ಶಿವಮೊಗ್ಗ, ಮೇ.16 : ಶಿವಪ್ಪನಾಯಕ ಸರ್ಕಲ್ ನಿಂದ ಬಸವೇಶ್ವರ ಕಾಲೇಜು ಮೂಲಕ ಮಹಾನಗರ ಪಾಲಿಕೆಗೆ ಹಾದು ಹೋಗುವ ದಾರಿಯಲ್ಲಿ ಇದ್ದ ಹೂವಿನ ಮಾರುಕಟ್ಟೆಯನ್ನು ಶನಿವಾರ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಈಗಾಗಲೇ ಹಳೆ ಹೂವಿನ ಮಾರುಕಟ್ಟೆಯನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಬಹುಮಹಡಿ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಹಳೆ ಹೂವಿನ ಮಾರುಕಟ್ಟೆಯಲ್ಲಿ ಇದ್ದ ಹೂವಿನ ಅಂಗಡಿಗಳಿಗೆ ಖಾಸಗಿ ಬಸ್ ನಿಲ್ದಾಣದ ಬಳಿ ಸ್ಥಳವನ್ನು ನೀಡಲಾಗಿದೆ. ಆದರೂ ಕೆಲವು ಹೂವಿನ ಅಂಗಡಿಗಳು ಹಳೆ ಮಾರುಕಟ್ಟೆಯಲ್ಲೆ ಬೀಡು ಬಿಟ್ಟಿದ್ದರು.
ಇದರಿಂದ ಅಲ್ಲಿನ ಬಸವೇಶ್ವರ ಕಾಲೇಜಿನಲ್ಲಿ ನಡೆಯುವ ಪರೀಕ್ಷೆಗಳಿಗೆ, ವಿದ್ಯಾರ್ಥಿಗಳ ಹಾಗೂ ಪಾಲಿಕೆಗೆ ಹೋಗುವ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಉದ್ದೇಶದಿಂದ ಅನೇಕ ಬಾರಿ ಆ ಸ್ಥಳದಲ್ಲಿ ಹೂವಿನ ಮಾರುಕಟ್ಟೆಯನ್ನು ತೆರವುಗೊಳಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ರಾಜಕೀಯ ಒತ್ತಡಗಳು ಹಾಗೂ ಅನೇಕ ಕಾರಣಗಳಿಂದ ಮತ್ತೇ ಅದೇ ಸ್ಥಳದಲ್ಲಿ ಅಂಗಡಿಯನ್ನು ತೆರೆದುಕೊಳ್ಳುತ್ತಿದ್ದರು. ಆದರೆ ಈಗ ಪೊಲೀಸರ ಬಿಗಿಕ್ರಮದಿಂದ ತೆರವುಗೊಳಿಸಲಾಗಿದ್ದು, ಸಾರ್ವಜನಿಕರು ಪೊಲೀಸರ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಅಧಿಕಾರಿ ವೀರೇಶ್ ಪೂಜಾರ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರ ಖಡಕ್ ನಿರ್ಧಾರದಿಂದ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಈ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
