ಶಿವಮೊಗ್ಗ: ಪಾಲಿಕೆ ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆಯುತ್ತಾ ಬಂದಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾನಗರ ಪಾಲಿಕೆ ನೌಕರರು ಜು.8 ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿಲಾಗಿದೆ ಎಂದು ಮಹಾನಗರ ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಗೋವಿಂದ್ ತಿಳಿಸಿದರು. .
ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಏಳನೆ ವೇತನ ಆಯೋಗದ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ವಿಸ್ತರಿಸಿ, ಅನುದಾನ ಬಿಡುಗಡೆ, ವೃಂದ ಮತ್ತು ನೇಮಕಾತಿ ನಿಯಾಮವಳಿಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸುವುದು, ಪಾಲಿಕೆ ನೌಕರರಿಗೂ ಕೆಜಿಐಡಿ, ಜಿಪಿಎಫ್ ಸೌಲಭ್ಯ ವಿಸ್ತರಣೆ ಮಾಡುವುದು.
ಆರೋಗ್ಯ ಸೌಲಭ್ಯದ ಜ್ಯೋತಿ/ ಆರೋಗ್ಯ ಸಂಜೀವಿನಿ ಜಾರಿ, ಪಾಲಿಕೆ ಅಧಿಕಾರಿ/ನೌಕರರಿಗೂ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ, ವಿವಿಧ ವೃಂದಗಳ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು. ಈ ಕುರಿತಂತೆ ಅನೇಕ ಬಾರಿ ಮನವಿಗಳನ್ನು ನೀಡಿದ್ದರೂ ನಗರಾಭಿವೃದ್ದಿ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ಸರ್ಕಾರ ತಳೆದಿರುವ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮಹಾನಗರ ಪಾಲಿಕೆಗಳ ನೌಕರರ ಸಂಘದ ರಾಜ್ಯ ಸಮಿತಿ ಕರೆ ಮೇರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘವು ನಾಳೆಯಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದು, ಸ್ವಚ್ಛತಾ ಕಾರ್ಮಿಕರೂ ಸೇರಿದಂತೆ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದಾಗಿ ನಗರದ ಸ್ವಚ್ಚತೆ, ಕಂದಾಯ ವಿಭಾಗಗಳ ಕಾರ್ಯಗಳು ಸ್ಥಗಿತಗೊಳ್ಳಲಿವೆ. ರಾಜ್ಯಾದ್ಯಂತ ಮಹಾನಗರಪಾಲಿಕೆ ನೌಕರರ ಸಂಘದ ನೇತೃತ್ವದಲ್ಲಿ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ಕಾರ್ಯಸ್ಥಗಿತ ಗೊಳಿಸಿ ಮುಷ್ಕರ ನಡೆಸಲಿದ್ದಾರೆ ಎಂದು ತಿಳಿಸಿದರು.
ನಾಳೆ ಬೆಳಗ್ಗೆ ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪಾಲಿಕೆಯ ಎಲ್ಲಾ ವಿಭಾಗಗಳ ನೌಕರರು ನೇತೃತ್ವದಲ್ಲಿ ಮುಷ್ಕರ ಹಮ್ಮಿಕೊಳ್ಳಲಿದ್ದು, ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪಾಲಿಕೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
