ಶಿವಮೊಗ್ಗ ಟೆಲೆಕ್ಸ್ ಸುದ್ದಿ ,ಜೂ.9:
ನನ್ನನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಹೈಕಮಾಂಡ್‌ಗೆ ನಿರ್ಧರಿಸಲಿದ್ದು, ಹೈಕಮಾಂಡ್ ಏನೇ ನಿರ್ಧಾರ ಮಾಡಿದರು ನಾವೆಲ್ಲರೂ ಅದಕ್ಕೆ ಬದ್ಧರಾಗಿದ್ದೇವೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎಸ್‌ಐಆರ್ ನಡೆಯುತ್ತಿದೆ. ಬಿಜೆಪಿಯವರು ಅದನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನಿಗೂ ಮತದಾನದ ಹಕ್ಕು ಇದ್ದು, ಅದನ್ನು ಕೊಡಿಸಬೇಕಾಗಿದೆ.
2ನೇ ಪಟ್ಟಿಯಲ್ಲಿ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಬೇಕು. ಜೂನ್ 18 ರಂದು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ನಂತರ ತೀರ್ಮಾನ ಮಾಡುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಶಿಕ್ಷಣ ಇಲಾಖೆ ಈಗ ಸಿಎಂ ಕೈಯಲ್ಲೇ ಇದ್ದು ಮೊದಲ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಿ, ಕ್ರಾಂತಿ ಮಾಡಿದ್ದಾರೆ ಎಂದರು.
ಪಬ್ಲಿಕ್ ಶಾಲೆಯ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ನಿಂತ್ತಿಲ್ಲ. 1000 ಕೆಪಿಎಸ್ ಶಾಲೆಗಳು ಆಗುತ್ತದೆ. ಶಿವಮೊಗ್ಗದಿಂದಲೇ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿಯ ಸಿಇಟಿ ಫಲಿತಾಂಶ ನೋಡಿದಾಗ ನಿಮಗೆ ರಾಜ್ಯದ ಶಿಕ್ಷಣ ಗುಣಮಟ್ಟದ ಅರಿವಾಗಿರಬಹುದು ಎಂದು ತಿಳಿಸಿದರು.
ಜಿ. ಪರಮೇಶ್ವರ್ ಮತ್ತು ಸತೀಶ್ ಜಾರಕಿಹೋಳಿ ಸೇರಿದಂತೆ ಹಿರಿಯ ನಾಯಕರ ಅಸಮಾಧಾನದ ಕುರಿತು ಮಾತನಾಡಿ,ಪಕ್ಷದಲ್ಲಿ ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಬಗೆಹರಿಸುತ್ತದೆ. ಆಸೆ ಎಲ್ಲರಿಗೂ ಇದೆ ಎಂದರು.
ದೇವೇಗೌಡರಿಗೆ ರಾಜ್ಯಸಭಾ ಟಿಕೇಟ್ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಂಬಿದವರಿಗೆ ಕೈಕೊಡುವುದು ಬಿಜೆಪಿಯ ಚಾಳಿ. ಜೆಡಿಎಸ್‌ನವರಿಗೆ ಬಿಜೆಪಿ ಸಹವಾಸದ ಪರಿಣಾಮ ಈಗ ಗೊತ್ತಾಗಿದೆ ಎಂದರು.
