Homeಜಿಲ್ಲೆಪರಿಸರ ಮಾರಕವಾಗುವ ಯೋಜನೆಗಳನ್ನು ಜಾರಿಗೊಳಿಸಬಾರದು: ಕೆ.ಎಸ್.ಈಶ್ವರಪ್ಪ

ಪರಿಸರ ಮಾರಕವಾಗುವ ಯೋಜನೆಗಳನ್ನು ಜಾರಿಗೊಳಿಸಬಾರದು: ಕೆ.ಎಸ್.ಈಶ್ವರಪ್ಪ

Spread the love

ಶಿವಮೊಗ್ಗ,ಏ.16  : ಪಶ್ಚಿಮ ಘಟ್ಟದ ಅತೀಸೂಕ್ಷ್ಮ ಪ್ರದೇಶವಾದ ಶರಾವತಿ ಕಣಿವೆಯಲ್ಲಿ ಯಾವುದೇ ಪರಿಸರ ಮಾರಕ ಯೋಜನೆಗಳನ್ನು ಜಾರಿಗೊಳಿಸದೆ ಅನುಮತಿ ನೀಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.

ಅವರು ಇಂದು ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಹಾಗೂ ವಿವಿಧ ಪರಿಸರ ಹೋರಾಟ ಸಂಘಟನೆಗಳ ಸಹಯೋಗದೊಂದಿಗೆ  ಪ್ರಸ್ತಾವಿತ ಸುಮಾರು 10,500 ಕೋಟಿ ರೂಪಾಯಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಆಯೋಜಿಸಿದ್ದ ಬೃಹತ್ ಸೈಕಲ್, ಮೋಟಾರ್ ಬೈಕ್, ಕಾರುಗಳ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ಜನವಿರೋಧಿ ಯೋಜನೆಯ ವಿರುದ್ಧ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾ ರ‍್ಯಾಲಿ ಆಗಿದ್ದು ಇಂದೇ ಎಂದ ಅವರು ನಾಗರೀಕರಿಗೆ ಯಾವುದೇ ತೊಂದರೆ ಆಗದ ಹಾಗೆ ಈ ರ‍್ಯಾಲಿ ನಡೆದಿದೆ. ರಾಜ್ಯ ಸರ್ಕಾರ ಈ ಮಾರಕ ಯೋಜನೆಗೆ ಶತಾಯ-ಗತಾಯ ಮುಂದಾಗಿದೆ. ಈ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿದೆ. ಈ ಭಾಗದ ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವನವೇ ದುಸ್ತರವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಯಾಗ ಕೂಡದು ಒಂದು ವೇಳೆ ಈ ಯೋಜನೆ ಜಾರಿಯಾದರೆ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಇಂಧನ ಸಚಿವರಿಗೆ ಮುತ್ತಿಗೆಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ಉಗ್ರ ಹೋರಾಟದ ರೂಪು-ರೇಷೆ ಚರ್ಚಿಸಲು ಏಪ್ರಿಲ್ ೨೨ರಂದು ಪರಿಸರಾಸಕ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದರು.

ಗಮನಿಸಿ: ಶೀಘ್ರದಲ್ಲೇ ಕಲುಷಿತ ಕುಡಿಯುವ ನೀರಿನ ಸಮಸ್ಯೆ ನಿವಾರಣೆ

ಪ್ರತಿಭಟನಾ ರ‍್ಯಾಲಿಯನ್ನು ಉದ್ಘಾಟಿಸಿದ ಖ್ಯಾತ ನರರೋಗ ತಜ್ಞ ಡಾ.ಶಿವರಾಮಕೃಷ್ಣ ಮಾತನಾಡಿ, ಪರಿಸರ ಮಾರಕ ಯೋಜನೆಗೆ ರಾಜ್ಯ ಸರ್ಕಾರ ಕೈ ಹಾಕಿರುವುದು ತಪ್ಪು. ಪ್ರಕೃತಿ ನಮಗೆ ಗಾಳಿ, ಮಳೆ, ಬೆಳಕನ್ನು ನೀಡಿದೆ. ವೈದ್ಯರಾದ ನಾವು ಕಾಯಿಲೆ ಬರುವುದರೊಳಗೆ ಅವುಗಳನ್ನು ತಡೆಗಟ್ಟಿ ಎಂದು ರೋಗಿಗಳಿಗೆ ಸಲಹೆ ನೀಡುತ್ತೇವೆ. ಇದಕ್ಕೆ ಪೂರಕವಾಗಿ ಪ್ರಕೃತಿ ಇರಬೇಕಾಗಿದೆ. ಅದನ್ನು ನಾವು ಸಂರಕ್ಷಿಸಬೇಕಾಗಿದೆ. ಈ ಯೋಜನೆಯನ್ನು ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಸಲಹೆ ನೀಡಿದ ಅವರು, ಪರಿಸರ ಮೇಲಿನ ದಾಳಿಯನ್ನು ತಡೆಯಲು ಎಲ್ಲರೂ ಸಂಘಟಿತರಾಗಬೇಕು ಎಂದರು.

ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಮಳೆಗಾಲ ಬರಲು ಇನ್ನೂ ಮೂರು ತಿಂಗಳು ಇದೆ. ಇಂತಹ ಸಂದರ್ಭದಲ್ಲಿಯೇ ಈಗಾಗಲೇ ನಾವು 38-40 ಡಿಗ್ರಿ ಉಷ್ಣತಾ ಮಾನವನ್ನು ಅನುಭವಿಸುತ್ತಿದ್ದೇವೆ. ಭೀಕರ ಬಿಸಿಲು ಹೆಚ್ಚಾಗುತ್ತಿದೆ. ಮಳೆ ಕಡಿಮೆಯಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 16000 ಮರಗಳನ್ನು ಕಡಿಯಲಾಗುತ್ತಿದ್ದು ಇದು ಮುನುಷ್ಯರು ಸಹಿಸಿಕೊಳ್ಳಲು ಸಾಧ್ಯವಾಗದ ಸಂಗತಿಯಾಗಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ 18 ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದ್ದಾರೆ. ಆ ಮನವಿಯಲ್ಲಿ ಈ ಪರಿಸರ ಮಾರಕ ಯೋಜನೆಯ ಅಂಶವೂ ಇದೆ. ಕೇಂದ್ರ ಪರಿಸರ ಇಲಾಖೆಯ, ಕೇಂದ್ರ ಹವಾಮಾನ ಇಲಾಖೆ ತಜ್ಞರು ಈ ಯೋಜನೆಯನ್ನು ವಿರೋಧಿಸಿದ್ದಾರೆ. ತುಂಗಾ-ಭದ್ರಾ, ಶರಾವತಿ ನದಿಗಳು ತುಂಬಿ ಹರಿಯಲು ಅರಣ್ಯ ಮುಖ್ಯವಾಗಿದೆ ಎಂಬುದನ್ನು ಮುಖ್ಯಮಂತ್ರಿ ತಿಳಿದುಕೊಳ್ಳದೆ ಈ ಮನೆಹಾಳು ಯೋಜನೆಗೆ ಅನುಮತಿ ನೀಡಿ ಎಂದಿದ್ದು  ಪರಿಸರ ಪ್ರೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಕೆ.ಈ.ಕಾಂತೇಶ್ ಮಾತನಾಡಿ, ಸಚಿವ ಜಾರ್ಜ್ ಅವರೇ ಶಿವಮೊಗ್ಗ ಜನರಾದ ನಾವು ಯಾರೂ ಬಳೆತೊಟ್ಟಿಲ್ಲ. ನೀವು ಹೇರುವ ಯಾವುದೇ ಯೋಜನೆಯನ್ನು ನಾವು ಒಪ್ಪುವುದಿಲ್ಲ. ನೀವು ಯೋಜನೆ ಜಾರಿಗೊಳಿಸಿದರೆ ಶಿವಮೊಗ್ಗ ಪ್ರವೇಶಕ್ಕೆ ನಿಮಗೆ ಪ್ರವೇಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಯೋಜನೆಯನ್ನು ಜಾರಿಮಾಡಲು ಅವಕಾಶ ಕೊಡಬೇಡಿ ಎಂದು ಗುಡುಗಿದರು.

ಇದಕ್ಕೂ ಮುನ್ನ ಅಲ್ಲಮಪ್ರಭು ಮೈದಾನದಿಂದ ಪ್ರತಿಭಟನಾ ರ‍್ಯಾಲಿ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾವೀರ ವೃತ್ತದಲ್ಲಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಪಿ.ನಾರಾಯಣ, ಡಾ.ಶ್ರೀಪತಿ ಎಲ್.ಕೆ., ಡಾ.ಶೇಖರ್‌ಗೌಳೇರ್, ಈ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ ಜಾದವ್, ಶ್ರೀಕಾಂತ್, ಜನಾರ್ಧನ್ ಪೈ, ವಿಶ್ವೇಶ್ವರಯ್ಯ, ರಾಮಾಚಾರ್, ವಿನಯ್ ಶಿವಮೊಗ್ಗ, ರಮೇಶ್ ಜಾದವ್, ಸುವರ್ಣಾ ಶಂಕರ್, ಸೀತಾಲಕ್ಷ್ಮೀ, ಪ್ರಕಾಶ್ ಮೊದಲಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments