ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.17
ದೇಶಾದ್ರಿ ಹೊಸ್ಮನೆ-
ನಾಡಿನ ಹೆಸರಾಂತ ರಂಗಭೂಮಿ ನಟಮಂಗಳೂರಿನ ದೇವದಾಸ್ ಕಾಪಿಕಾಡ್ ಪುತ್ರ ಅರ್ಜುನ್ ದೇವ್ ನಿರ್ದೇಶಿಸಿ, ನಟಿಸಿರುವ ಟಾಸ್ ಚಿತ್ರ ನಾಳೆ( ಸೆ.18) ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಅದರ ಪೂರ್ವಭಾವಿ ಪ್ರಚಾರದ ಭಾಗವಾಗಿ ಸೆ.16 ರಂದು ಸಂಜೆ ಇಲ್ಲಿನ ಭಾರತ್ ಸಿನಿಮಾಸ್ ನಲ್ಲಿ ಚಿತ್ರದ ಪ್ರಿಮಿಯರ್ ಶೋ ನಡೆಯಿತು.
ಚಿತ್ರ ತಂಡದ ಆಹ್ವಾನದ ಮೇರೆಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ, ಪರಿಷತ್ ಮಾಜಿ ಸದಸ್ಯ ರು ಹಾಗೂ ಉದ್ಯಮಿ ಎಸ್. ರುದ್ರೇಗೌಡ, ಸೂಡಾ ಮಾಜಿ ಅಧ್ಯಕ್ಷ ಎಸ್ ಎಸ್. ಜ್ಯೋತಿ ಪ್ರಕಾಶ್, ಜಿಪಂ ಮಾಜಿ ಸದಸ್ಯ ಬುಳ್ಳಾಪುರ ಬಸವರಾಜಪ್ಪ, ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಸಿನಿಮಾ ವೀಕ್ಷಿಸುವ ಮೂಲಕ ಚಿತ್ರದ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನಿಸಿ: “ಮಲೆನಾಡು ಮೆಗಾ ಜಾಬಥಾನ್-2026″ಗೆ ನಿರೀಕ್ಷೆಗಿಂತ ಬೆಂಬಲ: ಶರತ್ ಮರಿಯಪ್ಪ
ರಂಗಭೂಮಿಯನ್ನೇ ಆರಾಧಿಸುವ ಕಲಾವಿದ ಮತ್ತು ಆತನ ಶಿಷ್ಯಂದಿರ ಸುತ್ತಣ ಕಥೆಯಲ್ಲಿ ಅ್ಯಕ್ಷನ್, ಸೆಂಟಿಮೆಂಟ್, ಥ್ರಿಲ್ಲಿಂಗ್ ಅಂಶಗಳ ಮಿಶ್ರಣವಿದ್ದು, ಆ ಮೂಲಕ ಇದೊಂದು ಪಕ್ಕಾ ಮನರಂಜನಾ ಚಿತ್ರವಾಗಿದೆ ಎನ್ನುವ ಅಭಿಪ್ರಾಯ ಚಿತ್ರ ನೋಡಿದ ಹಲವರಿಂದ ಕೇಳಿ ಬಂತು.
ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ, ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕನ್ನಡ ಸಿನಿಮಾಗಳಲ್ಲಿ ಕಥೆ ಇಲ್ಲ, ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಆತಂಕದ ಮಾತುಗಳ ನಡುವೆ ಈ ಸಿನಿಮಾ ವು ಪಕ್ಕಾ ಮನರಂಜನಾ ಸಿನಿಮಾವಾಗಿ ಭರವಸೆ ಮೂಡಿಸುತ್ತಿದೆ . ಸಿನಿಮಾವೂ ಒಂದು ಕಲೆ. ಅದು ಉಳಿಯ ಬೇಕಾದರೆ ಕಲಾಭಿಮಾನಿಗಳ ಸಹಕಾರ ಅಗತ್ಯ. ಅಂತಹ ಬೆಂಬಲ, ಸಹಕಾರ ಈ ಸಿನಿಮಾ ಕ್ಕೂ ಸಿಗಲಿ ಎಂದು ಮನವಿ ಮಾಡಿದರು.
ನಿರ್ದೇಶಕ ಹಾಗೂ ನಾಯಕ ನಟ ಅರ್ಜುನ್ ದೇವ್ ಮಾತನಾಡಿ, ನನ್ನ ತಂದೆ ಒಬ್ಬ ಕಲಾವಿದರು. ಅವರಿಗೆ ಶಿವಮೊಗ್ಗವೇನು ಹೊಸದಲ್ಲ, ಆ ನಂಟಿನ ಮೂಲಕವೇ ಇಲ್ಲಿ ಚಿತ್ರದ ಪ್ರಿಮಿಯರ್ ಶೋ ಆಯೋಜಿಸಲಾಗಿತ್ತು. ಇಲ್ಲಿನ ಜನರನ್ನು ರಂಜಿಸುವ ಸಿನಿಮಾಗಳು ಉಳಿದೆಲ್ಲ ಕಡೆ ಗೆಲ್ಲುತ್ತವೆ ಎನ್ನುವ ನಂಬಿಕೆ ಯಿದೆ. ಆ ಕಾರಣವೂ ಕೂಡ ಇಲ್ಲಿ ಪ್ರಿಮಿಯರ್ ಶೋ ನಡೆಸುವುದಕ್ಕೆ ಪ್ರೇರಣೆ ಆಗಿದೆ. ಕಲಾವಿದರ ಕುಟುಂಬದ ಹಿನ್ನೆಲೆಯ ಕಾರಣಕ್ಕೆ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದೇನೆ. ಕನ್ನಡದ ಕಲಾಭಿಮಾನಿಗಳ ಬೆಂಬಲ, ಸಹಕಾರ ಬೇಕು ಎಂದು ಮನವಿ ಮಾಡಿದರು. ಈ ವೇಳೆ ನಾಯಕಿ ಸುತೇಜ್ ಶೆಟ್ಟಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಇದ್ದರು.
” ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದೊಂದು ಕಲೆ. ಈ ಕಲೆ ಉಳಿದು ಬೆಳೆಯಬೇಕಾದರೆ ಕಲಾಭಿಮಾನಿಗಳ ಸಹಕಾರ ಅತ್ಯಗತ್ಯ. ‘ಟಾಸ್’ ಚಿತ್ರಕ್ಕೂ ಕನ್ನಡ ಸಿನಿಪ್ರೇಕ್ಷಕರ ಬೆಂಬಲ ಮತ್ತು ಪ್ರೋತ್ಸಾಹ ದೊರೆಯಬೇಕು’
– ಎಸ್. ರುದ್ರೇಗೌಡ, ಮಾಜಿ ಸದಸ್ಯರು, ವಿಧಾನ ಪರಿಷತ್..
ಶಿವಮೊಗ್ಗ ಜನರನ್ನು ರಂಜಿಸುವ ಸಿನಿಮಾ, ಬೇರೆಡೆಗಳಲ್ಲೂ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ಈ ಕಾರಣವೂ ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ನಡೆಸಲು ಪ್ರೇರಣೆಯಾಗಿದೆ,”
-ಅರ್ಜುನ್ ದೇವ್, ನಾಯಕ ನಟ
