ಶಿವಮೊಗ್ಗ, ಏ.17: ಇಂದಿನ ವಿದ್ಯಾಮಾನದಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಮೈಂಡ್ ಸೆಟ್ ಮುಖ್ಯವಾಗಿದ್ದು, ದೃಢವಾದ ಮನಸ್ಸಿದ್ದರೆ ಅದುವೇ ಅವರಿಗೆ ಉತ್ತಮವಾದ ಔಷಧಿ ಎಂದು ಖಾತ್ಯ ಮನೋವೈದ್ಯರಾದ ಡಾ. ಡಿ. ಅರವಿಂದ ತಿಳಿಸಿದರು.
ಶುಕ್ರವಾರ ನಗರದ ಆರ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ “ಮನೋವಿಕಾಸ ಮತ್ತು ಗುಣಾತ್ಮಕ ಆಲೋಚನೆ ಅರಿವು” ಕುರಿತು ಏರ್ಪಡಿಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸದೃಢವಾಗಿರಬೇಕು. ದೈಹಿಕ ಆರೋಗ್ಯ ಕಡೆ ಮಾತ್ರ ಗಮನಹರಿಸದೆ ಮಾನಸಿಕ ಆರೋಗ್ಯದ ಕಡೆಗೂ ಜಾಗೃತಿ ವಹಿಸಬೇಕು. ಈ ತಾಂತ್ರಿಕ ಯುಗದಲ್ಲಿ ಯುವ ಸಮೂಹ ಮೊಬೈಲ್ ಗೀಳಿಗೆ ವಾಲಿಕೊಂಡಿದ್ದು, ಇದರಿಂದ ಅವರ ಮಾನಸಿಕ ಕ್ಷಮತೆ ಕುಂದುತ್ತಿದೆ. ಆಲೋಚನೆಯ ಕ್ರಮಗಳು ಕ್ಷೀಣಿಸುತ್ತಿವೆ. ಈಗಾಗಿ ಎಷ್ಟೋ ವಿದ್ಯಾರ್ಥಿಗಳು ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಗಮನಿಸಿ: ಏ.18 ರಂದು ನಾನೇ ಭಾರತ-ತಾಯಿ ಭಾರತಿಗೆ ಕನ್ನಡದಾರತಿ
ಎಷ್ಟೋ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕಡೆ ಲಕ್ಷ್ಯ ವಹಿಸದೆ ಕಿನ್ನತೆಗೆ ಒಳಗಾಗಿ ಕುಡಿತ, ಗಾಂಜಾ, ಡ್ರಗ್ ಗೆ ದಾಸರಾಗುತ್ತಿದ್ದಾರೆ. ವರ್ಷದಲ್ಲಿ ಸುಮಾರು 1.5 ಲಕ್ಷ ಯುವಕರು ಮಾನಸಿಕ ತೊಂದರೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದಾಖಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಬೇಕು ಎಂಬ ಆಸೆ, ಆಕಾಂಕ್ಷೆ ಹೊಂದಿರುತ್ತಾರೆ. ಆದರೆ ಆ ಸಾಧನೆ ಶಿಖರವೇರಲು ಏನು ಮಾಡಬೇಕೆಂದು ಗೊತ್ತೇ ಇರುವುದಿಲ್ಲ. ಮೊದಲು ವಿದ್ಯಾರ್ಥಿಗಳು ಅದನ್ನು ಅರಿಯಬೇಕು. ಸಾಧನೆ ಎಂಬುದು ಸುಲಭವಾಗಿ ದಕ್ಕುವುದಲ್ಲ. ಅದು ಕಠಿಣ ಪರಿಶ್ರಮದಿಂದ ಫಲಿಸುವ ಲಾಭ. ಅದಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಲು ಸಿದ್ದವಾಗಿರಬೇಕು. ತ್ಯಾಗದಿಂದ ಮಾತ್ರ ಸಾಧನೆಗೈಯಲು ಸಾಧ್ಯ.
ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳಿ, ಪ್ರತಿದಿನ ಅದನ್ನು ಯಥವತ್ತಾಗಿ ಪಾಲನೆ ಮಾಡಿ. ಕಾಲೇಜುಗಳಲ್ಲಿ ಶಿಕ್ಷಕರು ಕಲಿಸಿದ ಪಾಠವನ್ನು ಮನೆಗೆ ಬಂದ ನಂತರ ಮನನ ಮಾಡಿಕೊಳ್ಳಿ. ವಿಷಯವನ್ನು ಅರ್ಥೈಸಿಕೊಂಡು ಕಲಿಯಿರಿ. ನಿರಂತರವಾಗಿ ಕಲಿಕೆಯ ಕಡೆ ಗಮನಹರಿಸಿ ಇದರಿಂದ ಕಲಿತ್ತಿದ್ದು ಹೆಚ್ಚಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಸಲಹೆ ನೀಡಿದರು.
ಪರೀಕ್ಷೆಯಲ್ಲಿ ಫೇಲ್ ಆದರೆ ಅಥವಾ ನಾನು ಅಂದುಕೊಂಡಂತೆ ಗುರಿ ಮುಟ್ಟದೆ ಇದ್ದರೆ ಎಂದೆಲ್ಲಾ ತೀವ್ರವಾಗಿ ಆಲೋಚಿಸಬೇಡಿ. ಸೋಲು ಎಲ್ಲಾರ ಬದುಕಿನಲ್ಲಿ ಸಹಜವಾದದ್ದು, ಸೋಲಿಲ್ಲದ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಸೋಲಿನ ಬಗ್ಗೆ ಭಯ ಪಡಬೇಡಿ. ನಿಮ್ಮ ಓದಿನ ಬಗ್ಗೆ ಹೆಚ್ಚಿನ ಗಮನ ಇರಲಿ. ಬೇರೆ ಸಂಗತಿಯಿಂದ ವಿಚಲಿತರಾಗಬೇಡಿ. ತಂದೆ ತಾಯಿ ಕನಸಗಳ ಬಗ್ಗೆ ಗಮನ ಇರಲಿ. ಒಂದು ಬಾರಿ ನೀವು ಗೆದ್ದರೆ ಸಾಕು ನೀವು ಬಯಸಿದ್ದೆಲ್ಲಾ ದೊರೆಯುತ್ತದೆ ಎಂದು ಆತ್ಮವಿಶ್ವಾಸ ತುಂಬಿದ್ದರು.
ಕಾರ್ಯಾಗಾರದಲ್ಲಿ ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್, ಅಕಾಡೆಮಿ ನಿರ್ದೇಶಕಿ ಮೋನಿಷಾ ರಮೇಶ್, ಪ್ರಾಂಶುಪಾಲರಾದ ಮಂಗಳ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
