ಶಿವಮೊಗ್ಗ ,ಏ.22: ಪಿಯುಸಿ ಫಲಿತಾಂಶದಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶವೂ ಕೂಡ ಈ ಬಾರಿ ಉತ್ತಮ ಫಲಿತಾಂಶ ಬರಲಿದ್ದು, ಸಾಕಷ್ಟು ಸುಧಾರಣೆಯಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಬರಬೇಕಾಗಿತ್ತು. ಆದರೆ ಹಿಂದಿ ಭಾಷೆಗೆ ಅಂಕವನ್ನು ಕೊಡಬೇಕು ಎಂಬ ಹೈಕೋರ್ಟ್ ತೀರ್ಪಿನಂತೆ ಈ ಬಾರಿ ಅಂಕಗಳನ್ನು ನೀಡಲಾಗುತ್ತದೆ. ಆದರೂ ಕೂಡ ಗೊಂದಲಬೇಡ. ಫಲಿತಾಂಶ ಆದಷ್ಟುಬೇಗ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಒತ್ತಡವನ್ನು ತಪ್ಪಿಸುವ ಉದ್ದೇಶದಿಂದ ತೃತೀಯ ಭಾಷೆಗೆ ಕೇವಲ ಗ್ರೇಡ್ ಕೊಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಹೈಕೋರ್ಟ್ ಈ ವರ್ಷ ನೀವು ಅಂಕವನ್ನೇ ನೀಡಿ, ಮುಂದಿನ ಬಾರಿ ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದರಿಂದ ಹಿಂದಿ ಅಥವಾ ತೃತೀಯ ಭಾಷೆಗೂ ಕೂಡ ಅಂಕವನ್ನು ನೀಡಲಾಗುತ್ತದೆ. ಆದರೆ ಮುಂದಿನ ವರ್ಷಕ್ಕೆ ಮತ್ತೋಮ್ಮೆ ನ್ಯಾಯಾಲಯದ ಮೇಟ್ಟಿಲೇರಿ ಗ್ರೇಡ್ ಪದ್ಧತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಗಮನಿಸಿ:ಮಂಗನ ಕಾಯಿಲೆಯ ಮುಂಜಾಗೃತೆ ಕ್ರಮಕ್ಕೆ ಸಮನ್ವಯ ಸಮಿತಿ ರಚನೆ: ಮಧು
ಪಿಯುಸಿಯಲ್ಲೂ ಕೂಡ ಉತ್ತಮ ಫಲಿತಾಂಶ ಬಂದಿದ್ದು, ಸಾಕಷ್ಟು ಸುಧಾರಣೆಯಾಗಿದೆ. ಕಳೆದ ಸಾರಿ 30 ಸಾವಿರ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲೂ ಫೇಲಾಗಿದ್ದರು. ಆದರೆ ಈ ಬಾರಿ ಕೇವಲ 1777 ವಿದ್ಯಾರ್ಥಿಗಳು ಮಾತ್ರ ಎಲ್ಲಾ ವಿಷಯದಲ್ಲಿ ಫೇಲಾಗಿದ್ದಾರೆ. ಇದು ಉತ್ತಮವಾದ ಫಲಿತಾಂಶವಾಗಿದೆ. ನಾವು ಎಸ್‌ಎಸ್‌ಎಲ್‌ಸಿಗೆ ಶೇಕಡವಾರು ಕಡಿಮೆ ಮಾಡಿದ್ದರೂ ಕೂಡ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕವನ್ನು ಪಡೆದಿದ್ದಾರೆ. ತೃತೀಯ ದರ್ಜೆಯಲ್ಲಿ ಪಾಸಾದ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು, ಪೋಷಕರು ಮತ್ತು ಶಿಕ್ಷಣದಲ್ಲಿನ ಬದಲಾವಣೆಗಳು ಕಾರಣವಾಗಿವೆ ಎಂದರು.
