ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.10
ಬಿಸಿಯೂಟ ಕಾರ್ಮಿಕರಿಗೆ ಮಾಸಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಬಿಸಿಯೂಟ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆಯ ಅಂಗವಾಗಿ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ಮಾಸಿಕ ವೇತನವನ್ನು 7000ಕ್ಕೆ ಹೆಚ್ಚಿಸಬೇಕು. ಸರ್ಕಾರಗಳು ಬದಲಾಗುತ್ತಿದ್ದರೂ ನೀತಿಗಳು ಬದಲಾಗುತ್ತಿಲ್ಲ. 2008ರಿಂದ ಕೇಂದ್ರ ಸರ್ಕಾರ ಈ ಬಡ ಮಹಿಳೆಯರ ವೇತನ ಹೆಚ್ಚಳ ಮಾಡಿಲ್ಲ. ಜಿಲ್ಲೆಯಲ್ಲಿ ಸುಮಾರು 4,500ಕ್ಕೂ ಹೆಚ್ಚು ಬಿಸಿಯೂಟ ಕಾರ್ಮಿಕರಿದ್ದು, ರಾಜ್ಯದಲ್ಲಿ 1,18,000ಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರ ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು.
ಗಮನಿಸಿ: ಶಿವಪ್ಪನಾಯಕ ಕೃಷಿ ವಿವಿಗೆ ನೂತನ ಕುಲಪತಿ ನೇಮಕ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಯಂತೆ ಬಿಸಿಯೂಟ ಕಾರ್ಮಿಕರಿಗೆ ಮಾಸಿಕ 7000 ರೂ. ವೇತನ ಕೊಡಬೇಕು. ಬೆಲೆ ಏರಿಕೆ ಆಧಾರದಲ್ಲಿ ಅನುದಾನ ಹೆಚ್ಚಾಗಿ ನೀಡಬೇಕು. ಇಸ್ಕಾನ್ ಗೆ ಬಿಸಿಯೂಟ ವಹಿಸುವ ಪ್ರಸ್ತಾಪ ಕೈಬಿಡಬೇಕು. ಖಾಸಗಿ ಸಂಸ್ಥೆಗಳಿಗೆ ಈ ಜವಾಬ್ದಾರಿ ನೀಡಬಾರದು ಎಂದು ಒತ್ತಾಯಿಸಿದರು.
ಎಲ್ಲಾ ಜಿಲ್ಲೆಗಳಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಇಡುಗಂಟು ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಉಚ್ಚ ನ್ಯಾಯಾಲಯ 6ಗಂಟೆ ಕೆಲಸದ ಅವಧಿಯ ಸುತ್ತೋಲೆ ಹೊರಡಿಸಬೇಕು. ಮಾಸಿಕ ಪಿಂಚಣಿ 10,000 ರೂ. ತೀರ್ಮಾನಿಸಿದಂತೆ ವರ್ಷದ 12 ತಿಂಗಳೂ ಕೆಲಸ ಮತ್ತು ಕನಿಷ್ಠ ಕೂಲಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಅಕ್ಷರ ದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು. ಕೆಲಸದ ಸಮಯದಲ್ಲಿ ಮರಣ ಹೊಂದಿದರೆ 25 ಲಕ್ಷ ರೂ. ಪರಿಹಾರ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು. ಪ್ರತಿ ಶಾಲೆಯಲ್ಲಿ ಎರಡು ಜನ ಅಡುಗೆಯವರು ಇರಲೇಬೇಕು ಎಂಬುದೂ ಸೇರಿದಂತೆ ಸುಮಾರು 19ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂಘದ ಅಧ್ಯಕ್ಷೆ ಹನುಮಮ್ಮ, ಪ್ರಧಾನ ಕಾರ್ಯದರ್ಶಿ ಸುನಿತಾ, ಖಜಾಂಚಿ ಸೂರ್ಯಕಲಾ, ಸಿಐಟಿಯು ಸಂಚಾಲಕ ಎಂ. ನಾರಾಯಣ, ವಿವಿಧ ತಾಲೂಕಿನ ಅಧ್ಯಕ್ಷರಾದ ಭಾಗ್ಯಮ್ಮ, ಜಯಮ್ಮ, ಗೀತಾ, ರೂಪಾ, ಚಂದ್ರಮ್ಮ, ಅಶ್ವಿನಿ, ತಾರಾ ಹಾಗೂ ನಾರಾಯಣ, ಮುನಿರಾಜ್, ಯಲ್ಲಪ್ಪ, ಷಣ್ಮುಖಪ್ಪ ಮುಂತಾದವರಿದ್ದರು.
