ಶಿವಮೊಗ್ಗ,ಮೇ.13 : ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವತಿಯಿಂದ ಮೇ.16 ರಂದು ವಿನೋಬನಗರದ ಶುಭಮಂಗಳ ಸಮುದಾಯ ಭವನದ ಪಕ್ಕದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದ 11 ನೇ ವರ್ಷದ ಶ್ರೀಮನ್ಮಹಾ ರಥೋತ್ಸವವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಸ.ನ.ಮೂರ್ತಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ 11 ವರ್ಷಗಳಿಂದ ನಾವು ಈ ಮಹಾರಥೋತ್ಸವವನ್ನು ಆಯೋಜಿಸುತ್ತಾ ಬಂದಿದ್ದೇವೆ. ಈ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಮೇ.16 ಬೆಳಿಗ್ಗೆ 11.55 ಕ್ಕೆ ಶ್ರೀಮನ್ಮಹಾ ರಥೋತ್ಸವ ಜರುಗಲಿದೆ. ಟ್ರಸ್ಟಿನ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ಮಾರ್ಗದರ್ಶನದಲ್ಲಿ ಈ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಮೇ.15 ರಂದು ಬೆಳಿಗ್ಗೆ ಕುಲದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಗಣ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ.೧೪ರಂದು ಕೂಡ ಬೆಳಿಗ್ಗೆ 8 ಗಂಟೆಗೆ ವಿಶೇಷ ಪೂಜೆಗಳು ಜರುಗಲಿವೆ ಎಂದರು.
ಗಮನಿಸಿ:ನೀಟ್- ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಂಸದರ ಮನೆಗೆ ಯುವ ಕಾಂಗ್ರೆಸ್ ಮುತ್ತಿಗೆ
ಮೇ.16 ರಂದು ನಡೆಯಲಿರುವ ಮಹಾರಥೋತ್ಸವ ಸೇವೆಗೆ ಸಂಕಲ್ಪ ಸೇವೆ ಸಲ್ಲಿಸುವವರು 101 ರೂ.ಗಳನ್ನು ಪಾವತಿಸಿ ರಶೀದಿ ಪಡೆಯಬೇಕು ಎಂದು ಟ್ರಸ್ಟ್ ಉಪಾಧ್ಯಕ್ಷ ವಿ.ರಾಜು ತಿಳಿಸಿದರು. ಮೇ.17 ರಂದು ಪ್ರಭೋದೋತ್ಸವ 108 ಕಲಶ ಸ್ಥಾಪನೆ, ಕುಂಬಾಭಿಷೇಕ, ಹೋಮ, ಮಹಾಪೂಜೆ, ತೀರ್ಥಪ್ರಸಾದ ನಂತರ ಅನ್ನ ಸಂತರ್ಪಣೆ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಎಂ.ಪ್ರಭಾಕರ್, ಎಸ್.ಎನ್.ವೆಂಕಟೇಶ್, ಎಚ್.ಚಂದ್ರಶೇಖರ್, ಬಿ.ಡಿ.ರಮೇಶ್, ಎಸ್.ಎಚ್.ಸಂತೋಷ್, ಎಸ್.ವಿ.ಶ್ರೀನಿವಾಸ ರಾವ್, ಸ.ನ.ಚಂದ್ರಶೇಖರ್ ಮೊದಲಾದವರಿದ್ದರು.
