Homeದೇಶಮೂಡಾ ಪ್ರಕರಣ: ಇ.ಡಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟು. ರಾಜಕಾರಣದಲ್ಲಿ ಇ.ಡಿ ಗೆ ಏನು ಕೆಲಸ?...

ಮೂಡಾ ಪ್ರಕರಣ: ಇ.ಡಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟು. ರಾಜಕಾರಣದಲ್ಲಿ ಇ.ಡಿ ಗೆ ಏನು ಕೆಲಸ? ಸಿಜೆಐ ಗವಾಯಿ ಮಾಡಿದ ತಾಕೀತು ಏನು ಗೊತ್ತಾ? ಬಿಜೆಪಿ -ಜೆಡಿಎಸ್ ಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ದರೆ ಕ್ಷಮೆ ಕೇಳಲಿ:ಸಿದ್ದರಾಮಯ್ಯ

Spread the love

ಮೂಡಾ ಪ್ರಕರಣ: ಇ.ಡಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟು.
ರಾಜಕಾರಣದಲ್ಲಿ ಇ.ಡಿ ಗೆ ಏನು ಕೆಲಸ? ಸಿಜೆಐ ಗವಾಯಿ ಮಾಡಿದ ತಾಕೀತು ಏನು ಗೊತ್ತಾ?
ಬಿಜೆಪಿ -ಜೆಡಿಎಸ್ ಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ದರೆ ಕ್ಷಮೆ ಕೇಳಲಿ:ಸಿದ್ದರಾಮಯ್ಯ

ನವದೆಹಲಿ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಮೂಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ ಪಾರ್ವತಿ ಹಾಗೂ ನಗಾರಭಿವೃದ್ದಿ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಅನ್ನು ರದ್ದು ಮಾಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು ಸಿದ್ದರಾಮಯ್ಯ ಮತ್ತವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.

ಪಾರ್ವತಿ ಮತ್ತು ಭೈರತಿ ಸುರೇಶ್ ಅವರಿಗೆ ಇ.ಡಿ ನೀಡಿದ್ದ ಸಮನ್ಸ್ ನ್ನು ಕರ್ನಾಟಕ ಹೈಕೋರ್ಟು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಇ.ಡಿ ಸುಪ್ರಿಂ ಕೋರ್ಟು ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟು ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ನೇತೃತ್ವದ ಪೀಠ ಹೈಕೋರ್ಟು ತೀರ್ಪನ್ನು ಎತ್ತಿಹಿಡಿದಿದೆ.

ಇ.ಡಿ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ರಾಜು ಅವರನ್ನು ಕುರಿತು ಸಿಜೆಐ ಬಿ.ಆರ್ ಗವಾಯಿ ಅವರು, ರಾಜಕಾರಣಿಗಳು ರಾಜಕೀಯ ಮಾಡಿಕೊಳ್ಳಲಿ, ಇದರಲ್ಲಿ ನಿಮಗೆ ಏನು ಕೆಲಸ ಎಂದು ಇಡಿ ಗೆ ಪ್ರಶ್ನಿಸಿದರು. ಬಾಯಿ ತೆರೆಯಲು ನಮಗೆ ಬಲವಂತ ಮಾಡಬೇಡಿ. ಇಲ್ಲದಿದ್ದರೆ ಇ.ಡಿ ಬಗ್ಗೆ ತೀಕ್ಷ್ಣ ಟಿಪ್ಪಣಿ ಮಾಡಬೇಕಾದಿತು. ನನಗೆ ಇದರ ಬಗ್ಗೆ ಮಹಾರಾಷ್ಟ್ರದಲ್ಲಿ ಕೆಲವು ಅನುಭವಗಳಾಗಿವೆ. ದೇಶದಾದ್ಯಂತ ನೀವು ಇದನ್ನು ಮುಂದುವರಿಸಕೂಡದು ಎಂದು ಕಠಿಣವಾಗಿ ತಾಕೀತು ಮಾಡಿದರಲ್ಲದೆ. ಏಕಸದಸ್ಯ ಪೀಠದ ತೀರ್ಪಿನಲ್ಲಿ ನಮಗೆ ಲೋಪ ಕಂಡುಬಂದಿಲ್ಲ. ಹೀಗಾಗಿ ಇಡಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ಗುಟುರು

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ಶ್ರೀಮತಿ ಪಾರ್ವತಿಯವರ ವಿರುದ್ಧ ತನಿಖೆ ನಡೆಸಲು ಇ.ಡಿ. ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿ ನೀಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರ ಅವರ ಆದೇಶವನ್ನು ನಾನು ವಿನೀತನಾಗಿ ಸ್ವಾಗತಿಸುತ್ತೇನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು. ಈ ನಂಬಿಕೆಯನ್ನು ಸುಪ್ರೀಂ ಕೋರ್ಟ್ ಆದೇಶ ಉಳಿಸಿಕೊಂಡು ಕಾಪಾಡಿದೆ.

ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಾಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯ ವಿರುದ್ಧ ಸುಳ್ಳು ಪ್ರಕರಣವನ್ನು ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು. ಇದರಿಂದ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಮಾನಸಿಕವಾದ ಕಿರುಕುಳವನ್ನು ನಾನೆಂದೂ ಮರೆಯಲಾರೆ.

ನನ್ನ ಮನದಾಳದ ಮಾತನ್ನೇ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಗವಾಯಿ ಅವರು ಹೇಳಿದ್ದಾರೆ. ‘’ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಕೊಳ್ಳಬೇಕೇ ಹೊರತು, ಇದಕ್ಕಾಗಿ ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಬಾರದು‘’ ಎಂಬ ಅವರ ಮಾತುಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಅಭಿಪ್ರಾಯವಾಗಿದೆ.

ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಸಿಬಿಐ ಮತ್ತು ಇಡಿಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟುಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ.

ಸುಪ್ರೀಂಕೋರ್ಟ್‌ನ ಈ ಕಣ್ಣುತೆರೆಸುವ ಆದೇಶದ ನಂತರವಾದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಎಚ್ಚೆತ್ತುಕೊಂಡು ಐಟಿ, ಸಿಬಿಐ ಮತ್ತು ಇ.ಡಿ.ಯಂತಹ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯನ್ನು ನಿಲ್ಲಿಸಿ ಅವುಗಳಿಗೆ ಇರಬೇಕಾಗಿರುವ ಸ್ವಾಯತ್ತತೆಯನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಬೇಕು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ ಬಂದಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಕಿಂಚಿತ್ತಾದರೂ ಮಾನ-ಮರ್ಯಾದೆ ಎನ್ನುವುದು ಉಳಿದುಕೊಂಡಿದ್ದರೆ ಅವರೆಲ್ಲರೂ ತಕ್ಷಣ ತಮ್ಮ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ರಾಜಕೀಯ ಎದುರಾಳಿಗಳನ್ನು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments