Homeಜಿಲ್ಲೆಸಕ್ರೆಬೈಲು ಆನೆಗಳ ಸಮಗ್ರ ಆರೈಕೆ-ನಿರ್ವಹಣೆಗೆ ಪಶೈವೈದ್ಯರ ಸಮಿತಿ ರಚನೆ

ಸಕ್ರೆಬೈಲು ಆನೆಗಳ ಸಮಗ್ರ ಆರೈಕೆ-ನಿರ್ವಹಣೆಗೆ ಪಶೈವೈದ್ಯರ ಸಮಿತಿ ರಚನೆ

Spread the love

ಶಿವಮೊಗ್ಗ, ಮಾ.25: ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯ ಸಕ್ರೆಬೈಲು ವನ್ಯಜೀವಿ ವಲಯದ ಸಕ್ರೆಬೈಲು ಇಲಾಖಾ ಆನೆ ಬಿಡಾರದಲ್ಲಿ ಪ್ರಸ್ತುತ 24 ಆನೆಗಳನ್ನು ಪಾಲನೆಪೋಷಣೆ ಮಾಡುತ್ತಿದ್ದು, ಆನೆಗಳಸಮಗ್ರ ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು 5 ಜನ ಪಶುವೈದ್ಯರ ಸಮಿತಿಯನ್ನು ರಚಿಸಲಾಗಿದೆ.

ಬಿಡಾರದಲ್ಲಿ 18 ಗಂಡು, 3 ಹೆಣ್ಣು ಮತ್ತು 3 ಮರಿ ಆನೆಗಳಿದ್ದು ಆನೆಗಳ ಆರೋಗ್ಯದಲ್ಲಿ ವ್ಯತ್ಯಾಸ ಆದ ಸಂದರ್ಭದಲ್ಲಿ ಕಾಲಕಾಲಕ್ಕೆ ಪಶು ವೈದ್ಯರಿಂದ ಅಗತ್ಯ ಚಿಕಿತ್ಸೆಯನ್ನು ಕೊಡಿಸಲಾಗುತ್ತದೆ. ಅಲ್ಲದೆ ಆನೆಗಳನ್ನು ಶಿಬಿರದ ಸಮಯದ ನಂತರ ಆಹಾರಕ್ಕಾಗಿ ಮೇಯಲು ಕಾಡಿಗೆ ಬಿಟ್ಟಾಗ ಕಾಡಾನೆಗಳ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಅವುಗಳಿಂದ ಗಾಯಗೊಳ್ಳುವುದು ಸಾಮಾನ್ಯವಾಗಿ ವರದಿಯಾಗುತ್ತದೆ. ಹಾಗೂ ನೈಸರ್ಗಿಕವಾಗಿ ಆರೋಗ್ಯದಲ್ಲಿ ಹಲವು ಸಂದರ್ಭಗಳಲ್ಲಿ ವ್ಯತ್ಯಾಸ ಉಂಟಾಗುವುದು ಸರ್ವೆಸಾಮಾನ್ಯವಾಗಿರುತ್ತದೆ.

ಕೆಲವು ತಿಂಗಳ ಹಿಂದೆ ಬಿಡಾರದ ಆನೆಗಳಾದ ಬಾಲಣ್ಣ, ವಿಕ್ರಾಂತ್, ಅಡಕಬಡಕ ಹಾಗೂ ಸಾಗರಆನೆಗಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ವಿಷಯವು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ವ್ಯತಿರಿಕ್ತವಾಗಿ ಪ್ರಕಟಿಸಲಾಗಿತ್ತು. ವರದಿಗಳನ್ನು ಗಮನಿಸಿ ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಕರ್ನಾಟಕ ಅರಣ್ಯ ಭವನ, ಬೆಂಗಳೂರು ಇವರು ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದಲ್ಲಿ ಪೋಷಿಸುತ್ತಿರುವ ಆನೆಗಳ ಆರೋಗ್ಯ ಸ್ಥಿತಿ, ಲಭ್ಯವಿರುವ ವೈದ್ಯಕೀಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿ, ಆನೆಗಳ ಸಮಗ್ರ ಆರೈಕೆ ಮತ್ತು ನಿರ್ವಹಣೆಯ ಬಗ್ಗೆ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಡಾ. ಎಲ್. ಚಟಿಯಪ್ಪ, ಉಪ ನಿರ್ದೇಶಕರು (ನಿವೃತ್ತ), ದುಬಾರೆ ಆನೆ ಶಿಬಿರ ಇವರ ಅಧ್ಯಕ್ಷತೆಯಲ್ಲಿ 5 ಜನ ಪಶುವೈದ್ಯರ ಸಮಿತಿಯನ್ನು ರಚಿಸಿದ್ದು ಇರುತ್ತದೆ.

ತಜ್ಞ ಪಶು ವೈದ್ಯರ ಸಮಿತಿಯು ದಿನಾಂಕ: 25.10.2025 ಮತ್ತು 26.10.2025 ರಂದು ಸಕ್ರೆಬೈಲು ಆನೆ ಶಿಬಿರದಲ್ಲಿ ಪೋಷಿಸುತ್ತಿರುವ ಆನೆಗಳಾದ ಸಾಗರ್, ವಿಕ್ರಾಂತ್, ಅಡಕಬಡಕ, ಬಾಲಣ್ಣ ಮತ್ತು ಇತರೆಎಲ್ಲಾ ಆನೆಗಳ ಆರೋಗ್ಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಗತ್ಯವಾದ ಚಿಕಿತ್ಸೆಯನ್ನು ನೀಡಿರುತ್ತಾರೆ ಮತ್ತು ಮುಂದೆ ಒದಗಿಸಬೇಕಾದ ಚಿಕಿತ್ಸೆಗಳ ಕುರಿತು ಸಲಹೆಯನ್ನು ನೀಡಿರುತ್ತಾರೆ.

ಸಾಗರ ಆನೆಯ ಆರೋಗ್ಯದ ವಿವರ:

ದಿನಾಂಕ: 10.10.2025 ರಂದು ಸಾಗರ್ ಆನೆಯ ಹಿಂಬದಿಯ ಕಾಲಿನ ಮೇಲ್ಬಾಗದಲ್ಲಿ ಕುರ (ಅಬೈಸ್) ಉಂಟಾಗಿದ್ದು, ಕುರವು ಒಡೆದು ಹೊರೆಗೆ ಕೀವು ಬರುತ್ತಿತ್ತು. ಆನೆಯ ಗಾಯವನ್ನು ಸಂರ್ಪೂವಾಗಿಶುಚಿಗೊಳಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಆನೆ ಗುಣಮುಖವಾಗಿ ಆರೋಗ್ಯಕರವಾಗಿದೆ.

ವಿಕ್ರಾಂತ್ ಆನೆಯ ಆರೋಗ್ಯದ ವಿವರ:

ಹಾಸನ ಅರಣ್ಯ ವಿಭಾಗದ ಬೇಲೂರು ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಗಂಡು ಕಾಡಾನೆಯನ್ನು (ವಿಕ್ರಾಂತ್) ದಿನಾಂಕ: 23.03.2025 ರಂದು ಸೆರೆಹಿಡಿದು ಸಕ್ರೆಬೈಲು ಆನೆ ಬಿಡಾರದಲ್ಲಿ ಸಲಹಲಾಗುತ್ತಿದೆ. ಆನೆಯನ್ನು ಸೆರೆಹಿಡಿದು ಬಿಡಾರಕ್ಕೆ ತರುವ ಸಮಯದಲ್ಲಿ ಹಣೆಯ ಭಾಗದಲ್ಲಿ, ಸೊಂಡಿಲಿನ ಭಾಗದಲ್ಲಿ ಮತ್ತು ಕಾಲಿನ ಭಾಗದಲ್ಲಿ ಗಾಯವಾಗಿದ್ದು ನುರಿತ ಪಶು ವೈದ್ಯರಿಂದ ನಿಯಮಿತವಾಗಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿ ಪ್ರಸ್ತುತ ಆನೆಯು ಆರೋಗ್ಯವಾಗಿದ್ದು ಶಿಬಿರದಲ್ಲಿ ನಿಗದಿತ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಬಾಲಣ್ಣ ಆನೆಯ ಆರೋಗ್ಯದ ವಿವರ:

ಬಾಲಣ್ಣ ಆನೆಯ ಕಾಲಿನಲ್ಲಿ ನೋವಿರುವುದನ್ನು ಗಮನಿಸಿ ಚಿಕಿತ್ಸೆ ನೀಡಲು ಕಿವಿಗೆ ಇಂಜೆಕ್ಷನ್ ನೀಡಿದ ಸಂದರ್ಭದಲ್ಲಿ ಆನೆಯು ಕಿವಿಯನ್ನು ಮರಕ್ಕೆ ಉಜ್ಜಿಕೊಂಡಿದ್ದರಿಂದ ಬಲಕಿವಿಗೆ ಗಾಯ ಉಂಟಾಗಿದೆ. ದಿನಾಂಕ: 09.10.2025 ರಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ಡಾ. ಬಾಳಪ್ಪನವರ್, ಹಾಗೂ ನಿವೃತ್ತ ಉಪ ನಿರ್ದೇಶಕ ಡಾ. ಮಹೇಶ್ವರಪ್ಪ ಹಾಗೂ ಬಿಡಾರದ ಪಶು ವೈಧ್ಯಾಧಿಕಾರಿಗಳು ಬಿಡಾರಕ್ಕೆ ಆಗಮಿಸಿ ಬಾಲಣ್ಣ ಆನೆಯನ್ನು ಪರಿಶೀಲನೆ ಮಾಡಿ ಬಲಕಿವಿಯಲ್ಲಿ ಡ್ರೈಗ್ಯಾಂಗ್ರಿನ್ ಆಗಿರುವುದಾಗಿ ತಿಳಿಸಿ ವರದಿ ನೀಡಿರುತ್ತಾರೆ ಹಾಗೂ ಬಿಡಾರದ ಪಶು ವೈದ್ಯರೊಂದಿಗೆ ಚರ್ಚಿಸಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿರುತ್ತದೆ. ದಿನಾಂಕ: 25.10.2025 ರಂದು ತಜ್ಞರ ಸಮಿತಿಯು ಆನೆಯನ್ನು ಪರಿಶೀಲಿಸಿದ್ದು, ಬಲಭಾಗದ ಕಿವಿಯಲ್ಲಿ ರಕ್ತ ಸಂಚಾರವಾಗದ ನಿಮಿತ್ತ ಗ್ಯಾಂಗ್ರಿನ್ ಆಗಿರುವುದಾಗಿ ತಿಳಿಸಿ. ದೇಹದ ಇತರೆ ಭಾಗಗಳಿಗೆ ವ್ಯಾಪಿಸದಂತೆ ತಡೆಗಟ್ಟಬೇಕಾದರೆ, ಶಸ್ತ್ರಚಿಕಿತ್ಸೆ ಮಾಡಿ ಆನೆಯ ಕಿವಿಯನ್ನು ಬೇರ್ಪಡಿಸಬೇಕಾಗಿ ತಿಳಿಸಿರುತ್ತಾರೆ. ಅದರಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ವೈದ್ಯರ ತಂಡವು ದಿನಾಂಕ: 26.10.2025 ರಂದು ಬೆಳಿಗ್ಗೆ ಶಸ್ತ್ರ ಚಿಕಿತ್ಸೆ ಕೈಗೊಂಡು ಕಿವಿಯನ್ನುಬೇರ್ಪಡಿಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಚಿಕಿತ್ಸಾ ವಿಧಾನವನ್ನು ಬಿಡಾರದ ಪಶುವೈದ್ಯರಿಗೆ ತಿಳಿಸಿರುತ್ತಾರೆ ಹಾಗೂ ಎಡಭಾಗದ ಕಿವಿಯನ್ನು ಪರಿಶೀಲಿಸಿದ್ದು ಸಣ್ಣ ಪ್ರಮಾಣದ ಗ್ಯಾಂಗ್ರಿನ್ ಉಂಟಾಗಿದ್ದು, ಗಾಯವನ್ನು ಸಹ ಔಷಧಿಯಿಂದ ಸಂಪೂರ್ಣವಾಗಿ ಶುದ್ಧಗೊಳಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಚಿಕಿತ್ಸಾ ವಿಧಾನವನ್ನು ಬಿಡಾರದ ಪಶುವೈದ್ಯರಿಗೆ ತಿಳಿಸಿರುತ್ತಾರೆ. ತಜ್ಞರ ಸಮಿತಿಯು ಸೂಚಿಸಿದಂತೆ ನಿಯಮಿತವಾಗಿ ಚಿಕಿತ್ಸೆ ನೀಡಲಾಗಿದ್ದು, ಗಾಯವು ಸಂಪೂರ್ಣವಾಗಿ ಗುಣಮುಖವಾಗಿ ಪ್ರಸ್ತುತ ಆನೆಯ ಆರೋಗ್ಯವಾಗಿದ್ದು. ಆನೆಯನ್ನು ಸಿಬ್ಬಂದಿಗಳ ಮೇಲ್ವಿಚಾರಣೆಯಲ್ಲಿ ಕಾಡಿಗೆ ಬಿಡಲಾಗುತ್ತಿದೆ.

ಅಡಕಬಡಕ ಆನೆಯ ಆರೋಗ್ಯದ ವಿವರ:

ದಿನಾಂಕ: 05.06.2025 ರಂದು ಸಿದ್ದಾಪುರ ವನ್ಯಜೀವಿ ವಲಯದಲ್ಲಿ ಸೆರೆ ಹಿಡಿದು ಸಕ್ರೆಬೈಲು ಆನೆಬಿಡಾರದ ಕ್ರಾಲ್‌ನಲ್ಲಿ ಪಳಗಿಸುತ್ತಿರುವ ಅಡಕಬಡಕ ಆನೆಯು ದಿನಾಂಕ: 06.09.2025 ರಂದು ಜಾರಿಬಿದ್ದು ಮುಂದಿನ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಆನೆಯ ಕಾಲು ಉಳುಕಿರುವುದಾಗಿ ಪಶುವೈದ್ಯರು ತಿಳಿಸಿರುತ್ತಾರೆ ಹಾಗೂ ಆನೆಗೆ ಸೂಕ್ತ ಚಿಕಿತ್ಸೆ ನೀಡಲು ದಿನಾಂಕ: 12.09.2025 ರಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪಶು ವೈದ್ಯಾಧಿಕಾರಿಗಳಾದ ಡಾ. ರಮೇಶ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶು ವೈದ್ಯಾಧಿಕಾರಿಗಳಾದ ಡಾ. ಆನಂದ್, ಡಾ. ಕಲ್ಲಪ್ಪ, ಹುಲಿಸಿಂಹಧಾಮ ತ್ಯಾವರೆಕೊಪ್ಪದ ಪಶು ವೈದ್ಯಾಧಿಕಾರಿಗಳಾದ ಡಾ. ಮುರಳಿ ಮನೋಹರ, ಡಾ. ಶ್ರೀರಾಮ್. ಎಸ್..ಎಸ್. ವನ್ಯಜೀವಿ ಹಾಗೂ ಇತರ ಸಹಾಯಕ ಸಿಬ್ಬಂದಿಗಳು ಆಗಮಿಸಿ ಆನೆಯ ಕಾಲಿನ ಎಕ್ಸ್ರೇ ತೆಗೆದು ಪರಿಶೀಲಿಸಿ ನೋಡಲಾಗಿ ಆನೆಗೆ ಮೇಲ್ನೋಟಕ್ಕೆ ಫ್ರಾಕ್ಚರ್ ಅಟ್ ಲೆಫ್ಟ್ ಒಲೆಕ್ರನಾನ್ ಪ್ರಾಸೆಸ್ ಅಥವಾ ರೇಡಿಯಲ್ನರ್ವ್ ಪ್ಯಾರಲಿಸಿಸ್ ಆಗಿರಬಹುದಾಗಿದೆ ಎಂಬ ವರದಿಯನ್ನು ನೀಡಿರುತ್ತಾರೆ. ಆದರೆ ಫ್ರಾಕ್ಚರ್ ಆಗಿರುವ ಕುರಿತು ದೃಢೀಕರಿಸಿರುವುದಿಲ್ಲ. ವೈದ್ಯರ ತಂಡವು ಸೂಚಿಸಿದಂತೆ ಅಲೋಪತಿ ಜೊತೆಗೆ ಆಯುರ್ವೇದಿಕ್ ಚಿಕಿತ್ಸೆಯನ್ನು ನೀಡಲಾಗಿರುತ್ತದೆ.

ದಿನಾಂಕ: 25.10.2025 ರಂದು ತಜ್ಞರ ಸಮಿತಿಯು ಆನೆಯನ್ನು ಪರಿಶೀಲಿಸಿದ್ದು, ಕಾಲಿನ ಊತಕ್ಕೆ ಕೆಲವು ದಿನಗಳವರೆಗೆ ನೀಡಬೇಕಾದ ಚಿಕಿತ್ಸೆಯನ್ನು ಬಿಡಾರದ ಪಶುವೈದ್ಯರಿಗೆ ತಿಳಿಸಿ, ಕಾಲಿನ ಊತವು ಇಳಿದ ನಂತರ ಹೈಡ್ರೊಥೆರಪಿಯಂತಹ ಚಿಕಿತ್ಸೆ ಒದಗಿಸಬೇಕಾಗಿರುವುದಾಗಿ ತಿಳಿಸಿರುತ್ತಾರೆ. ವೈದ್ಯರ ಸಲಹೆಯಂತೆ ನಿರಂತರವಾಗಿ ಬಿಸಿನೀರಿನಿಂದ ಹೈಡ್ರೊಥೆರಪಿ ನೀಡುವುದರ ಜೊತೆಗೆ, ಕಾಲಿಗೆ ತಜ್ಞ ವೈದ್ಯರಿಂದ ಫೈಬರ್ ಕಾಸ್ಟಿಂಗ್ ಬ್ಯಾಂಡೇಜ್ ಅಳವಡಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ವೈಲ್ಡ್ಲೈಫ್ ಎಸ್..ಸ್. ಆಗ್ರಾ ತಂಡದ ತಜ್ಞವೈದ್ಯರು ಎಕ್ಸ್ರೇ ಪರಿಶೀಲನೆ ನಡೆಸಿರುತ್ತಾರೆ. ಆದರೆ ಫ್ರಾಕ್ಚರ್ ಆಗಿರುವ ಕುರಿತು ದೃಢೀಕರಿಸಿರುವುದಿಲ್ಲ. ಈಗಾಗಲೇ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಅವಶ್ಯಕವಾದ ಚಿಕಿತ್ಸೆಯನ್ನು ಮುಂದುವರೆಸುವಂತೆ ಸಲಹೆ ನೀಡಿರುತ್ತಾರೆ. ಫೈಬರ್ ಕಾಸ್ಟಿಂಗ್ ಬ್ಯಾಂಡೇಜ್ ಅಳವಡಿಸಿ ತೆಗೆದ ನಂತರದಲ್ಲಿ ಕಾಲಿನ ಊತವು ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳುವುದರ ಜೊತೆಗೆ ಆನೆಯು ಕಾಲಿನ ಮೇಲೆ ಭಾರ ಹಾಕಿ ನಡೆದಾಡುತ್ತಿದೆ. ಮುಂದುವರೆದು ತಜ್ಞ ವೈದ್ಯರ ಸಮಿತಿ ಮತ್ತು ಇತರೆ ತಜ್ಞ ವೈದ್ಯರುಗಳು ಸೂಚಿಸಿದಂತೆ ಕ್ರಾಲ್ ಪ್ರದೇಶದಲ್ಲಿ ನಿರಂತರವಾಗಿ ಚಿಕಿತ್ಸೆಯನ್ನು ಮುಂದುವರೆಸಲಾಗುತ್ತಿದ್ದು ಪ್ರಸ್ತುತ ಆನೆಯು ಆರೋಗ್ಯಕರವಾಗಿರುತ್ತದೆ.

ಉಳಿದಂತೆ ಶಿಬಿರದ ಬಾಕಿ ಎಲ್ಲಾ ಅನೆಗಳು ಆರೋಗ್ಯಕರವಾಗಿರುತ್ತವೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments