Homeಜಿಲ್ಲೆಸಂಸದರ ನೇತೃತ್ವದ ಸಿಎಂ ಭೇಟಿ ಮಾಡಿದ ಜಿಲ್ಲೆಯ ಕಾನೂನು ಪ್ರತಿನಿಧಿಗಳು ಹಾಗೂ ಶಾಸಕರ ನಿಯೋಗ

ಸಂಸದರ ನೇತೃತ್ವದ ಸಿಎಂ ಭೇಟಿ ಮಾಡಿದ ಜಿಲ್ಲೆಯ ಕಾನೂನು ಪ್ರತಿನಿಧಿಗಳು ಹಾಗೂ ಶಾಸಕರ ನಿಯೋಗ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ. 24

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಜಿಲ್ಲೆಯಾದ್ಯಂತ ಸಾವಿರಾರು ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಬೆಳೆ ವಿಮಾ ಪರಿಹಾರ ವೈಪರೀತ್ಯಗಳನ್ನು ಪರಿಹರಿಸಬೇಕೆಂದು ಜಿಲ್ಲೆಯ ಶಾಸಕರು ಮತ್ತು ಕಾನೂನು ಪ್ರತಿನಿಧಿಗಳ ನಿಯೋಗದೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಒತ್ತಾಯಿಸಿದರು.

ಗಮನಿಸಿ: ಬಿಜೆಪಿ ಬಗ್ಗೆ ಅನಾವಶ್ಯಕವಾಗಿ ಮಾತನಾಡಬೇಡಿ: ಈಶ್ವರಪ್ಪರಿಗೆ ಆರಗ ತಾಕೀತು

ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆ ಆಗಬೇಕು. ಮಲೆನಾಡು ಮತ್ತು ಮಧ್ಯ ಕರ್ನಾಟಕದಾದ್ಯಂತ ಕಾನೂನು ಸಮುದಾಯ, ವಕೀಲರ ಸಂಘಗಳು, ನಾಗರಿಕ ಸಂಸ್ಥೆಗಳು ಮತ್ತು ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗಳನ್ನು ಮತ್ತು ಅದಕ್ಕೆ ಸಕಾರಣಗಳೊಂದಿಗೆ ಮುಖ್ಯಮಂತ್ರಿಗೆ ವಿವರಿಸಿದರು.
ಸಂವಿಧಾನದ ಸದಾಶಯದಂತೆ ಇದು ನ್ಯಾಯವನ್ನು ಜನರಿಗೆ ಹತ್ತಿರ ತರುವ ಜೊತೆಗೆ ಪ್ರದೇಶದಲ್ಲಿ ನ್ಯಾಯಾಂಗ ಸೇವೆಗಳ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ತಿಳಿಸಿದರು.

ಶಿವಮೊಗ್ಗದ ಭೌಗೋಳಿಕ ಅನುಕೂಲಗಳು, ಉತ್ತಮ ಸಂಪರ್ಕ ವ್ಯವಸ್ಥೆ ಹಾಗೂ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಶೈಕ್ಷಣಿಕ, ವಾಣಿಜ್ಯ ಮತ್ತು ಸಾಂಸ್ಥಿಕ ಕೇಂದ್ರವಾಗಿ ಬೆಳೆಯುತ್ತಿದೆ. ಜಿಲ್ಲೆಗೆ ಮಾತ್ರವಲ್ಲ, ಮಧ್ಯಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಸೂಕ್ತವಾದ ಸ್ಥಳವಾಗಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಸಾರ್ವಜನಿಕರಿಗೆ ಮತ್ತು ದಾವೆದಾರರಿಗೂ ನ್ಯಾಯಿಕ ಸೇವೆ ಪಡೆಯಲು ಅನುಕೂಲವಾಗುತ್ತದೆ, ಪ್ರಯಾಣದ ಸಮಯ, ವೆಚ್ಚ ಮತ್ತು ಇನ್ನಿತರ ಅಡಚಣೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶ ಮತ್ತು ಮಳೆಗಾಲದಲ್ಲಿ ಪದೇ ಪದೇ ಸಂಭವಿಸುವ ನೈಸರ್ಗಿಕ ಅಡಚಣೆಗಳಿಂದಾಗಿ ಶಿವಮೊಗ್ಗವನ್ನು ಪ್ರಸ್ತಾವಿತ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸುವುದು ಬೇಡ, ಹಾಗೆ ಮಾಡುವುದರಿಂದ ದಾವೆದಾರರು, ವಕೀಲರು ಮತ್ತು ಸಾರ್ವಜನಿಕರ ಮೇಲೆ ಅನಗತ್ಯವಾಗಿ ಹೆಚ್ಚಿನ ಹೊರೆ ಹೊರೆಸಿದಂತಾಗುತ್ತದೆ. ಇದರಿಂದಾಗಿ ನ್ಯಾಯ ಪ್ರಾಪ್ತಿಯಲ್ಲಿ ವಿಳಂಬ ಮತ್ತು ಅಧಿಕ ವೆಚ್ಚದ ಹೊರೆಯಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಮನವರಿಕೆ ಮಾಡಿದರು.

ಬೆಳೆ ವಿಮಾ ಪರಿಹಾರದ ವೈಪರೀತ್ಯಗಳನ್ನು ಸರಿಪಡಿಸುವಂತೆ ಸಂಸದರ ಒತ್ತಾಯ:

2024-25ನೇ ಸಾಲಿನ ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (R-WBCIS) ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ರೈತರಿಗೆ ನೀಡಲಾದ ಪರಿಹಾರದಲ್ಲಿನ ಗಂಭೀರ ವ್ಯತ್ಯಾಸಗಳಿವೆ.

ಅವೈಜ್ಞಾನಿಕ ಮೇಲ್ವಿಚಾರಣೆ ಮತ್ತು ಟೆಲಿಮೆಟ್ರಿಕ್ ಮಳೆ ಮಾಪಕಗಳು (TRGs) ಮತ್ತು ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳ (TWSs) ಅಸಮರ್ಪಕ ನಿರ್ವಹಣೆಯಿಂದಾಗಿ ಪರಿಹಾರದ ಮೊತ್ತದಲ್ಲಿ ಗಮನಾರ್ಹ ವ್ಯತ್ಯಾಸಗಳು ಉಂಟಾಗಿವೆ, ಒಂದೇ ರೀತಿಯ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿದ ನೆರೆಯ ಹಳ್ಳಿಗಳ ರೈತರು ಪಡೆದ ಬೆಳೆ ನಷ್ಟಗಳ ವಿಭಿನ್ನ ಪಾವತಿಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಈ ಅಸಮಾನತೆಗಳು ಶಿವಮೊಗ್ಗ ಜಿಲ್ಲೆಯ ರೈತರಲ್ಲಿ ಅಸಮಾಧಾನವನ್ನು ಉಂಟು ಮಾಡಿದ್ದು, ಪರಿಹಾರದಲ್ಲಿ ಆಗಿರುವ ವೈಪರೀತ್ಯಗಳನ್ನು ಸರಿಪಡಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಸಲ್ಲಿಸಲಾಗಿದ್ದ ವಿವರವಾದ ಪ್ರಸ್ತಾವನೆಯು ಹಲವಾರು ತಿಂಗಳುಗಳಿಂದ ರಾಜ್ಯ ಸರ್ಕಾರದೊಂದಿಗೆ ಬಾಕಿ ಇದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಯ ಮೇಲೆ ತಕ್ಷಣವೇ ಕ್ರಮ ಕೈಗೊಳ್ಳಬೇಕು, ಪರಿಹಾರ ಮೌಲ್ಯಮಾಪನದ ಮೇಲೆ ಪರಿಣಾಮ ಬೀರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಮತ್ತು ಬಾಧಿತ ರೈತರು ಮತ್ತಷ್ಟು ವಿಳಂಬವಿಲ್ಲದೆ ನ್ಯಾಯಯುತ ಪರಿಹಾರ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments