Homeಜಿಲ್ಲೆಮಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ: ರೈತರ ಸಂಘ ಮನವಿ

ಮಳೆ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ: ರೈತರ ಸಂಘ ಮನವಿ

Spread the love

ಶಿವಮೊಗ್ಗ ,ಏ.29: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹೊಳೆಹೊನ್ನೂರು ಹಾಗೂ ಕೂಡ್ಲಿಗೆರೆ ಹೋಬಳಿಯ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚು ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಏ.26 ರಂದು ಈ ಎರಡೂ ಹೋಬಳಿ ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸುಮಾರು ಮನೆಗಳು ಹಾನಿಯಾಗಿದ್ದು, ವಾಸ ಮಾಡಲಿಕ್ಕೆ ಆಗದಂತಾಗಿದೆ. ನಿರಾಶ್ರಿತರಿಗೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮರಗಳನ್ನು ಬೆಳೆಯಲಾಗಿದ್ದು, ಒಂದು ಎಕರೆಯಲ್ಲಿರುವ ಅಡಿಕೆ ಮರಗಳಲ್ಲಿ ಶೇ.೫೦ಕ್ಕಿಂತ ಹೆಚ್ಚು ಮರಗಳು ನೆಲಕ್ಕುರುಳಿ ರೈತರು ಆತಂಕಕ್ಕೀಡಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಜೊತೆಗೆ ತೆಂಗಿನಮರಗಳು ಸಹ ನೆಲಕ್ಕುರುಳಿವೆ. ವರ್ಷಗಟ್ಟಲೆ ಬೆಳೆಸಿದ ಮರಗಳು ಒಂದೇ ರಾತ್ರಿಯಲ್ಲಿ ನೆಲಕ್ಕುರುಳಿರುವುದು ಸಾವಿರಾರು ರೈತರ ಜೀವನಾಧಾರಿತವೇ ಕಿತ್ತುಹೋಗಿದೆ. ರೈತನ ಬೆವರಿನ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಡಿಕೆ ಒಂದು ಬೆಳೆ ಅಲ್ಲ, ಮಲೆನಾಡಿನ ಜೀವನಾಡಿ. ಆದ್ದರಿಂದ ಈ ಘಟನೆ ಬಗ್ಗೆ ಅಧಿಕಾರಿಗಳಿಂದ ನೈಜವಾದ ಸರ್ವೆ ಮಾಡಿಸಿ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನೀಡಿ ಮಾರ್ಗಸೂಚಿ ಪ್ರಕಾರ ಪರಿಹಾರದ ಮೊತ್ತ 1 ಹೆಕ್ಟೇರ್ ಒಣಭೂಮಿ ಬೆಳೆಗೆ 8500  ರೂ., ನೀರಾವರಿ ಬೆಳೆಗೆ 17 ಸಾವಿರ ರೂ., ಬಹುವಾರ್ಷಿಕ ತೋಟದ ಬೆಳೆಗಳಿಗೆ 22 ಸಾವಿರ ರೂ., ಇದೆ. ಈ ಪರಿಹಾರವನ್ನು  ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ಮಾತ್ರ ಕೊಡಬಹುದು. 1 ಹೆಕ್ಟೇರ್‌ನಲ್ಲಿ 2.5 ಎಕರೆ ಅಡಿಕೆ ಬೆಳೆಗೆ 22 ಸಾವಿರ ರೂ., 1 ಎಕರೆಗೆ 9 ಸಾವಿರದಂತೆ 548 ಗಿಡಗಳಿಗೆ ಲೆಕ್ಕ ಹಾಕಿದಾಗ ಒಂದು ಮರಕ್ಕೆ 16 ರೂ. ಬರುತ್ತದೆ. ಈ 16 ರೂ.ನಿಂದ 1 ಅಡಿಕೆ ಮರವನ್ನು ತೋಟದಿಂದ ಕಡಿದು ಹೊರಗೆ ಸಾಗಿಸಲಿಕ್ಕು ಸಹ ಸಾಧ್ಯವಿಲ್ಲ. ಆದ್ದರಿಂದ ವಿಪತ್ತು ಪರಿಹಾರ ನಿಧಿ ಹೆಚ್ಚಿಸಲು  ಹಿಂದಿನಿಂದಲೂ ರೈತ ಸಂಘ ಪಾದಯಾತ್ರೆ, ಚಳವಳಿಗಳನ್ನು ಮಾಡಿ ಒತ್ತಾಯಿಸುತ್ತಾ ಬಂದಿದೆ.  ಇಲ್ಲಿಯವರೆಗೂ ಹೆಚ್ಚಳ ಮಾಡಿಲ್ಲ. ಈಗಲಾದರೂ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.

ಅಡಿಕೆ ಬೆಳೆ ಬೆಳೆಯಲು ಅಡಿಕೆ ಸಸಿ ನೆಟ್ಟು ಸಾವಿರಾರು ರೂ. ಖರ್ಚು ಮಾಡಿ ಫಸಲು ಬರಲು ಕನಿಷ್ಠ 8 ವರ್ಷ ಕಾಯಬೇಕು. ಈ ರೀತಿ ಬೆಳೆಸಿದ ಅಡಿಕೆ ಮರಗಳು ಸಂಪೂರ್ಣ ನೆಲಕ್ಕುರುಳಿದಾಗ ಲಕ್ಷಾಂತರ ರೂ. ನಷ್ಟವಾಗುತ್ತದೆ. ಆದ್ದರಿಂದ ಮಳೆಯಿಂದ ಆದ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು 20 ಪಟ್ಟು ಹೆಚ್ಚಿಸಬೇಕು. ಎಲ್ಲಾ ರೈತರಿಗೂ ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರ ನೀಡಬೇಕು. ಜಿಲ್ಲಾಧಿಕಾರಿಗಳು ಪ್ರತೀ ಹಳ್ಳಿಗೂ ಭೇಟಿ ನೀಡಿ ನೈಜ ಸಮೀಕ್ಷೆ ಮಾಡಿಸಬೇಕು.

ಪೇಪರ್ ಕಿರಿಕಿರಿ ಇಲ್ಲದೆ ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ಬಡ್ಡಿ ರಹಿತವಾಗಿ ಹೊಸ ಸಾಲ ನೀಡಬೇಕು. ಹಾನಿಗೊಳಗಾದ ಮನೆಗಳಿಗೆ ಹೊಸದಾಗಿ ಮನೆಕಟ್ಟಿಕೊಳ್ಳಲು 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಜಗದೀಶ್, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಡಿ.ಎನ್.ಪಂಚಾಕ್ಷರಿ ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments