Homeಜಿಲ್ಲೆಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ- ವನ್ಯಪ್ರಾಣಿ ಸಿಂಗಳಿಕ ಸಂಪೂರ್ಣ ವಿನಾಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ- ವನ್ಯಪ್ರಾಣಿ ಸಿಂಗಳಿಕ ಸಂಪೂರ್ಣ ವಿನಾಶ

Spread the love

ಶಿವಮೊಗ್ಗ, ಏ.15 : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಅವೈಜ್ಞಾನಿಕವಾಗಿದೆ. ಸುಮಾರು 54 ಹೆಕ್ಟೀರ್ ಅರಣ್ಯ ಪ್ರದೇಶ ಸಂಪೂರ್ಣ ನಾಶಗೊಳ್ಳಲಿದೆ. 16 ಸಾವಿರಕ್ಕೂ ಹೆಚ್ಚು ಮರಗಳ ಕಡಿತವಾಗಲಿದೆ. ಇದರಿಂದ ವನ್ಯಪ್ರಾಣಿ ಸಿಂಗಳಿಕ ಸಂಪೂರ್ಣ ವಿನಾಶವಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಾಚಾರ್ ಜೋಯಿಸ್ ತಿಳಿಸಿದರು.

ರಾಷ್ಟ್ರಭಕ್ತ ಬಳಗದಿಂದ ಆಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧದ ಬೃಹತ್ ಪ್ರತಿಭಟನೆಗೆ ಜಿಲ್ಲಾ ಕೈಗಾರಿಕಾ ಸಂಘ ಮತ್ತು ಅಣ್ಣಾ ಹಜಾರೆ ಹೋರಾಟ ಸಮಿತಿ ಬೆಂಬಲ ಸೂಚಿಸಿದ್ದು, ನಾಳೆ ನಡೆಯಲಿರುವ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳುವುದಾಗಿ ಇಂದು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಅವರು,

ಪ್ರಕೃತಿಯ ಏರುಪೇರಾಗಿ ಮಳೆಯೇ ಇಲ್ಲವಾಗಬಹುದು. ಬೆಳೆಯೂ ಹಾನಿಯಾಗುತ್ತದೆ. ಈ ಯೋಜನೆಯಲ್ಲಿ ಸುರಂಗ ಮಾರ್ಗ ಬೇಕಾಗಿದ್ದು, ಇದಕ್ಕಾಗಿ ಸುಮಾರು 18 ಟನ್ ಸ್ಫೋಟಕವನ್ನು ಬಳಸಬೇಕಾಗುತ್ತದೆ. ಈ ಸ್ಫೋಟಕ ಬಳಕೆಯಿಂದ ವನ್ಯಪ್ರಾಣಿಯ ಸಂಕುಲವೇ ಸಂಕಷ್ಟಕ್ಕೆ ಸಿಲುಕಲಿದೆ. ಒಂದು ಪಟಾಕಿಯನ್ನು ಸಿಡಿಸಿದರೆ ಸಾಕು ಹಲವು ದಿನಗಳ ಕಾಲ ಮಂಗಗಳೇ ಅಲ್ಲಿಗೆ ಬರುವುದಿಲ್ಲ. ಅಂತಹದರಲ್ಲಿ ಟನ್‌ಗಟ್ಟಲೆ ಸ್ಫೋಟಕ ಬಳಸಿದರೆ ಪ್ರಾಣಿ, ಪಕ್ಷಿ, ಜೀವ ಸಂಕುಲದ ಗತಿ ಏನು ಎಂದು ಪ್ರಶ್ನಿಸಿದರು.

ಈ ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಒಪ್ಪಿಲ್ಲ. ಅಲ್ಲದೆ ಕೆಪಿಸಿಎಲ್‌ನವರು ಈ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿಲ್ಲ. ಡಿಪಿಆರ್‌ನ್ನು ರಹಸ್ಯವಾಗಿ ಇಡಲಾಗಿದೆ. ಯಾವ ವರದಿಗಳೂ ಬಹಿರಂಗಗೊಳ್ಳದೆ ಗೌಪ್ಯವಾಗಿಟ್ಟುಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದಲೂ ಅನುಮತಿ ಸಿಕ್ಕಿಲ್ಲ. ಅಲ್ಲದೆ, ರಾಜ್ಯದಲ್ಲಿ ಸರ್ಕಾರ ತಿಳಿಸಿದಂತೆ ವಿದ್ಯುತ್ ಕೊರತೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕ ಯೋಜನೆಯನ್ನು ಜಾರಿಮಾಡಲು ಹೊರಟಿರುವುದು ಅತ್ಯಂತ ದುರಂತವಾಗಿದೆ. ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲಿ ಈ ಯೋಜನೆಗೆ ಯಾವ ರೀತಿಯ ಅನುಮತಿ ನೀಡಬಾರದು. ಇದರ ವಿರುದ್ಧ ನಾವು ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದರು.

ಗಮನಿಸಿ: ಮಹಿಳಾ ಮೀಸಲಾತಿ- ಮೋದಿಗೆ ಕೃತಜ್ಞತೆ: ಬಿ.ವೈ.ರಾಘವೇಂದ್ರ

ಅಣ್ಣಾ ಹಜಾರೆ ಹೋರಾಟ ಸಮಿತಿಯ ಮುಖಂಡ ಡಾ. ಚಿಕ್ಕಸ್ವಾಮಿ ಮಾತನಾಡಿ, ಸರ್ಕಾರ ಪ್ರಕೃತಿಗೆ ವಿರುದ್ಧವಾದ ಯಾವುದೇ ಯೋಜನೆಗಳನ್ನು ಜಾರಿ ಮಾಡುವುದು ತರವಲ್ಲ. ಪ್ರಕೃತಿ ಉಳಿದರೆ ಮನುಷ್ಯ ಉಳಿಯುತ್ತಾನೆ. 3ನೇ 1 ಭಾಗ ಕಾಡು ಇರುವುದು ಕಡ್ಡಾಯವಾಗಿದ್ದರೂ ಕೂಡಾ ಈಗ ಅರಣ್ಯ ಲೂಟಿಯಾಗುತ್ತಿದೆ. ಅದರಲ್ಲೂ ಇಂತಹ ಯೋಜನೆಗಳಿಂದ ಅರಣ್ಯ ಸಂಪೂರ್ಣ ನಾಶವಾಗುತ್ತದೆ. ಮನುಷ್ಯರಾದ ನಾವು ಈಗ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಈ ಯೋಜನೆಯನ್ನು ರದ್ದು ಮಾಡಲೇಬೇಕು. ಹಾಗಾಗಿ ನಾಳೆ ನಡೆಯುವ ಬೃಹತ್ ಸೈಕಲ್ ಮತ್ತು ಬೈಕ್, ಕಾರು ವಾಹನಗಳ ಜಾಥಾದ ಪ್ರತಿಭಟನೆಯಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂದರು.

ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ಮಾತನಾಡಿ, ಪ್ರಕೃತಿ ಇದ್ದರೆ ನಾವು, ಇಲ್ಲದಿದ್ದರೆ ನಮ್ಮ ಅಸ್ತಿತ್ವಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಈ ಪ್ರಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮ ಅನಿವಾರ್ಯವಾಗಿದೆ. ಈ ಅವೈಜ್ಞಾನಿಕ ಯೋಜನೆಯ ವಿರುದ್ಧ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಕೆಸಿಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಕೂಡಾ ಮನವಿ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಈ ಎರಡೂ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ರಾಷ್ಟ್ರಭಕ್ತ ಬಳಗದ ಶ್ರೀಕಾಂತ್ ಮಾತನಾಡಿ, ನಾಳಿನ ವಾಹನಗಳ ಜಾಥಾದಲ್ಲಿ ಸೈಕಲ್ ಮತ್ತು ಬೈಕ್‌ಗಳು ಪ್ರತ್ಯೇಕ ಮಾರ್ಗದಲ್ಲಿ ಫ್ರೀಡಂ ಪಾರ್ಕ್ ನಿಂದ ಸಾಗುತ್ತವೆ. ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮಹಾವೀರ ವೃತ್ತದಲ್ಲಿ ಸೇರುತ್ತವೆ. ಅಲ್ಲಿ ಬಹಿರಂಗ ಸಭೆ ಇದ್ದು, ಈ ಹೋರಾಟಕ್ಕೆ ಸಾರ್ವಜನಿಕರು, ಪರಿಸರಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆನಂದ ಕಡೂರು, ಚಂದ್ರಪ್ಪ ಎ.ಕೆ., ಪ್ರಕಾಶ್ ಎಸ್.ಜಿ.ಎಂ., ವಿಜಯ್‌ಕುಮಾರ್, ಟಿ.ಎಂ. ಕುಮಾರ್ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments