Homeಜಿಲ್ಲೆಕುಡಿಯುವ ನೀರು ವ್ಯತ್ಯಯ- ಸಾರ್ವಜನಿಕರು ಸಹಕರಿಸಿ: ಶಾಸಕ ಮನವಿ

ಕುಡಿಯುವ ನೀರು ವ್ಯತ್ಯಯ- ಸಾರ್ವಜನಿಕರು ಸಹಕರಿಸಿ: ಶಾಸಕ ಮನವಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.10

ನಗರದಲ್ಲಿ ಇನ್ನೂ ಆರು ದಿನ ಶೇ. 30 ಭಾಗದ ಜನರಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.

ಅವರು ಶುಕ್ರವಾರ ನಗರದ ಮಂಡ್ಲಿಯಲ್ಲಿರುವ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಮತ್ತು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕ್ಲಾರಿ ಫ್ಲೆಕ್ಟರ್ ಯಂತ್ರದ ದುರಸ್ತಿ ಕಾರ್ಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಳೆಗಾಲದಲ್ಲಿ ನಮಗೆ ಯಥೇಚ್ಛವಾಗಿ ನೀರು ಸಿಗುತ್ತಿದೆಯಾದರೂ ಇಲ್ಲಿನ ಶುದ್ಧೀಕರಣ ಘಟಕದಲ್ಲಿ ಅತ್ಯಂತ ಹಳೆಯ ಮಿಷನರಿ ವ್ಯವಸ್ಥೆ ಇದ್ದು, ಶುದ್ಧ ನೀರು ಸರಬರಾಜು ಮಾಡುವ ಕ್ಲಾರಿಫ್ಲೆಕ್ಟರ್ ಯಂತ್ರವು ಸಂಪೂರ್ಣ ಹಾಳಾಗಿದ್ದು, ನೀರು ರಭಸದಿಂದ ಕಾಂಕ್ರಿಟ್‌ಗಳು ಒಡೆದಿರುವುದರಿಂದ ಭೂಮಿಯ ಅಡಿಗೆ ನೀರು ಸೇರುತ್ತಿತ್ತು. ಇದರಿಂದ ಪೈಪ್‌ಗಳು ತುಕ್ಕು ಹಿಡಿದಿದ್ದು, ಅದನ್ನು ಸರಿಪಡಿಸಲು ಹೋದಾಗ ಅಲ್ಲಿಯ ಸಮಗ್ರ ವ್ಯವಸ್ಥೆಯೇ ದೋಷಪೂರಿತವಾಗಿರುವುದು ಮತ್ತು ದುರಸ್ತಿ ಮಾಡಲೇಬೇಕಾದ ಅನಿವಾರ್ಯತೆ ಗಮನಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ತುರ್ತಾಗಿ ಜಲಮಂಡಳಿ ವತಿಯಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದು, 45 ಕಾರ್ಮಿಕರು ಕಳೆದ ಕೆಲವು ದಿನಗಳಿಂದ ಹಗಲಿರುಳು ಮಳೆಯನ್ನೂ ಲೆಕ್ಕಸಿದೇ ಈ ಕಾಮಗಾರಿಗೆ ಶ್ರಮಿಸುತ್ತಿದ್ದಾರೆ ಎಂದರು.

ಈ ಕಾಮಗಾರಿ ಪೂರ್ಣವಾಗಲು ಇನ್ನೂ 6 ದಿನ ಬೇಕಾಗುತ್ತದೆ. ಹಾಗಾಗಿ ನೀರು ವ್ಯತ್ಯಯವಾಗುವ ಭಾಗಗಳಿಗೆ ನಿನ್ನೆಯಿಂದಲೇ ಪಾಲಿಕೆಯ ವತಿಯಿಂದ 12 ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಂದಿನಿಂದ ಇನ್ನೂ ಹೆಚ್ಚುವರಿ ಟ್ಯಾಂಕರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಈ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು ಎಂದು ವಿನಂತಿಸಿದರು.

24*7 ನೀರು ವಿತರಣೆ ಕಾಮಗಾರಿ ಕೂಡ ನಡೆಯುತ್ತಿದ್ದು, ಅದಕ್ಕೆ ಬೇಕಾದ ಪೂರಕ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವರು ಬಂದಾಗ ನಗರ ಬೆಳೆದು ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಇನ್ನೊಂದು ಶುದ್ಧೀಕರಣ ಕೇಂದ್ರಕ್ಕೆ ಮನವಿ ನೀಡಿದ್ದೆವು. ಸುಮಾರು 450 ಕೋಟಿ ರೂ. ವೆಚ್ಚದ ಈ ಯೋಜನೆಗೆ ಎಲ್ಲಾ ಸಿದ್ಧತೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಾಗವನ್ನೂ ಗುರುತಿಸಿ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ನೂತನ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲಿದ್ದೇನೆ. ಈಗಿನ ಶುದ್ಧೀಕರಣ ಘಟಕ 30 ವರ್ಷ ಹಳೆಯದಾಗಿದ್ದು, ಅದರ ಅವಧಿ ಮುಗಿಯುತ್ತಾ ಬಂದಿದೆ. ತುರ್ತಾಗಿ ನಗರಕ್ಕೆ ಇನ್ನೊಂದು ಅತ್ಯಾಧುನಿಕ ಶುದ್ಧೀಕರಣ ಘಟಕ ಬೇಕಾಗಿದೆ. ಹಿಂದೆ ಗಾಜನೂರಿನಿಂದ ನೇರವಾಗಿ ಈ ಘಟಕಕ್ಕೆ ನೀರು ಸರಬರಾಜು ಮಾಡಲು ಅನೇಕು ಹೋರಾಟ ಮಾಡಿದ್ದೆವು. ಈಗಿರುವ ಘಟಕ ಹಳೆಯದಾಗಿದೆ. ಆದಷ್ಟು ಬೇಗ ಈ ದುರಸ್ತಿ ಕಾರ್ಯ ಮುಗಿದು ಒಂದು ವಾರದೊಳಗೆ ನೀರು ಸರಬರಾಜು ಮಾಡುತ್ತೇವೆ ಎಂದರು.

ಜಲಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಜೀವನ್ ಮಾತನಾಡಿ, ಪ್ರತಿನಿತ್ಯ ನಗರಕ್ಕೆ ಗಾಜನೂರಿನಿಂದ 84 ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ಈಗ 22 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಡ್ಯಾಮೇಜ್ ಆಗಿದೆ. ಸಮರೋಪಾದಿಯಲ್ಲಿ ಅದನ್ನು ದುರಸ್ತಿ ಮಾಡಲಾಗುತ್ತಿದೆ. ನೀರಿನ ಅಗತ್ಯವಿರುವ ಸಾರ್ವಜನಿಕರು ಸಂಪರ್ಕಿಸುವಂತೆ ಅವರು ಕೋರಿದರು.

ಈ ಸಂದರ್ಭದಲ್ಲಿ ಜಲಮಂಡಳಿಯ ಇಇ ರಾಘವೇಂದ್ರ ಟಿ., ಪಾಲಿಕೆ ಅಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments