ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17
ಸಮಾಜದಲ್ಲಿ ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಆಧಾರಿತ ಆರ್ಥಿಕ ನೆರವು ಅತ್ಯಗತ್ಯವಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಅವರು ತಮ್ಮ ‘ಕರ್ತವ್ಯ ಭವನ’ದಲ್ಲಿ ಶುಕ್ರವಾರ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳು ಆರ್ಥಿಕವಾಗಿ ಸ್ವಾಲಂಬಿಗಳಾಗಲು ಅನೇಕ ಯೋಜನೆಯನ್ನು ಜಾರಿ ಮಾಡಿದ್ದು, ಫಲಾನುಭವಿಗಳು ಈ ನಿಗಮದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಗಮನಿಸಿ: ಗೃಹಲಕ್ಷ್ಮಿ 31ನೇ ಕಂತು ಬಿಡುಗಡೆ; ಇನ್ನೊಂದೆರೆಡು ದಿನಗಳಲ್ಲಿ ಜಮಾ: ಸಿಎಸ್ ಚಂದ್ರಭೂಪಾಲ್
ನಮ್ಮ ಅವಧಿಯಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಅರ್ಹತೆ ಹೊಂದಿರುವ ನೈಜ ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ತಲುಪುವಂತೆ ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ತವ್ಯ ಭವನವು ಸದಾ ಸಾರ್ವಜನಿಕರ ಹಿತರಕ್ಷಣೆಗೆ ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಮುಕ್ತವಾಗಿರುತ್ತದೆ ಎಂದರು.

ಈ ವೇಳೆ ಶಾಸಕರು ಕ್ಷೇತ್ರದ ಒಟ್ಟು 50 ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಹಾಗೆಯೇ ಸ್ವಯಂ ಉದ್ಯೋಗದ ಮೂಲಕ ಜೀವನ ಕಂಡುಕೊಳ್ಳಲು ಇಚ್ಛಿಸಿದ 55 ಅರ್ಹ ಅಭ್ಯರ್ಥಿಗಳಿಗೆ ನಿಗಮದ ನೇರ ಸಾಲ ಯೋಜನೆಯಡಿ ಸಾಲದ ಪತ್ರ ಹಾಗೂ ಸಹಾಯಧನದ (ಸಬ್ಸಿಡಿ) ಮಂಜೂರಾತಿ ಆದೇಶಗಳನ್ನು ಹಸ್ತಾಂತರಿಸಿದರು.
ಇದೇ ವೇಳೆ ಸೌಲಭ್ಯಗಳನ್ನು ಸ್ವೀಕರಿಸಿದ ಫಲಾನುಭವಿಗಳು ಶಾಸಕರ ತ್ವರಿತ ಸ್ಪಂದನೆ ಹಾಗೂ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಕುಶಾಲ್, ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ ಸುನಿತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ ನವಲೆ, ನಗರ ಮಹಿಳಾ ಮೋರ್ಚಾದ ಅಧ್ಯಕ್ಷ ರಶ್ಮಿ ಶ್ರೀನಿವಾಸ್, ಪ್ರಮುಖರಾದ ನಿರ್ಮಲ, ಶ್ರೀನಾಗ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸುರೇಖಾ ಮುರಳಿಧರ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಶಾಸಕರ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
