ಬೆಂಗಳೂರು,ಸೆ.17 ಸಾಮಾಜಿಕ ನ್ಯಾಯಕ್ಕೆ ಮಾಧ್ಯಮ ಶಕ್ತಿಯಾಗಬೇಕು. ಸಂವಿಧಾನದ ಆಶಯಗಳಿಗೆ ಪತ್ರಿಕೆ ಧ್ವನಿಯಾಗಲಿ, ಸಾಮಾಜಿಕ ನ್ಯಾಯಕ್ಕೆ ಮಾಧ್ಯಮ ಶಕ್ತಿಯಾಗಲಿ, ಅಂಚಿನಲ್ಲಿರುವವರ ಬದುಕು ಮುಖ್ಯವಾಹಿನಿಯ ಸುದ್ದಿಯಾಗಲಿ ಎಂದು ಸಮಾಜ ಕಲ್ಯಾಣ ಸಚಿವ ಕೆ ಹೆಚ್ ಮುನಿಯಪ್ಪ ಕರೆ ನೀಡಿದ್ದಾರೆ.
ಗುರುವಾರ ನಡೆದ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಸಮಾರಂಭಕ್ಕೆ ಶುಭಕೋರಿ ಸಂದೇಶ ನೀಡಿದ ಸಚಿವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ನೀಡುವುದರ ಜೊತೆಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸ್ವಾಭಿಮಾನವನ್ನು ಕಟ್ಟುವ ದಾರಿಯನ್ನು ತೋರಿಸಿದ್ದಾರೆ ಎಂದರು.
ಗಮನಿಸಿ: ಪತ್ರಿಕಾರಂಗದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಸಿಗಬೇಕು
ಅಂಬೇಡ್ಕರ್ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪತ್ರಿಕಾ ಮತ್ತು ಸುದ್ದಿ ಮಾಧ್ಯಮಗಳ ಪಾತ್ರ ಬಹಳ ಮಹತ್ವದ್ದಾಗಿದೆ.ವಿಶೇಷವಾಗಿ ಸಮಾಜದ ತಳದಲ್ಲಿರುವವರ ನೋವು, ಅನ್ಯಾಯ ಮತ್ತು ಹಕ್ಕುಗಳ ಪ್ರಶ್ನೆಗಳಿಗೆ ಧ್ವನಿಯಾಗುವುದು ಪತ್ರಿಕೋದ್ಯಮದ ದೊಡ್ಡ ಸಾಮಾಜಿಕ ಜವಾಬ್ದಾರಿ. ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು, ಕಾಣದ ಬದುಕನ್ನು ಸಮಾಜಕ್ಕೆ ಕಾಣಿಸುವುದು ಮತ್ತು ಅಧಿಕಾರವನ್ನು ಜನರ ಪ್ರಶ್ನೆಗಳಿಗೆ ಉತ್ತರದಾಯಿಯಾಗಿಸುವುದು ನಿಜವಾದ ಪತ್ರಿಕೋದ್ಯಮದ ಶಕ್ತಿ ಎಂದು ನಾನು ನಂಬಿದ್ದೇನೆ ಎಂದರು.

2001ರಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಕರ್ತರು ಹಾಗೂ ಸಂಪಾದಕರ ವೃತ್ತಿಪರ ಹಕ್ಕು, ಪ್ರಾತಿನಿಧ್ಯ ಮತ್ತು ಬೆಳವಣಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ. ಹೊಸ ತಲೆಮಾರಿನ ಪತ್ರಕರ್ತರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡುವ ಕಾರ್ಯ ಇನ್ನಷ್ಟು ವಿಸ್ತಾರವಾಗಲಿ ಎಂದು ಆಶಿಸಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್, ಬಿ. ರಾಚಯ್ಯ, ಬಿ. ಬಸವಲಿಂಗಪ್ಪ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಅವರ ಸಾಮಾಜಿಕ ನ್ಯಾಯದ ಹೋರಾಟ ಮತ್ತು ಸೇವೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಅರ್ಥಪೂರ್ಣ ಪ್ರಯತ್ನವಾಗಿದೆ. ಪ್ರಶಸ್ತಿ ಸ್ವೀಕರಿಸಿದ ಎಲ್ಲ ಪತ್ರಕರ್ತರು, ಸಂಪಾದಕರು ಹಾಗೂ ಸಾಮಾಜಿಕ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಎನ್. ರವಿಕುಮಾರ್ (ಟೆಲೆಕ್ಸ್) ಅವರ ‘ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ‘ ಕಿರುಹೊತ್ತಿಗೆ ಸಮಾಜಮುಖಿ ಪತ್ರಿಕೋದ್ಯಮದ ಕುರಿತು ಹೊಸ ಚಿಂತನೆಗೆ ಪ್ರೇರಣೆಯಾಗಲಿ ಎಂದು ಶುಭ ಕೋರಿದರು.
