ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.22
ಹೊಸ ಆಟೋ ರಿಕ್ಷಾ ಸಂಚರಿಸಲು ಯಾವುದೇ ಕಾರಣಕ್ಕೂ ಪರ್ಮಿಟ್ ನೀಡಬಾರದು ಎಂದು ಶಿವಮೊಗ್ಗ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಆಗ್ರಹಿಸಿದೆ.
ನಗರದಲ್ಲಿ ಈಗಾಗಲೇ 8000 ಆಟೋಗಳಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಹೊಸದಾಗಿ ಪರ್ಮಿಟ್ ನೀಡಿದರೆ ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಅಜ್ಗರ್ ಪಾಷಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ಶಿವಮೊಗ್ಗದಲ್ಲಿ ಕಾರ್ಖಾನೆಗಳಿಲ್ಲ, ಪ್ರವಾಸಿ ತಾಣಗಳಿಲ್ಲ, ನಗರ ಚಿಕ್ಕದು. ಆದರೂ 8000 ಆಟೋ ಮತ್ತು ಹೆಚ್ಚು ಸಿಟಿ ಬಸ್ಸುಗಳಿವೆ. ಸಾಲ ಮಾಡಿ ಆಟೋ ತೆಗೆದುಕೊಂಡ ಚಾಲಕರು ದಿನಕ್ಕೆ 300 ರೂ. ಉಳಿಸುವುದೇ ಕಷ್ಟ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ, ಆಟೋ ನಿರ್ವಹಣೆ ಮಾಡಲಾಗದೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದರು.
ಗಮನಿಸಿ: ದೇವಸ್ಥಾನಕ್ಕಿಂತ ಶಾಲೆ ದೊಡ್ಡದೆಂಬ ಮನೋಭಾವ ಬೆಳೆಯಬೇಕು: ಮಧು ಬಂಗಾರಪ್ಪ
ಈಗಿರುವ ಆಟೋಗಳ ಸಂಖ್ಯೆಯೇ ಮುಂದಿನ 10 ವರ್ಷಕ್ಕೆ ಸಾಕು. ಆದರೆ ಜು.15, 2026ರ ಆರ್‌ಟಿಎ ಸಭೆಯಲ್ಲಿ ಒಬ್ಬರಿಗೆ ಒಂದು ಪರ್ಮಿಟ್ ನೀಡುವ ನಿರ್ಣಯ ಮಾಡಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲಾಧಿಕಾರಿಗಳು ಈ ನಿರ್ಣಯ ಕೈಬಿಟ್ಟು ಮುಂದಿನ 10 ವರ್ಷ ಹೊಸ ಪರ್ಮಿಟ್ ನೀಡಬಾರದು ಎಂದು ಆಗ್ರಹಿಸಿದರು.
ಈಗಾಗಲೇ ಸಿಎನ್‌ಜಿ ದರ ಕೂಡ ಏರಿಸಲಾಗಿದೆ. ಒಂದು ಕೆ.ಜಿ.93ರೂ ಇತ್ತು. ಈಗ 95ರೂ. ಮಾಡಿದ್ದಾರೆ. ಇದು ಕೂಡ ಆಟೋ ಚಾಲಕರಿಗೆ ಹೊರೆಯಾಗಲಿದೆ ಮತ್ತು ಶಿವಮೊಗ್ಗ ನಗರದಲ್ಲಿ ರ‍್ಯಾಪಿಡೋ ಬೈಕ್‌ಗಳಿಗೆ ಅವಕಾಶ ಇಲ್ಲದಿದ್ದರೂ ಕೂಡ ಅವು ಸಂಚರಿಸುತ್ತಿವೆ. ಸಾರಿಗೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಸ್ಥಾಪಕ ಅಲ್ಲಾಬಕ್ಷಿ ಮಾತನಾಡಿ, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ರವರೆಗೆ ಇದ್ದ ಒನ್ ಅಂಡ್ ಹಾಫ್ ದರವನ್ನು ಬೆಳಿಗಿನ ಜಾವ 5.30 ರವರೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಜಿಲ್ಲಾಧಿಕಾರಿಗೆ ಹಾಗೂ ಆರ್‌ಟಿಒ ಅಧಿಕಾರಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಜಮಿಯುಲ್ಲಾ, ಮುಜಿಬುಲ್ಲಾ, ಇರ್ಫಾನ್, ರಮೇಶ್, ಸಂತೋಷ್ ಎ.ಎನ್, ಫಾಯಜ್, ಫೈರೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
