ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಆ.23
ಅಂಗಾಂಗ ದಾನವು ಮಾನವೀಯತೆಯ ಮಹತ್ವದ ಸೇವೆಯಾಗಿದ್ದು, ಇದು ರೋಗಿಗಳಿಗೆ ಜೀವನದಲ್ಲಿ ಮತ್ತೊಂದು ಅವಕಾಶ ನೀಡುತ್ತದೆ ಎಂದು ಬೆಂಗಳೂರಿನ ಅಪೋಲೋ ಆಸ್ಪತ್ರೆ ಹೆಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್ ಪ್ಲಾಂಟೇಶನ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಪ್ರದೀಪ್ ಕೃಷ್ಣ ಆರ್.ವಿ ಹೇಳಿದರು.
ಅವರು ಅಂಗಾಂಗ ದಾನದ ಮಹತ್ವ ಹಾಗೂ ಅಂಗಾಂಗಗಳ ಕೊರತೆಯಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಹಾಗೂ ಶಿವಮೊಗ್ಗದ ಸುಶೋಧಾ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ 2025 ರಲ್ಲಿ 20,000 ಕ್ಕೂ ಹೆಚ್ಚು ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗಳು ನಡೆದಿವೆ. ಆದರೆ ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವೆ ದೊಡ್ಡ ಅಂತರವಿದೆ. ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಪ್ರಕಾರ ಮಾರ್ಚ್ 3, 2026ರ ವೇಳೆಗೆ ಪ್ರಮುಖ ಅಂಗಾಂಗ ಕಸಿಗಾಗಿ ಸುಮಾರು 90,000 ರೋಗಿಗಳು ಕಾಯುವಿಕೆ ಪಟ್ಟಿಯಲ್ಲಿದ್ದರು. ಹೀಗಾಗಿ ಸಮುದಾಯ ಮಟ್ಟದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದರು.
ಗಮನಿಸಿ: ಅಲ್ಪ ಸಂಖ್ಯಾತರು ದಿಢೀರ್ ಸಭೆ ನಡೆಸಿದ್ದೇಕೆ?!! ಜಿಲ್ಲಾ ಮಂತ್ರಿ ವಿರುದ್ಧ ಆಕ್ರೋಶ!!
ಕಸಿ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ ಅಂಗಾಂಗಗಳ ಕೊರತೆ ಇನ್ನೂ ದೊಡ್ಡ ಸವಾಲಾಗಿದೆ. ಜಾಗೃತಿ ಕಾರ್ಯಕ್ರಮಗಳ ಮೂಲಕ ತಪ್ಪು ಕಲ್ಪನೆಗಳನ್ನು ನಿವಾರಿಸಿ, ಕುಟುಂಬಗಳಲ್ಲಿ ಅಂಗಾಂಗ ದಾನದ ಕುರಿತು ಚರ್ಚೆ ಹೆಚ್ಚಿಸಬೇಕು ಎಂದು ತಿಳಿಸಿದರು.
ಸುಶೋಧಾ ಇನ್‌ಸ್ಟಿಟ್ಯೂಟ್‌ನ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಹಾಗೂ ಹೆಪಟಾಲಜಿಸ್ಟ್ ಡಾ. ಪ್ರದೀಪ್ ಕುಮಾರ್ ಜೆ.ಕೆ. ಮಾತನಾಡಿ, ಪ್ರತಿಯೊಂದು ಅಂಗಾಂಗ ಕಸಿಯೂ ಹೊಸ ಭರವಸೆಯ ಕಥೆಯಾಗಿದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ ಹಲವು ಜೀವಗಳಿಗೆ ನೆರವಾಗಬಹುದು. ಆದ್ದರಿಂದ ಅಂಗಾAಗ ದಾನದ ಕುರಿತು ಪ್ರತಿಯೊಂದು ಕುಟುಂಬದಲ್ಲೂ ಮುಕ್ತ ಚರ್ಚೆ ನಡೆಯಬೇಕು ಎಂದರು.
ಅಂಗಾಂಗ ದಾನವು ವೈದ್ಯಕೀಯ, ನೈತಿಕ ಹಾಗೂ ಕಾನೂನು ನಿಯಮಾವಳಿಗಳ ಪ್ರಕಾರ ನಡೆಯುತ್ತದೆ. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರು ಅಂಗಾಂಗ ದಾನದ ಕುರಿತು ಅರಿವು ಪಡೆದು, ಕುಟುಂಬದೊAದಿಗೆ ಚರ್ಚಿಸಿ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಅಂಗಾಂಗ ಕಸಿ ಮೂಲಕ ಚೇತರಿಸಿಕೊಂಡ ಲೋಕೇಶ್ ಮತ್ತು ರಾಜಶೇಖರ್ ಅವರ ಅನುಭವಗಳನ್ನು ಹಂಚಿಕೊಂಡಿದರು.
ಮೆದುಳು ನಿಷ್ಕೃಯಗೊಂಡ ದಾನಿಯಿಂದ ಯಕೃತ್ತನ್ನು ಪಡೆದ ಲೋಕೇಶ್ ಇದೀಗ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಮೃತ ದಾನಿಯಿಂದ ಯಕೃತ್ತು ಲಭ್ಯವಾಗದ ಸಂದರ್ಭದಲ್ಲಿ ರಾಜಶೇಖರ್ ಅವರ ಪುತ್ರಿ ಅಮೆರಿಕದಿಂದ ಭಾರತಕ್ಕೆ ಆಗಮಿಸಿ ಜೀವಂತ ದಾನಿಯಾಗಿ ತನ್ನ ಯಕೃತ್ತಿನ ಒಂದು ಭಾಗವನ್ನು ತಂದೆಗೆ ದಾನ ಮಾಡಿದ್ದರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಅಪೋಲೋ ಹಾಸ್ಪಿಟಲ್ ನ ಜನರಲ್ ಮ್ಯಾನೇಜರ್ ರಾಘವೇಂದ್ರ ಕುಲಕರ್ಣಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ವೈದ್ಯರು, ರೋಗಿಗಳು, ಕುಟುಂಬಸ್ಥರು, ಸಾರ್ವಜನಿಕರು, ಅಂಗಾಂಗ ದಾನಿಗಳು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
