1990 – 2000 ದಶಕ ‘ಮಹಿಳಾ ಜಾಗೃತಿ‘ ಸಂಘಟನೆಯ ಪ್ರಗತಿಪರ ಚಳವಳಿ ಉತ್ತುಂಗದಲ್ಲಿದ್ದ ಕಾಲಘಟ್ಟ ಅದು, ಶಿವಮೊಗ್ಗ ವನ್ನು ಕೇಂದ್ರವಾಗಿರಿಸಿಕೊಂಡು ನಾಡಿನಾದ್ಯಂತ ಮಹಿಳೆಯರ ಹಕ್ಕು,ಸ್ವಾಭಿಮಾನದ ರಕ್ಷಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಅಹಿಂಸಾತ್ಮಕ ಹೋರಾಟದ ದೊಡ್ಡ ನದಿಯಂತೆ ಹರಿಯುತ್ತಿತ್ತು ಮಹಿಳಾ ಜಾಗೃತಿಯ ಹೋರಾಟ.
ಮಹಿಳಾ ಜಾಗೃತಿ ಸಂಘಟನೆ ರಾಜೀರಹಿತ ಹೋರಾಟದ ಕಾರಣಗಳಿಗಾಗಿಯೆ ಪೊಲೀಸರಿಗೆ. ಜಿಲ್ಲಾಡಳಿತಕ್ಕೆ ಸಿಂಹಸ್ವಪ್ನವಾಗಿತ್ತು. ಅದೊಂದು ದಿನ ಯುವತಿಯೋರ್ವಳ ಅಪಹರಣ ಆರೋಪದ ನೆಪದಲ್ಲಿ ಮಹಿಳಾ ಜಾಗೃತಿ ಸಂಘಟನೆಯ ಮುಂಚೂಣಿಯಲ್ಲಿದ್ದ ಯುವತಿಯರ ರೂಂ ಗಳಿಗೆ ದಾಳಿಮಾಡಿದ ಶಿವಮೊಗ್ಗದ ಪೊಲೀಸರು ರೂಂ ನಲ್ಲಿ ಹಲವು ವಸ್ತುಗಳ ಜೊತೆ ಹತ್ತಾರು ಪುಸ್ತಕಗಳನ್ನು ಸೀಜ್ಮಾಡಿ ಸಂಘಟಕ ಯುವತಿಯರನ್ನು ಬಂಧಿಸಿದರು.
“ಜಗತ್ತು ನನ್ನನ್ನು ಬಹಿಷ್ಕರಿಸಿ ದೂರ ತಳ್ಳಿದಾಗ; ನನ್ನನ್ನು ಎದೆಗೆ ಅಪ್ಪಿಕೊಡಿದ್ದು ಪುಸ್ತಕಗಳು.”
“For a man like me, who was socially boycotted, these books took me to their hearts.”
-Dr. B.R. Ambedkar
ಅವತ್ತಿನ ಶಿವಮೊಗ್ಗದ ಎಸ್ಪಿಯಾಗಿದ್ದವರು ದೊಡ್ಡ ಸಾಹಸ ಮಾಡಿದಂತೆ ಪ್ರೆಸ್ ಮೀಟ್ ನಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ತೋರಿಸಿದರು. ಅವುಗಳಲ್ಲಿ ಪುಸ್ತಕಗಳ ರಾಶಿಯೇ ಇದ್ವು. ಇವೆಲ್ಲವೂ ನಕ್ಸಲ್ ಸಾಹಿತ್ಯ. ಮಹಿಳಾ ಜಾಗೃತಿ ಸಂಘಟನೆ ನಕ್ಸಲ್ ನಂಟು ಹೊಂದಿದೆ. ಈ ಜಾಲವನ್ನು ನಾವು ಬೇಧಿಸಿದ್ದೇವೆ ಎಂದು ಎಸ್ಪಿ ಮಹಾನುಭಾವ ಪ್ರಚಾರದ ತೆವಲಿನ ಶೂರತ್ವ ಪ್ರದರ್ಶಿಸಿದರು.

ಅಷ್ಟಕ್ಕೂ ಆ ಪುಸ್ತಕಗಳು ನಿಷೇಧಿಸಲ್ಪಟ್ಟ ಪುಸ್ತಕಗಳಾಗಿರಲಿಲ್ಲ. ಕೋಮುವಾದ, ಜಾತಿವಾದ, ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದ ಅರಿವು ಮೂಡಿಸುವ ಬರಹಗಳ ಪುಸ್ತಕಗಳಾಗಿದ್ದವು. ಕಾರ್ಲ್ ಮಾರ್ಕ್ಸ್, ಲೆನಿನ್, ಮಾವೋತ್ಸೆತುಂಗ್ , ವಿಯಟ್ನಾಮ್ ,ಅಂಬೇಡ್ಕರ್ ,ಜ್ಯೋತಿ ಬಾಪುಲೆ ಅವರ ಹೋರಾಟದ ಕಥನದ ಪುಸ್ತಕಗಳು ಇದ್ದವು. ಇವೆಲ್ಲವೂ ಪೊಲೀಸರಿಗೆ ಅಪಾಯಕಾರಿ ಶಸ್ತ್ರಾಸ್ತ್ರಗಳಂತೆ ಕಾಣಿಸಿದ್ದು ಮಾತ್ರ ನನಗಷ್ಟೆ ಅಲ್ಲ ಅನೇಕ ಪತ್ರಕರ್ತರಿಗೂ ಆಶ್ಚರ್ಯವಾಗಿತ್ತು.
ಕೊನೆಗೆ ನ್ಯಾಯಾಲಯವು ಪೊಲೀಸರ ವಾದವನ್ನು ಕಸದ ಬುಟ್ಟಿಗೆ ಎಸೆದು ಮಹಿಳಾ ಜಾಗೃತಿ ಹೋರಾಟಗಾರರನ್ನು ಆರೋಪದಿಂದ ಖುಲಾಸೆಗೊಳಿಸಿತು.
ನನಗೆ ಡಿಗ್ರಿಯಲ್ಲಿ ಗುರುಗಳಾಗಿದ್ದ ಉಪನ್ಯಾಸಕರೊಬ್ಬರನ್ನು ನಕ್ಸಲ್ ಸಿಂಪಥೈಸರ್ ಎಂಬ ಅನುಮಾನಿಸಿಅವರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡ ಪೊಲೀಸ್ ಅಧಿಕಾರಿಯೊಬ್ಬರು ” ಏನ್ರಿ..ನೀವು ಕಾರ್ಲ್ಮಾರ್ಕ್ಸ್ ನ ಪುಸ್ತಕ ಇಟ್ಕೊಂಡಿದಿರಂತೆ” ಎಂದು ಗದರಿಸಿದರು.
ಅದಕ್ಕೆ ಉಪನ್ಯಾಸಕರು ನಾನು ಪಾಠ ಮಾಡೋದೆ “ಕಾರ್ಲ್ ಮಾರ್ಕ್ಸ್ ನ ಆರ್ಥಿಕ ಸಿದ್ಧಾಂತ” ಸಿಲಬಸ್ಇದೆ. ಅದನ್ನೆ ಪಾಠ ಮಾಡೋದು. ತಪ್ಪೇನಿದೆ? ಎಂದು ಆ ದಡ್ಡ ಅಧಿಕಾರಿಗೆ ಪಾಠ ಮಾಡಿದರು ! ಅಲ್ಲಿಗೆಪ್ರಕರಣ ಮುಕ್ತಾಯ ಆಯ್ತು.

ಮೂರ್ನಾಲ್ಕು ವರ್ಷಗಳ ಹಿಂದೆ ಉನ್ನತ ನ್ಯಾಯಾಧೀಶರೊಬ್ಬರು ವ್ಯಕ್ತಿಯೊಬ್ಬರನ್ನು ನ್ಯಾಯಲಯ ಕೊಠಡಿಯಲ್ಲೆ ನೀವು ” ಪೀಸ್ ಅಂಡ್ ವಾರ್” ( ಲಿಯೋ ಟಾಲ್ಸ್ಟಾಯ್ ) ಓದುತ್ತೀರಂತೆ ಎಂದು ತರಾಟೆಗೆ ತೆಗೆದುಕೊಳ್ಳುವ ಧಾಟಿಯಲ್ಲಿ ಪ್ರಶ್ನಿಸಿದ್ದನ್ನು ಕೇಳಿ ನಾನು ನಕ್ಕು ನಕ್ಕು ಹೊರಳಾಡಿದ್ದೆ.
ಬಂಜೆಗೆರೆ ಜಯಪ್ರಕಾಶ್ ಅವರ ” ಆನುದೇವ ಹೊರಗಣವನು” ವನ್ನು ಅರಗಿಸಿಕೊಳ್ಳಲಾಗದೆ ನಿಷೇಧಿಸಲಾಯಿತು.
ಜರ್ಮನಿಯಲ್ಲಿ ಸರ್ವಾಧಿಕಾರಿ ಹಿಟ್ಲರ್ ಮೊದಲು ಮಾಡಿದ ಕೆಲಸವೆಂದರೆ ಇಡೀ ಗ್ರಂಥಾಲಯಗಳನ್ನೆಸುಟ್ಟು ಹಾಕಿದ. ಪುಸ್ತಕಗಳು ಮನುಷ್ಯನ ಮೇಲೆ ಬೀರುವಷ್ಟು ಪರಿಣಾಮಗಳು ಇನ್ನಾವುದರಿಂದಲೂ ಸಾಧ್ಯವಿಲ್ಲ. ಅವು ವ್ಯಕ್ತಿತ್ವವನ್ನು ರೂಪಿಸುತ್ತವೆ. ಪುಸ್ತಕಗಳು ಕೆಲವರಿಗೆ ಆಪ್ತ ಸಂಗಾತಿಯಂತಿದ್ದರೆ. ಪ್ರಭುತ್ವಕ್ಕೆ ಅವು ಅಪಾಯಕಾರಿ ಶಸ್ತ್ರಾಸ್ತ್ರಗಳಂತೆ ಕಾಣುತ್ತವೆ.
ಇವತ್ತು ಪುಸ್ತಕ ದಿನ. ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.
– ಎನ್ .ರವಿಕುಮಾರ್ ಟೆಲೆಕ್ಸ್
