Homeಜಿಲ್ಲೆಸಂಚಾರ ದಂಡಕ್ಕೆ ಶೇ. 50 ರಿಯಾಯಿತಿ

ಸಂಚಾರ ದಂಡಕ್ಕೆ ಶೇ. 50 ರಿಯಾಯಿತಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂನ್ 18

ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ.50 ರಿಯಾಯ್ತಿ ಘೋಷಣೆ ಮಾಡಲಾಗಿದೆ ಹಾಗೂ ರಾಷ್ಪ್ರೀಯ ಲೋಕ್ ಅದಾಲತ್, ವಿಶೇಷ ಲೋಕ್ ಅದಾಲತ್, ವ್ಯಸನ ಮುಕ್ತಿ ಜಾಗೃತಿ ಮತ್ತು ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಜಿ ಎ ತಿಳಿಸಿದರು.

ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಿ.ಸಿ.ಕೊಠಡಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್, ಸಮಾಧಾನ್ ಸಮಾರೋಹ್ ವಿಶೇಷ ಲೋಕ್ ಅದಾಲತ್, ಎನ್ ಐ ಕಾಯ್ದೆಯ ವಿಶೇಷ ಲೋಕ್ ಅದಾಲತ್, ಖಾಯಂ ಲೋಕ್ ಅದಾಲತ್, ಮಾದಕ ದ್ರವ್ಯ ವ್ಯಸನ ಮುಕ್ತಿ ಜಾಗೃತಿ ಹಾಗೂ ಕೆರೆಗಳ ಪುನಶ್ಚೇತನ ಮತ್ತು ಸಸಿ ನೆಡುವ ಅಭಿಯಾನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗಮನಿಸಿ: ಕೆ.ಜೆ.ಜಾರ್ಜ್ ಗೂ ಟಾಟಾ ಪವರ್ ಕಂಪನಿಗೂ ಏನು ಸಂಬಂಧ: ಕೆ.ಎಸ್ ಈಶ್ವರಪ್ಪ

2026 ರ ಮೇ ಮಾಹೆಗಿಂತ ಮೊದಲು ಸಂಚಾರ ನಿಯಮ ಉಲ್ಲಂಘನೆಗಾಗಿ ದಾಖಲಾಗಿರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಭಾರೀ ಶೇಕಡಾ 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ವಿಶೇಷ ರಿಯಾಯಿತಿ ಯೋಜನೆಯು ದಿನಾಂಕ 21-06-2026 ರಿಂದ 10-07-2026 ರವರೆಗೆ ಒಟ್ಟು 20 ದಿನಗಳು ಮಾತ್ರ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಶೇ. 50 ರಷ್ಟು ದಂಡ ಪಾವತಿಸಿ ತಮ್ಮ ಮೇಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ.

ನಗರದಲ್ಲಿ ದಿನಾಂಕ 28-08-2023 ರಿಂದ 30-04-2026 ರವರೆಗೆ ಸ್ಮಾರ್ಟ್ ಸಿಟಿ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನ ಐಟಿಎಂಎಸ್ ಮೂಲಕ ದಾಖಲಾದ ಇ-ಚಲನ್‌ಗಳ ವಿವರ ಹೀಗಿದೆ:

ಒಟ್ಟು 4,38,023 ಇ-ಚಲನ್ ಪ್ರಕರಣಗಳು ದಾಖಲಾಗಿದ್ದು ಒಟ್ಟು ದಂಡದ ಮೊತ್ತ ರೂ. 31,80,66,250 ಆಗಿರುತ್ತದೆ. 1,38,986 ಇ-ಚಲನ್‌ಗಳು ಇತ್ಯರ್ಥಗೊಂಡು ರೂ. 6,09,47,900 ಮೊತ್ತ ವಸೂಲಾಗಿದೆ. 2,99,037 ಪ್ರಕರಣಗಳು ಬಾಕಿ ಇದ್ದು, ರೂ. 23,71,18,350 ದಂಡ ವಸೂಲಾತಿಗೆ ಬಾಕಿ ಇದೆ.

ದಂಡ ಪಾವತಿಸುವ ಬಗೆ-ಸ್ಥಳಗಳು : ಸಾರ್ವಜನಿಕರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ವಿವರಗಳನ್ನು ಆನ್‌ಲೈನ್ ಮೂಲಕ: NextGen eChallan ವೆಬ್ ಪೋರ್ಟಲ್ ಅಥವಾ ನೇರವಾಗಿ https://103.195.218.159/challan ಲಿಂಕ್ ಬಳಸಿ ಆನ್‌ಲೈನ್‌ನಲ್ಲಿ ದಂಡ ಪಾವತಿಸಬಹುದು. ಹಾಗೂ ಈ ಕೆಳಕಂಡ ಸ್ಥಳಗಳಲ್ಲಿ ಪಾವತಿಸಬಹುದು.
ಪೂರ್ವ ಸಂಚಾರ ಪೊಲೀಸ್ ಠಾಣೆ, ಚಂಡಿಕಾ ಪರಮೇಶ್ವರಿ ದೇವಸ್ಥಾನದ ಎದುರು, ಕೋಟೆ ರಸ್ತೆ, ಶಿವಮೊಗ್ಗ. ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಸಾಗರ ರಸ್ತೆ, ಶಿವಮೊಗ್ಗ. ಭದ್ರಾವತಿ ಸಂಚಾರ ಪೊಲೀಸ್ ಠಾಣೆ, ಉಂಬ್ಳೇಬೈಲು ರಸ್ತೆ, ಭದ್ರಾವತಿ. ಕರ್ತವ್ಯ ನಿರತ ಶಿವಮೊಗ್ಗ ಸಂಚಾರ ಠಾಣೆಯ ಇ-ಚಲನ್ ಪಿಡಿಎ ಮಷೀನ್ ಹೊಂದಿರುವ ಎಎಸ್‌ಐ ಹಾಗೂ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳ ಬಳಿ.

ಅಶೋಕ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಗೋಪಿ ಸರ್ಕಲ್ ಹಾಗೂ ಪೊಲೀಸ್ ಚೌಕಿ ಸರ್ಕಲ್‌ಗಳಲ್ಲಿರುವ ಪೊಲೀಸ್ ಕಿಯೋಸ್ಕ್ ಗಳಲ್ಲಿ ಬೆಳಗ್ಗೆ 09 ರಿಂದ ರಾತ್ರಿ 09 ಗಂಟೆಯವರೆಗೆ ವಿಶೇಷ ಕೌಂಟರ್‌ಗಳು ಲಭ್ಯವಿರುತ್ತವೆ.

ಕೇವಲ 20 ದಿನಗಳ ಕಾಲ ಮಾತ್ರ ಲಭ್ಯವಿರುವ ಈ ಸುವರ್ಣಾವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಂಡು, ಕಾನೂನುಬದ್ಧವಾಗಿ ತಮ್ಮ ದಂಡ ಇತ್ಯರ್ಥಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಇದೇ ವೇಳೆ ಇ-ಚಲನ್ ದಂಡ ಪಾವತಿ ಕುರಿತಾದ ಡಿಜಿಟಲ್ ಬ್ಯಾನರ್‌ನ್ನು ಬಿಡುಗಡೆಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments