ಶಿವಮೊಗ್ಗ, ಏ.8: ಜಗತ್ತಿನ ಬಹುತೇಕ ಭಾಷೆಗಳ ಶ್ರೇಷ್ಠ ಕಾವ್ಯಗಳು ಯುದ್ದ ವಿರೋಧಿಗಳೇ ಆಗಿವೆ ಎಂದು ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಮತ್ತು ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಿಸಿದರು.
ಮಂಗಳವಾರ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಬಹುಮುಖಿ ಸಂಘಟನೆಯು ಏರ್ಪಡಿಸಿದ್ದ “ಯುದ್ಧದ ಒಳ ಹೊರಗು” ಕುರಿತ ಚರ್ಚೆಯಲ್ಲಿ ಮಾತನಾಡಿದರು.
ಮಹಾಭಾರತ ಕುರುಕ್ಷೇತ್ರ ಅಥವಾ ಯುದ್ಧವೆಂದು ಹೇಳಿದರೂ ಅದು ಕಡೆಯಲ್ಲಿ ಯುದ್ಧ ವಿರೋಧಿ, ವಿನಾಶಕಾರಿ ಎಂಬುದನ್ನು ನಿರೂಪಿಸುತ್ತದೆ. ಕುರುಕ್ಷೇತ್ರ ಯುದ್ಧದ ನಂತರ ಕುಂತಿ, ಗಾಂಧಾರಿ, ಪಾಂಚಾಲಿ ಸಮಾನ ದುಃಖಿಗಳಾಗಿರುತ್ತಾರೆ. ಯುದ್ಧದ ಅಂತ್ಯದಲ್ಲಿ ನಮಗೆ ಸಿಗುವುದು ಶವಗಳು, ವಿನಾಶದ ಕುರುಹುಗಳು ಮತ್ತು ಎಲ್ಲವನು ಕಳೆದುಕೊಂಡ ದುಃಖಿಗಳೆ ಹೊರತು ಮತ್ಯಾವ ಲಾಭವೂ ಇಲ್ಲ ಎಂದು ಪ್ರತಿಪಾದಿಸಿದರು.
ಕವಯತ್ರಿ ಸವಿತಾ ನಾಗಭೂಷಣ ಮಾತನಾಡಿ, ಪುರಾತ ಕಾಲದಿಂದಲೂ ಯುದ್ಧಕ್ಕೆ ಅಂತ್ಯವೇ ಇಲ್ಲವೇನೋ ಎನಿಸುತ್ತದೆ. ಯುದ್ದದ ಭೀಕರತೆ, ಸಾವು, ನೋವುಗಳನ್ನು ನೋಡಿದಾಗ, ಯುದ್ಧದ ಪರಿಣಾಮ ಗೊತ್ತಿದ್ದೆ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧೀಜಿ ಶಾಂತಿ ಹೋರಾಟಕ್ಕೆ ನಮ್ಮನ್ನು ಅಣಿಗೊಳಿಸಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ವಿರುದ್ಧ ಶಾಂತಿ ಯುದ್ಧ ಸಾರಿ ಕೋಟ್ಯಂತರ ಭಾರತೀಯರನ್ನು ಬದುಕಿಸಿದರು. ಆದರೆ, ಈಗಿನ ಯುದ್ಧ ನಮ್ಮದಲ್ಲದಿದ್ದರೂ ಅದರ ಪರಿಣಾಮಗಳನ್ನು ಪ್ರತಿದಿನವೂ ಎದುರಿಸುತ್ತಿದ್ದೇವೆ ಎಂದರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿನಿ ವೈ.ಎಚ್.ಸ್ಫೂರ್ತಿ ಮಾತನಾಡಿ, ನಾವು ನೋಡಿದ ಸಿನಿಮಾಗಳು, ಓದಿದ ಪಠ್ಯಗಳ ಪರಿಣಾಮವಾಗಿ ಯುವಜನರಲ್ಲಿ ಯುದ್ಧವನ್ನು ಖುಷಿಯಿಂದ ನೋಡುವ ಮನಸ್ಥಿತಿ ಬಂದಿದೆ. ಪುರುಷ ಸಮಾಜದ ಸರ್ವಾಧಿಕಾರಿ ಯುದ್ಧ ಮನೋಭಾವಕ್ಕೆ ಹೆಂಗಸರ ಅನುಮತಿ ಇಲ್ಲ. ಯುದ್ಧ ಮಾಡುವವರು ಪುರುಷರೇ ಆದರೂ ಅದರ ದುಷ್ಪರಿಣಾಮವನ್ನು ಎದುರಿಸುವವರು ಅಜ್ಜಿ, ತಾಯಿ, ಅಕ್ಕ, ತಂಗಿ, ಮಗಳ ರೂಪದಲ್ಲಿ ಮಹಿಳೆಯರೇ ಆಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿನ ಯುದ್ಧದ ಹಿಂದಿನ ಸ್ವಾರ್ಥ ಮತ್ತು ಸರ್ವಾಧಿಕಾರಿ ಮನೋಭಾವದ ಕುರಿತು ವಿಡಿಯೊ ಚಿತ್ರಣಗಳ ವಿಶ್ಲೇಷಿಸಿದ ಸಾಮಾಜಿಕ ಕಾರ್ಯಕರ್ತ ಮುಸ್ತಫ ಬೇಗ್, ಇವತ್ತಿನ ಯುದ್ದ ಕೇವಲ ಜನ ಸಾಮಾನ್ಯರನ್ನು ಗುರಿ ಮಾಡಿಕೊಂಡು ದಾಳಿ ಮಾಡಲಾಗುತ್ತಿದೆ. ಅಮಾಯಕರನ್ನು ಹತ್ಯೆಗೈಯಲಾಗುತ್ತಿದೆ ಎಂದರು.
ಯುದ್ಧ ಗೆಲ್ಲುತ್ತೇವೆ ಎನ್ನುವುದೆ ಭ್ರಮೆ, ಯುದ್ದದಿಂದ ಯಾರಿಗೂ ಲಾಭವಿಲ್ಲ, ಯುದ್ಧ ವಿನಾಶಕಾರಿ; ಗೆದ್ದವರು ಮತ್ತು ಸೋತವರಿಗೆ ಅಂತ್ಯದಲ್ಲಿ ಸಿಗುವುದು ದುಃಖ, ನೋವು, ವಿಷಾದ ಮತ್ತು ಒಂದಿಷ್ಟು ಬರಡು ಭೂಮಿಯೇ ಹೊರತು ಮತ್ತೇನು ಅಲ್ಲ. ಸ್ವಾರ್ಥ ರಹಿತ ಪ್ರೀತಿ, ಸ್ನೇಹ, ಸಹನೆ ನಮ್ಮ ಆದ್ಯತೆಯಾದಾಗ ಯುದ್ಧ ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಎಲ್ಲೋ ನಡೆಯುತ್ತಿರುವ ಯುದ್ದಗಳು ಕೇವಲ ದೇಶಗಳ ಆಡಳಿತದ ನಡುವೆ ಅಲ್ಲದೆ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟರು. ಮಹಾಭಾರತ ಕಾಲದಿಂದಲೂ ನಡೆದ ಯುದ್ದಗಳ ಪರಿಣಾಮಗಳು ಶೋಕವನ್ನೇ ಹೇಳುತ್ತಿದ್ದರೂ ಈಗಲೂ ಯುದ್ಧಕ್ಕೆ ಹಪಹಪಿಸುತ್ತಿರುವ ಸರ್ವಾಧಿಕಾರಿ ಮನೋಭಾವ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡಿತು.
