Homeಜಿಲ್ಲೆರಾಷ್ಟ್ರೀಯ ವಿಪತ್ತು ಯೋಜನೆಯಡಿಯಲ್ಲಿ ಪರಿಹಾರ ನೀಡಿ

ರಾಷ್ಟ್ರೀಯ ವಿಪತ್ತು ಯೋಜನೆಯಡಿಯಲ್ಲಿ ಪರಿಹಾರ ನೀಡಿ

Spread the love

ಶಿವಮೊಗ್ಗ ,ಮೇ.2 : ಇತ್ತೀಚೆಗೆ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಬಿರುಗಾಳಿ, ಮಳೆಗೆ ಕೋಟ್ಯಾಂತರ ರೂ. ರೈತರ ಬೆಳೆಹಾನಿ ಹಾಗೂಮನೆಗಳ ನಾಶವಾಗಿದ್ದು, ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಮತ್ತು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯಡಿಯಡಿಯಲ್ಲಿ ಪರಿಹಾರ ನೀಡಬೇಕುಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, .26 ರ ಸಂಜೆ ಭಾರೀ ಬಿರುಗಾಳಿ, ಮಳೆ ಬಂದು ರೈತರ ಜಮೀನುಗಳಲ್ಲಿ ಬೆಳೆಹಾನಿಯಾಗಿದೆ. ಅನೇಕ ಮನೆಗಳು ಬಿದ್ದುಹೋಗಿವೆ. ತಗಡುಗಳೆಲ್ಲಾ ಹಾರಿಹೋಗಿವೆ. ಪ್ರಮುಖವಾಗಿ ಆನವೇರಿ, ಕಲ್ಲಿಹಾಳು ಹೋಬಳಿಯ ಸುಮಾರು 40 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಡಿಕೆ ಮರ, ಬಾಳೆ, ತೆಂಗು ತೋಟದ ಬೆಳೆಗಳು ಹಾನಿಯಾಗಿವೆ. ಹನುಮಂತಾಪುರ, ಅರಹತೊಳಲು, ವಡ್ಡರಹಟ್ಟಿ, ಯಡೇಹಳ್ಳಿ, ತಡಸ, ಮಲ್ಲಿಗೇನಹಳ್ಳಿ, ಮೈದೋಳು, ಕಲ್ಲಜ್ಜನಹಾಳ್ ಮಲ್ಲಾಪುರ, ಅಶೋಕ್‌ನಗರ, ಮಂಗೋಟೆ, ನಾಗಸಮುದ್ರ, ಎಸ್.ಕೆ.ಮಗ್ಗಿ ಮುಂತಾದ ಭಾಗಗಳಲ್ಲಿ ಸುಮಾರು 20 ಸಾವಿರ ಹೆಕ್ಟರ್‌ನ ಬೆಳೆಗಳೆಲ್ಲಾ ಸಂಪೂರ್ಣ ನಾಶವಾಗಿವೆ. ಅಡಿಕೆ ತೋಟಗಳು, ಕೆಲವು ಭಾಗಶಃ ಕೆಲವು ಪೂರ್ತಿ ನಾಶವಾಗಿವೆಎಂದರು.

ಕೇವಲ ಬೆಳೆ ಮಾತ್ರವಲ್ಲದೆ, ಸುಮಾರು 600 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಗಳಿಗೆ ಹೊಚ್ಚಿದ್ದ ತಗಡುಗಳೆಲ್ಲಾ ಹಾರಿಹೋಗಿವೆ. ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಟ್ರಾನ್ಸ್ಫಾರ್ಮರ್‌ಗಳು ಹಾಳಾಗಿವೆ. ಕೋಟ್ಯಾಂತರ ರೂ. ನಷ್ಟವಾಗಿದೆ. ಭಾಗದ ರೈತರು ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರಬೇಕು. ಮಾಮೂಲಿ ಪರಿಹಾರ ನೀಡಿದರೆ ಅದು ಸಾಕಾಗುವುದಿಲ್ಲ. ಇದನ್ನು ರಾಷ್ಟ್ರೀ ವಿಪತ್ತು ಎಂದೇ ಪರಿಗಣಿಸಬೇಕು. ಕೇಂದ್ರ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕು. ರಾಜ್ಯ ಸರ್ಕಾರ ಕೂಡ ರೈತರಿಗೆ ಧೈರ್ಯ ತುಂಬಬೇಕು ಎಂದರು.

ಗಮನಿಸಿ:ಸಂವಿಧಾನದ ಆಶಯದಂತೆ ಸರ್ಕಾರ ನಡೆಯುತ್ತಿದೆ: ಭೈರತಿ ಸುರೇಶ್

ನಾನು ಕಳೆದ ಎರಡು ದಿನಗಳಿಂದ ಭಾಗಕ್ಕೆ ಹೋಗಿ ವೀಕ್ಷಣೆ ಮಾಡಿದ್ದೇನೆ. ಅಲ್ಲಿನ ರೈತರ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದೇನೆ. ನನ್ನೊಂದಿಗೆ ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ಕಂದಾಯ ಸಚಿವ ಕೃಷ್ಣಭೈರೇಗೌಡರು, ಸಂಸದರಾದ ಬಿ.ವೈ.ರಾಘವೇಂದ್ರ, ಶಾಸಕಿ ಶಾರದಾ ಪರ‍್ಯಾನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಆರ್. ಪ್ರಸನ್ನಕುಮಾರ್, ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಕೃಷಿಕಸಮಾಜದ ನಿರ್ದೇಶಕ ಡಿ.ಡಿ. ಶಿವಕುಮಾರ್ ಸೇರಿದಂತೆ ಎಲ್ಲರೂ ವೀಕ್ಷಣೆ ಮಾಡಿದ್ದಾರೆ. ಎಲ್ಲರ ಒತ್ತಾಯವೂ ಅದೇ ಆಗಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡರು ಈಗಾಗಲೇ ವಿಶೇಷ ಪರಿಹಾರ ನೀಡಲು ಭರವಸೆ ನೀಡಿದ್ದಾರೆ. ನಾನು ಕೂಡ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ರೈತರ ನೆರವಿಗೆ ಬರುವಂತೆ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಲಿದೆ ಎಂದರು.

ಕೃಷಿಕ ಸಮಾಜದ ನಿರ್ದೇಶಕ ಡಿ.ಡಿ. ಶಿವಕುಮಾರ್ ಮಾತನಾಡಿ, ರೈತರು ಮೊನ್ನೆಯ ಮಳೆಗೆ ತತ್ತರಿಸಿ ಹೋಗಿದ್ದಾರೆ. ಆತ್ಮಹತ್ಯೆಗೂ ಯೋಚಿಸುತ್ತಿದ್ದಾರೆ. ಮುಂದೇನು ಮಾಡಬೇಕು ಎಂದು ತೋಚದೆ ಸಂಕಟದಲ್ಲಿದ್ದಾರೆ. ಭೀಕರ ಬಿರುಗಾಳಿಗೆ ಭದ್ರಾವತಿ ಮತ್ತು ಹೊಳೆಹೊನ್ನೂರು ಭಾಗದ ಸುಮಾರು 8000 ಹೆಕ್ಟೇರ್ ಭೂಮಿಯಲ್ಲಿ 20 ಸಾವಿರಕ್ಕೂ ಹೆಚ್ಚಿಗೆ ಅಡಿಕೆ ಮರಗಳು ಸಂಪೂರ್ಣ ನಾಶವಾಗಿವೆ. ರೈತರಬದುಕು ಕಣ್ಣೀರಿನ ಕೋಡಿಯಾಗಿದೆ ಎಂದರು.

ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವು ಅಷ್ಟೇ ಅಲ್ಲದೆ, ರೈತರು, ಬ್ಯಾಂಕ್ ಮತ್ತುಸೂಸೈಟಿಗಳಲ್ಲಿ ಸಾಲ ಮಾಡಿದ್ದಾರೆ. ಸಾಲವನ್ನು ಮನ್ನಾ ಮಾಡಬೇಕು. ದುರಂತವನ್ನು ರಾಷ್ಟ್ರೀ ವಿಪತ್ತು ಎಂದು ಘೋಷಣೆ ಮಾಡಿ, ವಿಶೇಷ ಪ್ಯಾಕೇಜ್ ನೀಡಬೇಕು ಎಂದರಲ್ಲದೆ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ರೈತರೆಲ್ಲರ ನೇತೃತ್ವದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ  ನಗರದ ಮಹಾದೇವಪ್ಪ ಅವರೊಂದಿಗೆ ಕೇಂದ್ರಕ್ಕೆ ನಿಯೋಗ ಕೂಡ ಹೋಗಲಾಗುವುದು ಎಂದ ಅವರು, ಪ್ರಭಾರ ಜಿಲ್ಲಾಧಿಕಾರಿ ಎನ್. ಹೇಮಂತ್‌ಕುಮಾರ್, ಜಿಲ್ಲಾಡಳಿತ ಸರ್ವೇ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ನಮ್ಮೊಂದಿಗೆ ಸಹಕರಿಸಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಎನ್.ನಾಗರಾಜ್ ಮಾತನಾಡಿ, ಭಾಗದಲ್ಲಿ ಮಳೆ ಮಾಪನಗಳೇ ಇಲ್ಲ. ಮಳೆ ಮಾಪನಗಳು ಇಲ್ಲದೇ ಬೆಳೆವಿಮೆ ಕೂಡ ಸಿಗುವುದಿಲ್ಲ. ಸುಮಾರು 6000 ಮಳೆ ಮಾಪನಗಳಲ್ಲಿ 4000 ಕ್ಕೂ ಹೆಚ್ಚು ಯಂತ್ರಗಳು ಕೆಲಸವನ್ನೇ ಮಾಡುವುದಿಲ್ಲ. ಇದನ್ನು ಸರಿಪಡಿಸಬೇಕು. ಒಟ್ಟಿನಲ್ಲಿ ಯುದ್ಧೋಪಾಯದಲ್ಲಿ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಸ್.ಚಂದ್ರಶೇಖರ್, ರುದ್ರೇಶ್, ಶಿವಕುಮಾರ್, ದೇವರಾಜ್ ಪಾಟೀಲ್, ಮೋಹನ್ ಲೋಕೇಶ್ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments