Homeಸಮಾನತೆ ಇಲ್ಲದೆ ಸ್ವಾತಂತ್ರ್ಯವಿಲ್ಲ..! ‘ಗೌರವ’ ಎನ್ನುವ ಸಾಮಾಜಿಕ ಪಿಡುಗಿನಿಂದ ಇಲ್ಲಿ ಸ್ವತಂತ್ರ ಹರಣವಾಗುತ್ತಿದೆ- ಮನೋಜ್ ರಾಮಯ್ಯ...

ಸಮಾನತೆ ಇಲ್ಲದೆ ಸ್ವಾತಂತ್ರ್ಯವಿಲ್ಲ..! ‘ಗೌರವ’ ಎನ್ನುವ ಸಾಮಾಜಿಕ ಪಿಡುಗಿನಿಂದ ಇಲ್ಲಿ ಸ್ವತಂತ್ರ ಹರಣವಾಗುತ್ತಿದೆ- ಮನೋಜ್ ರಾಮಯ್ಯ ಬರಹ

Spread the love

“ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ? ಕೋಟ್ಯಾಧೀಶರ ಕೋಣೆಗೆ ಬಂತು, ಜನಗಳ ತಿನ್ನುವ ಬಾಯಿಗೆ ಬಂತು ನಲವತ್ತೇಳರ ಸ್ವಾತಂತ್ರ‍್ಯ” – ಕವಿ ಸಿದ್ದಲಿಂಗಯ್ಯ ಬರೆದಿರುವ ಈ ಸಾಲುಗಳು ವಾಸ್ತವಕ್ಕೆ ಒಪ್ಪುವಂತಾಗಿದೆ. ಯಾಕೆಂದರೆ ಬ್ರಿಟಿಷರಿಂದ ಪಡೆದ ಸ್ವಾತಂತ್ರ್ಯ ಹಾಗೂ ಪಡೆಯುವಾಗ ಇದ್ದ ಪರಿಕಲ್ಪನೆ ಈಗ ಬದಲಾಗಿದೆ.

ಸ್ವಾತಂತ್ರ್ಯ ಎಂದರೆ ಕೇವಲ ದಿನಾಚರಣೆ ಸಿಮೀತವಾದ ದಿನಗಳನ್ನೆ ನೋಡುತ್ತ ಬಂದಿದ್ದೇವೆ. ಬ್ರಿಟೀಷರು ಭಾರತಕ್ಕೆ ಬಂದದ್ದು, ಅವರು ದೇಶದ ಜನರ ಮೇಲೆ ಮಾಡಿದ ದೌರ್ಜನ್ಯ ನಂತರ ಅದಕ್ಕಾಗಿ ನಡೆದ ಸ್ವಾತಂತ್ರ್ಯ ಹೋರಾಟ, ಗಾಂಧೀಜಿಯವರ ಉಪವಾಸ ಸತ್ಯಾಗ್ರಹ ಇಂತಹ ಭಾಷಣಗಳನ್ನೆ ಕೇಳಿದ್ದೇವೆ, ಈಗಲೂ ಕೇಳುತ್ತಿದ್ದೇವೆ. ಆದರೆ ಸ್ವಾತಂತ್ರ್ಯ ಎನ್ನುವುದು ಕೇವಲ ಒಂದು ಭೂ ಪ್ರದೇಶ ಅಥವಾ ಒಂದು ಹೋರಾಟವಾಗಿ ಕಾಣದೆ ಅದರ ಆಚೆಗೆ ಬದುಕು ಮತ್ತು ಅದರ ಬದುಕುವ ಕ್ರಮದ ಸ್ವತಂತ್ರ ಬಗ್ಗೆ ತಿಳಿಯುವುದು ಇಂದಿಗೆ ಅವಶ್ಯಕವಾಗಿದೆ.

ಗಮನಿಸಿ: ಜಾಗತಿಕ ಕೌಶಲ್ಯಗಳು ಹೊಸ ಅವಕಾಶ ಸೃಷ್ಟಿಸುತ್ತವೆ: ಅವಿನಾಶ್

ಯಾವುದೇ ನಿರ್ಬಂಧಗಳಿಲ್ಲದೆ ತಮ್ಮ ಮನಸ್ಸಿನ ಇಚ್ಚೇ ಅನುಗಣದಿಂದ ನಿರ್ಗಳವಾಗಿ ಬದುಕು ಅಥವಾ ಜೀವಿಸುವ ಸ್ವತಂತ್ರವೇ ನಿಜವಾದ ಸ್ವತಂತ್ರ. ಆದರೂ ಇದು ಎಷ್ಟರ ಮಟ್ಟಿಗೆ ಮನುಷ್ಯ ಅನುಭವಿಸುತ್ತಿದ್ದಾರೆ ಎಂಬುದು ಚಿಂತಿಸಬೇಕಾಗಿದೆ. ಯಾಕೆಂದರೆ ‘ಗೌರವ’ ಎನ್ನುವ ಸಾಮಾಜಿಕ ಪಿಡುಗಿನಿಂದ ಇಲ್ಲಿ ಸ್ವತಂತ್ರ ಹರಣವಾಗುತ್ತಿದೆ. ಅದರ ಬೆನ್ನುತ್ತಾ ಹೋದರೆ ಅನೇಕ ಪ್ರಶ್ನೆಗಳು ನಮ್ಮೊಳಗೆ ಹುಟ್ಟಿಕೊಂಡು ಉತ್ತರಕ್ಕೆ ತಡಕಾಡುತ್ತೇವೆ. ಹಾಗಾದರೆ ಬ್ರಿಟಿಷರು ಬರುವ ಮುಂಚೆ ಭಾರತಕ್ಕೆ ಸ್ವತಂತ್ರ ಇತ್ತ? ಎಂದರೆ. ಹೌದು ಈ ದೇಶದಲ್ಲಿ ಇತ್ತು, ಆದರೆ ಈ ದೇಶದೊಳಗಿನ ಬದುಕುಗಳಿಗೆ ಇರಲಿಲ್ಲ!.

ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರದಲ್ಲಿ ಮನುಷ್ಯ ಮನುಷ್ಯನಾಗಿ ಬದುಕುವುದು ಕಷ್ಟ ಸಾಧ್ಯವಾಗಿದೆ. ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಜಾತಿ ಪದ್ಧತಿ, ಗುಲಾಮಗಿರಿಯಂತಹ ಕ್ರೂರ ಆಚರಣೆಗಳು ದೇಶದೊಳಗಿನ ಬದುಕಿಗೆ ಸ್ವತಂತ್ರ ಕಸಿದುಕೊಂಡಿತ್ತು. ಈಗ ಅದು ಹೊಸ ರೂಪಕವಾಗಿದೆ. ಅದನ್ನೇ ಒಂದು ವ್ಯವಸ್ಥೆಯನ್ನಾಗಿ ಮಾಡಲಾಗಿದೆ. ಇಂತಹವೆಲ್ಲಾ ತುಂಬಿಕೊಂಡಿರುವ ಈ ದೇಶವು ಬ್ರಿಟಿಷರಿಂದ ಮಾತ್ರ ಸ್ವಾತಂತ್ರ್ಯ ಪಡೆದಿದ್ದೇವೆ ಎನ್ನುವುದು ಜಾಣತನದ ನಡೆ.

ಎರಡು ವ್ಯಕ್ತಿತ್ವಗಳು:

ಜಾತಿ ವ್ಯವಸ್ಥೆ ಕೂಪವಾಗಿದ್ದ ದೇಶದಲ್ಲಿ ಬ್ರಿಟಿಷ್ ಸರ್ಕಾರಗಳು ವೃತ್ತಿ, ಶಿಕ್ಷಣದಲ್ಲಿ ಒಂದೇ ತೆರನಾಗಿ ಕಾಣುವುದನ್ನು ಕಲಿತ್ತಿದ್ದರು. ಆ ನಿಟ್ಟಿನಲ್ಲಿ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿದರು. ಅದಕ್ಕೆ ಅಂಬೇಡ್ಕರ್ ಅವರೇ ಸಾಕ್ಷಿ. ಇದನ್ನು ಇನ್ನಷ್ಟು ಅರ್ಥೈಸುವುದಾದರೆ ವಿಶ್ವಮಾನ ಸಂದೇಶದ ಸಾರಿದ ಕುವೆಂಪು ‘ಬ್ರಿಟೀಷರು ಭಾರತಕ್ಕೆ ಬರದೇ ಹೋಗಿದ್ದರೆ ನಾನು ಯಾರಾದರೂ ಮೇಲು ಜಾತಿಯವರ ಮನೆಯಲ್ಲಿ ಜೀತ ಮಾಡುವವನಾಗಿರುತ್ತಿದ್ದೆ’ ಎಂದು ಹೇಳಿದ್ದಾರೆ. ಇವರೆಡು ವ್ಯಕ್ತಿತ್ವ ಈ ದೇಶ ಸ್ವಾತಂತ್ರ್ಯಕ್ಕಿಂತ ಬದುಕಿನ ಹಾಗೂ ಜೀವಿಸುವ ಸ್ವಾತಂತ್ರ್ಯ ಈ ಸಮಾಜದೊಳಗೆ ಯಾವ ದಿಕ್ಕಿನಲ್ಲಿತ್ತೆಂದು ತೋರಿಸುತ್ತದೆ.

ಸ್ವತಂತ್ರ ಯಾವ ಸ್ಥಿತಿಯಲ್ಲಿದೆ!:

ದೇಶಕ್ಕೆ ಸ್ವಾತಂತ್ರ್ಯ ದೊರಕಿ 79 ವರ್ಷ ಆಗುತ್ತಿದೆ. ಆದರೆ ಈ 79 ವರ್ಷದಲ್ಲಿ ಸ್ವತಂತ್ರ ಹರಣಗಳೆ ಸಾಕಷ್ಟಾಗಿದೆ ಎಂದರೆ ತಪ್ಪಿಲ್ಲ. ಸಂವಿಧಾನದ ಆಶಯವೇ ಸ್ವಾತಂತ್ರ್ಯವಾಗಿದ್ದರು. ಇದನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಲೆ ಇರುತ್ತದೆ. ಅಭಿವ್ಯಕ್ತಿ, ಬದುಕುವ ಹಕ್ಕು, ಭಾರತ ಪ್ರಜೆ ದೇಶದ ಯಾವ ಭಾಗದಲ್ಲಾದರೂ ಜೀವಿಸುವ ಹಕ್ಕು ನೀಡಿದೆ(ಆರ್ಟಿಕಲ್ 19, 20, 22 ಹಾಗೂ 21) ಆದರೆ ಇಂತಹ ಆಶಯಗಳು ಸಮಾಜದಲ್ಲಿನ ಮೇಲ್ತರಗಳು ಬುಡಮೇಲೂ ಮಾಡುತ್ತಿವೆ. ಆರ್ಥಿಕ ಅಸಮಾನತೆಯಿಂದ ಬಹು ಸಂಖ್ಯಾತ ಜನರು ಉಳ್ಳವರ ಮೇಲೆ ಅವಲಂಬಿತವಾಗಿದ್ದು, ಮಾತನಾಡುವ, ಪ್ರಶ್ನಿಸುವ ಮತ್ತು ನ್ಯಾಯಕ್ಕಾಗಿ ಹೋರಾಡುವ ಸ್ವತಂತ್ರ ಕಳೆದುಕೊಂಡಿದ್ದಾರೆ. ಇನ್ನು ಪ್ರೀತಿ ತುಂಬಿದ ಹೃದಯಗಳನ್ನು ಜಾತಿ ಕಾರಣಕ್ಕೆ ಕೊಲ್ಲುವ ಮಟ್ಟಕ್ಕೆ ಈ ಸ್ವತಂತ್ರ ಬಂದು ನಿಂತಿದೆ. ಆಸೆಯಿಂದ ಬದುಕುವುದನ್ನು ಸಹ ಕಿತ್ತುಕೊಂಡಿದೆ.

ಸಮಾನತೆಯಿಲ್ಲದೆ ಸ್ವಾತಂತ್ರ್ಯವಿಲ್ಲ!:

ಸ್ವಾತಂತ್ರ್ಯ ಮತ್ತು ಸಮಾನತೆ ಒಂದು ನಾಣ್ಯದ ಎರಡು ಮುಖಗಳು. ಸಮಾನತೆಯಿಲ್ಲದೆ ಸ್ವಾತಂತ್ರ‍್ಯ ಇಲ್ಲ, ಸ್ವಾತಂತ್ರ್ಯಯಿಲ್ಲದೆ ಸಮಾನತೆಯಿಲ್ಲ. ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ನಮ್ಮನ್ನು ವಂಚಿಸಿಕೊಂಡು ಗುಲಾಮಗಿರಿಯಾಗಿ ಬದುಕುವುದು ಅನಿವಾರ್ಯವಾಗಿದೆ. ಇವೆಲ್ಲದರಿಂದ ಮುಕ್ತಿ ಹೊಂದಲು ನಾವು ಆರ್ಥಿಕವಾಗಿ ಸಬಲರಾಗಬೇಕು, ಅದಕ್ಕೆ ಮೊದಲು ಸಾವಿರಾರು ವರ್ಷಗಳಿಂದ ನಮ್ಮ ಆಲೋಚನೆಗಳ ಮೇಲೆ ಶಾಸ್ತ್ರ , ಸಂಪ್ರದಾಯದ ಹೆಸರಿನಲ್ಲಿ ತುಂಬಿರುವ ಮೌಡ್ಯದ ಸಂಕೋಲೆಯಿಂದ ಕಳಚಿಕೊಂಡು ಮಾನಸಿಕ ಬಿಡುಗಡೆ ಹೊಂದಬೇಕು.

“ಮಾನಸಿಕ ಬಿಡುಗಡೆಯೇ ನಿಜವಾದ ಸ್ವಾತಂತ್ರ್ಯ”- ಬಿ.ಆರ್.ಅಂಬೇಡ್ಕರ್

 

– ಮನೋಜ್ ರಾಮಯ್ಯ. ಉಪನ್ಯಾಸಕ

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments