಯವನ್ನು ಕೂಡ ಕಲಿಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ.ದಿನೇಶ್, ಆಡಳಿತ ಮಂಡಳಿಯ ಪ್ರಮುಖರಾದ ಡಾ.ಎ. ಸತೀಶ್‌ಕುಮಾರ್ ಶೆಟ್ಟಿ, ರಿಜಿಸ್ಟರ್ ಡಾ.ಎಂ.ವೇಂಕಟೇಶ್, ಪ್ರಾಶುಂಪಾಲರಾದ ಸವಿತಾಎನ್‌ರಾವ್, ಪ್ರೇಮಕುಮಾರಿ, ಹೆಚ್.ಸಿ.ಉಮೇಶ್, ಸಿ.ಕೆ.ಶ್ರೀಧರ್ ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ಯಾರ್ಥಿಗಳು ದೇಶಭಕ್ತಿಗೀತೆ, ಸಮೂಹಗಾನ, ಭಾಷೆಯ ಬಗ್ಗೆ ಮಾತನಾಡಿದರು.ಉಪನ್ಯಾಸ ಬಿ.ಜಿ.ಪ್ರಶಾಂತ್ ವಂದಿಸಿ, ದಿವ್ಯ ನಿರೂಪಿಸಿ, ಅಂಕಿತ ಸ್ವಾಗತಿಸಿದರು.
