ಶಿವಮೊಗ್ಗ,ಏ.25: ಪ್ರಧಾನಿ ಮೋದಿಗೆ ಮೊದಲೆ ಆರ್ಎಸ್ಎಸ್ ಕಚೇರಿಯಿಂದ ಆದೇಶ ಬಂದಿರಬೇಕು. ಹಾಗಾಗಿ ಸರ್ವಪಕ್ಷದ ಸಭೆಯ ಕರೆಯದೆ ಆತುರದಲ್ಲಿ ಮಹಿಳಾ ಮೀಸಲಾತಿ ನೆಪದಲ್ಲಿ ಕ್ಷೇತ್ರ ಪುನರ್ ವಿಂಗಡನೆಗೆ ಮುಂದಾಗಿದ್ದರು ಎಂದು ರಾಜ್ಯ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಟೀಕಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಿಲ್ ತರಲು ಹೊರಟ್ಟಿದ್ದರು. ಆದರೆ ಅದನ್ನು ದಕ್ಷಿಣ ರಾಜ್ಯಗಳ ವಿರೋಧ ಪಕ್ಷಗಳು ಸಂಸತ್ನಲ್ಲಿ ಬಹುಮತದಿಂದ ತಿರಸ್ಕರಿಸಿದ್ದಾರೆ ಎಂದರು.
ಮಹಿಳಾ ಮೀಸಲಾತಿ ಮೊದಲು ಜಾರಿಗೆ ತಂದವರು ರಾಜೀವ್ ಗಾಂಧಿ. ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ನಲ್ಲಿ ಮಹಿಳೆಯರು ಸ್ಥಾನವನ್ನು ಪಡೆದಿದ್ದಾರೆಂದು ಅದಕ್ಕೆ ಕಾಂಗ್ರೆಸ್ ಕಾರಣ. ಆದರೆ ಈಗ ಬಿಜೆಪಿ ತಾವೇ ಇದನ್ನು ಜಾರಿ ಮಾಡಲು ಹೊರಟಿರುವ ಮೊದಲಿಗರಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
2014 ರಿಂದ 2024 ರಲ್ಲಿ ಮೋದಿ ಅಧಿಕಾರದಲ್ಲಿದ್ದು ಬಹುಮತವಿದ್ದರೂ ಸಹ ಆಗ ಮಹಿಳಾ ಬಿಲ್ ಅನ್ನು ಪಾಸ್ ಮಾಡಬಹುದಿತ್ತು. ಇದಕ್ಕೆ ರಾಹುಲ್ ಗಾಂಧಿಯವರು ಸಹ ಬೆಂಬಲಿಸುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ನಂತರ 2023 ರಲ್ಲೂ ಮಹಿಳಾ ಮೀಸಲಾತಿ ಬಿಲ್ ಗೆ ಸರ್ವಾನುಮತ ಬಂದಿತ್ತು. ಆದರೆ ಇದೇ ಪ್ರಧಾನಿ ಜಾತಿಗಣತಿ, ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದರೆ ಮಾತ್ರ ಮಹಿಳಾ ಮೀಸಲಾತಿ ತರಲು ಆಗುವುದು ಎಂದು ಕಡಿಷನ್ ಹಾಕಿದರು. ಆದರೆ ಈಗ ಕೇರಳ, ಅಸ್ಸಾಂ ಚುನಾವಣೆ ಮುಗಿದ ಕೂಡಲೇ ತರಾತುರಿಯಾಗಿ ಬಿಲ್ ಜಾರಿ ಮಾಡಲು ಮುಂದಾಗಿದ್ದರು.
ಮಹಿಳೆಯ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಲೋಕಸಭೆಯ 543 ಸ್ಥಾನಕ್ಕೆ ಮಹಿಳಾ ಮೀಸಲಾತಿ ತರುತ್ತಿದ್ದರು. ಆದರೆ ಅವರಿಗೆ ಮಹಿಳಾ ಮೇಲಿನ ಕಾಳಜಿಕ್ಕಿಂತ ಉತ್ತರ ಭಾರತ ಮೇಲೆ ಹೆಚ್ಚಿನ ಕಾಳಜಿ ಇದೆ. ಏ.29 ರಂದು ಪಶ್ಚಿಮ ಬಂಗಾಳ ಚುನಾವಣೆ ಮುಗಿಯುತ್ತದೆ ನಂತರ ಮಹಿಳಾ ಮೀಸಲಾತಿ ಕುರಿತು ಚರ್ಚೆ ಮಾಡೋಣವೆಂದು ಸೋನಿಯಾ ಗಾಂಧಿ ಹೇಳಿದ್ದರೂ. ಆದರೂ ತರಾತುರಿಯಲ್ಲಿ ಜಾರಿ ಮಾಡಲು ಮುಂದಾಗಿ ಮುಖಭಂಗವನ್ನು ಅನುಭವಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಇಷ್ಟು ವರ್ಷ ಮುಸ್ಲಿಂ, ಮಾಂಸ, ಮಾಂಗಲ್ಯ ಎನ್ನುತ್ತಿದ್ದರು ಈಗ ಮಹಿಳಾ ಮೀಸಲಾತಿ ಇಟ್ಟುಕೊಂಡು ರಾಜಕೀಯ ಮಾಡಲು ಸಿದ್ದವಾಗಿದ್ದು, ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸಿದ ಕಾಂಗ್ರೆಸ್ ಪಕ್ಷಕ್ಕೆ ಆರ್ಎಸ್ಎಸ್ ಸಂಸ್ಕೃತಿಯುಳ್ಳ ಬಿಜೆಪಿ ಪಾಠ ಹೇಳಲು ಬರುತ್ತಿದೆ ಕಿಡಿಕಾರಿದರು.
ಆರ್ಎಸ್ಎಸ್ ಇದುವರೆಗೂ ಮಹಿಳೆಯರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಯಾಕೆಂದರೆ ಕೋಮುವಾದಿ ತನವನ್ನು ಮಹಿಳೆಯರು ದಿಟ್ಟವಾಗಿ ವಿರೋಧಿಸುತ್ತಾರೆ. ಇದೇ ಅದಿತ್ಯಾನಾಥ್ ಯೋಗಿ ಮಹಿಳೆಯರಿಗೆ ಸ್ವತಂತ್ರ ಕೊಡಬಾರದು ಎನ್ನುತ್ತಾರೆ. ಮೋದಿ ಸೋನಿಯವರನ್ನು ಕಾಂಗ್ರೆಸ್ನ ವಿಧವೆ ಎನ್ನುತ್ತಾರೆ. ಇವರಿಂದ ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕೆಂದು ಕಲಿಯುವ ಅವಶ್ಯಕತೆ ಕಾಂಗ್ರೆಸ್ಗೆ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಆರ್, ರಾಜ್ಯ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಭಂಡಿ, ಪ್ರಮುಖರಾದ ವಿಜಯಲಕ್ಷ್ಮೀ ಪಾಟೀಲ್, ಮಾನಸ, ಕವಿತಾ ಮರಾಠ, ಯು.ಶಿವಾನಂದ್, ಸುವರ್ಣ ನಾಗರಾಜ್, ಸೇಲ್ವ ಮಾರ್ಟಿಸ್ ಇದ್ದರು.
