ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಸೆ.7
ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ಜನರ ಸಮಸ್ಯೆಯನ್ನು ಬಗೆಹರಿಸಲು ಅಲ್ಲ. ಕಾಂಗ್ರೆಸ್ ನಾಯಕರನ್ನು ವೈಯಕ್ತಿಯವಾಗಿ ಟೀಕೆ ಮಾಡಲು ಎಂದು ಸಚಿವ ಮಧು ಬಂಗಾರಪ್ಪ ಕುಟುಕಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ. ವಿಜಯೇಂದ್ರ ಮೋದಿ ಅವರ ಶೈಲಿಯಲ್ಲಿ ಮಾತನಾಡುವುದನ್ನು ಕಲಿತ್ತಿದ್ದಾರೆ. ಪಾದಯಾತ್ರೆಯಲ್ಲಿ ಜನರ ಸಮಸ್ಯೆಯನ್ನು ಕೇಳುವುದನ್ನು ಬಿಟ್ಟು ಬರೀ ನಮ್ಮ ನಾಯಕರನ್ನು ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಅವರನ್ನು ಟೀಕೆ ಮಾಡಿತ್ತು. ಈಗ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇದೆಯೆಂದು ಕಲ್ಪಿಸಿಕೊಂಡು ಅವರನ್ನು ಹೊಗಳುತ್ತಿದ್ದಾರೆ. ತಲತಲಾಂತರದಿಂದ ಬಿಜೆಪಿ ಇಂತಹ ಹೊಡೆದು ಆಳುವ ನೀತಿಯನ್ನೇ ಅನುಸರಿಸಿಕೊಂಡು ಬಂದಿದೆ ಎಂದು ಕಿಡಿಕಾರಿದರು.
ಯಡಿಯೂರಪ್ಪನವರು ಬಿಜೆಪಿಯನ್ನು ತಿರಸ್ಕರಿಸಿ ಕೆಜೆಪಿ ಕಟ್ಟಿದ್ದರು. ಈ ಬಗ್ಗೆ ಬಿಜೆಪಿ ಅವರು ಮಾತನಾಡಲಿ. ದೇವರಾಜ ಅರಸು ಅವರ ಭೂ ಯೋಜನೆಯನ್ನು ಕಿತ್ತಾಕಿದವರು ಇದೇ ಯಡಿಯೂರಪ್ಪ ಸರ್ಕಾರ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಆಳು ಮಾಡಿದ್ದು ಬಸವರಾಜ ಬೊಮ್ಮಾಯಿ ಸರ್ಕಾರ, ಹಸಿರು ಶಾಲು ಹಾಕಿಕೊಂಡು ರೈತರಿಗೆ ಗುಂಡು ಹೊಡೆದಿದ್ದನ್ನು ಮರಿಯಬೇಕಾ, ಯಡಿಯೂರಪ್ಪನವರಿಗೆ ದೇವೇಗೌಡರು ಎಂತಹ ಮಾತುಗಳನ್ನಾಡಿದ್ದಾರೆ ನಿವೆಲ್ಲಾ ಮರೆತ್ತಿದ್ದಿರಾ ಎಂದು ಪ್ರಶ್ನಿಸಿದರು.
ಶರಾವತಿಯ ಸಂತ್ರಸ್ತರ ಸಮಸ್ಯೆಯನ್ನು ಹಂತ ಹಂತವಾಗಿ ಬಗೆ ಹರಿಸಬೇಕು. ಇಲ್ಲದೆ ಹೋದರೆ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಇದನ್ನು ಚುನಾವಣೆಯೊಳಗೆ ಬಗೆ ಹರಿಸುತ್ತೇವೆ ಎಂದರು.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ವಿರೋಧ ಮಾಡಿದೆ. ಆದರೆ ಕೇಂದ್ರದಲ್ಲಿ ನಿಮ್ಮ ಸರ್ಕಾರ ಇದೆಯೆಲ್ಲಾ ನೀವೇನು ಮಾಡುತ್ತಿದ್ದಿರಾ. ಈ ಕುರಿತು 2016 ಆ. 11 ರಂದು ಸಭೆ ಕರೆಯಲಾಗಿತ್ತು. ಆಗ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಯಾಕೆ ಹಾಜರಾಗಿಲ್ಲ. ಎಲ್ಲಿ ಹೋಗಿದ್ದರು. ಬಿ.ವೈ. ವಿಜಯೇಂದ್ರ ಅವರು ಇಂದು ಪಾದಯಾತ್ರೆ ಮಾಡುವ ಮೂಲಕ ರೈತರ ಹೊಲಕ್ಕೆ ಹೋಗುತ್ತಿದ್ದಾರೆ. ಆದರೆ ಇದುವರೆಗೂ ಶಿಕಾರಿಪುರದಲ್ಲಿ ಬಗರ್ ಹುಕ್ಕುಂ ಸಂಬಂಧಿಸಿದಂತೆ ಎಷ್ಟು ಸಭೆ ಮಾಡಿದ್ದಾರೆ ಎಂದು ಗುಡುಗಿದರು.
ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದರು ನಮ್ಮ ಸಂಸದರು ಸುಮ್ಮನಿರುವುದು ಯಾಕೆ?. ಜವಾಬ್ದಾರಿಯನ್ನು ಮರೆತಿರುವುದು ಕೇಂದ್ರ ಸರ್ಕಾರ ಹೊರತು ರಾಜ್ಯ ಸರ್ಕಾರವಲ್ಲ. 2014 ರಲ್ಲಿ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗಿದ್ದು ಏಕೆ?. ಇಷ್ಟೇಲ್ಲಾ ತಪ್ಪುಗಳನ್ನು ಇಟ್ಟುಕೊಂಡು ಈಗ ಬಿಜೆಪಿ ಶೋಕಿಗಾಗಿ ಪಾದಯಾತ್ರೆ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಆಯನೂರು ಮಂಜುನಾಥ್, ಜವಳಿ ಮತ್ತು ಕೈಮಗ್ಗ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್ ಕೆ ಗೌಡ, ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ.ಮಂಜುನಾಥ್, ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಪ್ರಮುಖರಾದ ಡಾ.ಶ್ರೀನಿವಾಸ್ ಕರಿಯಣ್ಣ, ಹೆಚ್.ಸಿ.ಯೋಗೇಶ್, ಎಸ್.ರವಿಕುಮಾರ್, ಕಲೀಂ ಪಾಷ, ಚಿನ್ನಪ್ಪ, ಗೀತೇಂದ್ರ ಗೌಡ ಇತರರು ಇದ್ದರು.
