ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.12
ಸಾಗರ ತಾಲೂಕಿನ ಆನಂದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಂದೂರು ಗ್ರಾಮದ ಸರ್ವೇ ನಂಬರ್ 148 ರಲ್ಲಿರುವ ಗ್ರಾಮ ಠಾಣದ ಜಾಗವನ್ನು ಸಂರಕ್ಷಿಸಿ, ಸಾರ್ವಜನಿಕ ಬಳಕೆಗೆ ಮೀಸಲಿಡಬೇಕೆಂದು ಒತ್ತಾಯಿಸಿ ಮಲಂದೂರು ಗ್ರಾಮಸ್ಥರು ಬುಧವಾರ ಜಿಪಂ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ಜಾಗ ಅತ್ಯಂತ ಪ್ರಮುಖ ಸ್ಥಳದಲ್ಲಿದ್ದು, ಸುಮಾರು 20 ಕೋಟಿ ಮೌಲ್ಯ ಹೊಂದಿದೆ.ಹಲವು ದಶಕಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಉಳಿಸಿಕೊಂಡು ಬಂದಿರುವ ಈ ಜಾಗವನ್ನು ಹಣದ ಬಲದಿಂದ ಕೆಲವರು ರಾಜಕೀಯ ಪ್ರಭಾವ ಬಳಸಿ ಕಬಳಿಸುವ ಹುನ್ನಾರ ನಡೆಸಿದ್ದಾರೆಂದು ದೂರಿದರು.
ವಿಶೇಷವಾಗಿ ಸ್ಥಳೀಯ ಶಾಸಕರ ಬೆಂಬಲಿಗರೆಂದು ಹೇಳಿಕೊಳ್ಳುವ ಕೆಲವರು ಹಾಗೂ ಭೂ ಕಬಳಿಕೆದಾರರೊಂದಿಗೆ ಸಂಪರ್ಕ ಹೊಂದಿರುವವರು ಜಾಗದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಜಾಗವನ್ನು ರಕ್ಷಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಾರ್ವಜನಿಕ ಜಾಗದ ಮೇಲೆ ಅಕ್ರಮ ಹಕ್ಕು ಸಾಧಿಸುವ ಪ್ರಯತ್ನಗಳಿಗೆ ಅವಕಾಶ ಸಿಗುತ್ತಿದೆ ಎಂಬುದಾಗಿಯೂ ಗ್ರಾಮಸ್ಥರು ದೂರಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಜಿಪಂ ಮಾಜಿ ಸದಸ್ಯ ರತ್ನಾಕರ್ ಹೊನಗೋಡು ಅವರು,ಗ್ರಾಮ ಠಾಣದ ಜಾಗಕ್ಕೆ ಸಂಬಂಧಿಸಿದ ವಿವಾದವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರ ಕಾರ್ಯವೈಖರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಅಥವಾ ಹಣದ ಪ್ರಭಾವಕ್ಕೆ ಒಳಗಾಗಿ ಸಾರ್ವಜನಿಕ ಆಸ್ತಿಯ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಜಾಗದ ದಾಖಲೆಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ನಿರಾಶ್ರಿತರಿಗೆ ಮನೆ ನಿವೇಶನ ಸೇರಿದಂತೆ ವಿವಿಧ ಸಾರ್ವಜನಿಕ ಸೇವೆಗಳಿಗೆ ಬಳಸಬೇಕು ಎಂಬುದು ನಾಗರಿಕರು ಹಾಗೂ ಪಕ್ಷಾತೀತ ಮುಖಂಡರ ಆಶಯವಾಗಿದೆ.ಈ ಹಿನ್ನೆಲೆಯಲ್ಲಿ ಈ ಜಾಗವನ್ನು ಸಂರಕ್ಷಿಸಲು ಜಿಲ್ಲಾಡಳಿತ ತಕ್ಷಣವೇ ಮುಂದಾಗಬೇಕೆಂದು ಒತ್ತಾಯಿಸಿದ ಮನವಿಯನ್ನು ಜಿಪಂ ಸಿಇಒ ಮೂಲಕ ಗ್ರಾಮೀಣಾವೃದ್ದಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಡಿ. ರವಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ. ಗಂಗಾಧರಪ್ಪ, ಮ್ಯಾಮ್ಕೋಸ್ ನಿರ್ದೇಶಕ ಭರ್ಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಗುರುರಾಜ್, ನವೀನ, ರವಿ ಗೌಡ, ಶಿವಾನಂದ, ಗಣಪತಿ ಚೌಡಪ್ಪ, ಮೋಹನ್, ಇರುವಕ್ಕಿ ಶಿವಾನಂದ, ಗೇರಬೀಸ್ ಪರಮೇಶಿ, ಲಲಿತಮ್ಮ, ದಲಿತ ಸಮಿತಿ ಸಂಚಾಲಕರಾದ ರೇವಪ್ಪ, ನಾಗರಾಜ, ಶೇಖರಪ್ಪ ದಾಸಕೋಪ್ಪ, ಶಾಂತಕುಮಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
