ಶಿವಮೊಗ್ಗ, ಮಾ.5: ಈ ದೇಶದಲ್ಲಿ ಅಸ್ಪೃಶ್ಯ ಸಮಾಜದ ಏಳಿಗಾಗಿ ಅಂಬೇಡ್ಕರ್ ಮತ್ತು ಬಾಬುಜೀ ಅವರು ಹಾಕಿಕೊಟ್ಟಿರುವ ಮಾರ್ಗವನ್ನು ನಾವು ಗ್ರಹಿಸದೆ ಹೋದರೆ ನಮಗೆ ನಾವೇ ವಂಚನೆ ಮಾಡಿಕೊಂಡಂತೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸತೀಶ್ ಜಿ.ಕೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದೊಂದಿಗೆ ಭಾನುವಾರ ನಗರ ಕುವೆಂಪು ರಂಗಮಂದಿರದಲ್ಲಿ ಆಯೋಜಿದ್ದ ಹಸಿರು ಕ್ರಾಂತಿ ಹರಿಕಾರ, ಭಾರತದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸತತವಾಗಿ 40 ವರ್ಷಗಳ ಕಾಲ ಬಾಬು ಜಗಜೀವನ್ ರಾಮ್ ಸಂಸತ್ತಿನ ಸದಸ್ಯರಾಗಿದ್ದರು. 1935 ರಿಂದ 1986 ಜು.6 ರವರೆಗೆ ಸಕ್ರೀಯ ರಾಜಕೀಯದಲ್ಲಿ ತೊಡಗಿದ್ದರು. ಇವರ ಕುರಿತು ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರು ಕೂಡ “ ಕೊನೆಗೂ ನಮ್ಮ ಬಾಬು ಛೆರ್ಮನ್ ಆಗ್ಲಿಲ್ಲ” ಎಂದ ಲೇಖನ ಬರೆದಿದ್ದರು. ಲೇಖನದಲ್ಲಿ ಕಪ್ಪು ಬಣ್ಣದ ಹಿಂದೆ ಅರ್ಧ ಶತಮಾನದ ನೋವು ಇದೆ. ಬಾಬು ಮುಖದಲ್ಲಿ ಈ ದೇಶದ ಕೋಟ್ಯಾಂತ ಜನರ ಭವಿಷ್ಯ ಕಂಡಿದ್ದೇನೆ, ಈ ಒತ್ತು ನನ್ನಲ್ಲಿ ವ್ಯಂಗ್ಯ ಸತ್ತು ಕಣ್ಣಲ್ಲೆ ನೀರು ಚಿನುಗುತ್ತಿದೆ ಎಂದು ಭಾವನ್ಮಾಕವಾಗಿದ್ದರು ಎಂದು ತಿಳಿಸಿದರು.
ಬಾಬುಜೀ ಅವರು ಈ ದೇಶದ ಬಹಿಷ್ಕೃತ ಹಾಗೂ ಅಸ್ಪೃಶ್ಯ ಸಮಾಜದಲ್ಲಿ ಹುಟ್ಟಿ, ಸಮಾಜ ಮುಖ್ಯವಾಹಿನಿಗೆ ಬಂದು ದೇಶದಲ್ಲಿ ಕಾನೂನು ರಚಿಸಿದರು. ಭಾರತ ಮಾತೆಯ ಜನ್ಮ ತಾಳಿರುವ ಅಮೂಲ್ಯ ರತ್ನಗಳಲ್ಲಿ ಬಾಬುಜೀ ಅವರು ಒಬ್ಬರು. ಈ ದೇಶದಲ್ಲಿ ಅಸ್ಪೃಶ್ಯ ಸಮಾಜದ ಏಳಿಗಾಗಿ ಅಂಬೇಡ್ಕರ್ ಮತ್ತು ಬಾಬುಜೀ ಅವರು ಹಾಕಿಕೊಟ್ಟಿರುವ ಮಾರ್ಗವನ್ನು ಗ್ರಹಿಸದೆ ಹೋದರೆ ನಮಗೆ ನಾವೇ ವಂಚನೆ ಮಾಡಿಕೊಂಡಂತೆ.
ಬಾಬುಜೀ ತನ್ನ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ವಿದ್ಯಾರ್ಥಿ ಸಂಘಟನೆಯನ್ನ ಕಟ್ಟುತ್ತಾರೆ. ಆ ಮೂಲಕ ಶೋಷಣೆಯ ವಿರುದ್ದ ಹೋರಾಡುತ್ತಾರೆ. ಇದನ್ನು ಗಮನಿಸಿದ ಮದನ ಮೋಹನ್ ಮಾಳವಿಯ ಅವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಓದಲು ಅವಕಾಶ ಕಲ್ಪಿಸಿಕೊಡುತ್ತಾರೆ. ಅಲ್ಲಿ ಅವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಅದರ ವಿರುದ್ದ ಅನೇಕ ಹೋರಾಟ ಮಾಡುತ್ತಾರೆ. ನಂತರ ಕಲ್ಕತ್ತಕ್ಕೆ ಪದವಿ ವಿದ್ಯಾಭ್ಯಾಸಕ್ಕಾಗಿ ಹೋದಾಗ ಅಲ್ಲಿ ಕಾರ್ಮಿಕ ಸಂಘಟನೆ ಕಟ್ಟುತ್ತಾರೆ. ಈ ಬೆಳವಣಿಗೆ ಇವರನ್ನು ದೇಶಕ್ಕೆ ಪರಿಚಯ ಮಾಡುತ್ತದೆ. ನಂತರದಲ್ಲಿ ರೈತರಿಗೆ ಹಾಗೂ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ಎಚ್ಚರಿಸುತ್ತಾರೆ. ಬಾಬುಜೀ ಸದಾ ಜನರ ಜೊತೆಗೆ ಬೆರೆಯುವುದು, ಅವರ ನೋವನ್ನು ಆಲಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದರು ಎಂದು ಹೇಳಿದರು.
1937 ರಲ್ಲಿ ಅಸ್ಪೃಶ್ಯತೆ ನಿವಾರಣೆಯ ಸಭೆಯಲ್ಲಿ ಪಾಲ್ಗೊಂಡಿದ್ದರು, ಈ ಸಭೆಯಲ್ಲಿ ಹಿಂದು ಮಹಾಸಭಾ, ಆರ್ಯ ಸಭಾ ಕೂಡ ಭಾಗಿಯಾಗಿರುತ್ತದೆ. ಆದರೆ ಇವರ ಭಾಷಣಗಳೆಲ್ಲಾ ಮೇಲ್ಪದರಕ್ಕೆ ಮಾತ್ರ ಸಿಮೀತವಾಗಿದ್ದು, ನಂತರ ಬಾಬುಜೀ ಸರದಿ ಬಂದಾಗ ಮೇಲ್ವರ್ಗದವರ ಬಳಿ ಇರುವ ನೂರಾರು ಎಕರೆ ಜಮೀನುಗಳನ್ನು ಈ ಸಮಾಜದ ಶೋಷಿತರಿಗೆ ಹಂಚಿ ನಿಮ್ಮ ಸರಿ ಸಮಾನವಾಗಿ ಕಾಣಿ, ಆಗ ಸಮಾನತೆ ಸೃಷ್ಟಿಯಾಗುತ್ತದೆ. ಅದು ಬಿಟ್ಟು ಇಂತಹ ಬೊಗಳೆ ಭಾಷಣ ಮಾಡಬೇಡಿ ಎಂದು ದಿಟ್ಟವಾಗಿ ತಿಳಿಸಿದ್ದರು ಎಂದರು.
ದಲಿತರ ರವಿದಾಸ್ ಚಳುವಳಿಯಲ್ಲಿ ತೊಡಗಿಕೊಳ್ಳುವ ಬಾಬುಜೀ ಅವರು ಅದನ್ನು ರಾಜಕೀಯ ಶಕ್ತಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುತ್ತಾರೆ. ನಂತರ ಡಿಪ್ರೆಸ್ ಕ್ಲಾಸ್ ಲೀಗ್ ಸ್ಥಾಪನೆ ಮಾಡುತ್ತಾರೆ. ಇದರಿಂದ ರಾಜಕೀಯಕ್ಕೆ ಹೆಜ್ಜೆ ಇಡುತ್ತಾರೆ. ಆರಂಭದಲ್ಲಿ ಅವಿರೋಧವಾಗಿ ಆಯ್ಕೆ ಆಗುತ್ತಾರೆ. ಆ ಮೂಲಕ ಈ ದೇಶದ ದುಡಿಯುವ ವರ್ಗಕ್ಕೆ ಬಲ ತುಂಬುತ್ತಾರೆ. ಕಾರ್ಮಿಕರಿಗೆ ವಿಮಾ, ಸೇವಾ ಭದ್ರತೆ, ಕನಿಷ್ಟ ವೇತನ, ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೆ ಅನುಕೂಲ ಮಾಡುತ್ತಾರೆ. ಬಾಬುಜೀ ಶಿಕ್ಷಣ ಮಂತ್ರಿಯ ಆಪ್ತ ಸಹಾಯಕರಾಗಿದ್ದಾಗ ದಲಿತ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿ ಮಾಡಿಸುತ್ತಾರೆ. ವಿಮಾನ ಯಾನ ಉಳ್ಳವರ ಸ್ವತ್ತಲ್ಲ ಎಲ್ಲರಿಗು ತಲುಪಬೇಕೆಂದು ಅನುಕೂಲ ಮಾಡಿಕೊಡುತ್ತಾರೆ. ರೈಲ್ವೆಯನ್ನು ಮೇಲ್ದರ್ಜೆಗೆ ಏರಿಸಿ ಅಲ್ಲಿನ ನೌಕರರಿಗೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಭಾರತ ಸ್ವಾತಂತ್ರವಾಗಿ ಆಹಾರ ಸ್ವಾವಲಂಬನೆ ಬೆಳೆಸಿಕೊಳ್ಳಲು ಬಾಬುಜೀ ಡಾ.ಸ್ವಾಮಿನಾಥ ತಂಡದೊಂದಿಗೆ ವಿದೇಶವನ್ನು ಸುತ್ತಿ ಅಧ್ಯಯನ ನಡೆಸಿ ಆಧುನಿಕ ಕೃಷಿ ಮಾಡಿ ಭಾರತದಲ್ಲಿ ಹಸಿರುಕ್ರಾಂತಿ ಮಾಡಿದರು ಎಂದು ಸ್ಮರಿಸಿದರು.
