Homeರಾಜ್ಯಸಂಪಾದಕೀಯ: ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ : ಶಾಸಕ ಸಂಗಮೇಶ್ವರ್ ಮುಸ್ಲಿಂ ತುಷ್ಟೀಕರಣ ರಾಜಕಾರಣವೇ ಬಿಜೆಪಿಯ...

ಸಂಪಾದಕೀಯ: ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ : ಶಾಸಕ ಸಂಗಮೇಶ್ವರ್ ಮುಸ್ಲಿಂ ತುಷ್ಟೀಕರಣ ರಾಜಕಾರಣವೇ ಬಿಜೆಪಿಯ ಮತೀಯ ರಾಜಕಾರಣಕ್ಕೆ ವರದಾನ!!

Spread the love

ಸಂಪಾದಕೀಯ:
ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ : ಶಾಸಕ ಸಂಗಮೇಶ್ವರ್
ಮುಸ್ಲಿಂ ತುಷ್ಟೀಕರಣ ರಾಜಕಾರಣವೇ ಬಿಜೆಪಿಯ ಮತೀಯ ರಾಜಕಾರಣಕ್ಕೆ ವರದಾನ!!

*ಭದ್ರಾವತಿಯ ಈದ್ ಮಿಲಾದ್ ಮೆರವಣಿಗೆ (ಸೆ.8)ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ವರ್ ಅವರು ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಓಲೈಕೆ ರಾಜಕಾರಣದ ಪರಾಕಾಷ್ಠೆಯನ್ನು ತೋರಿಸಿದ್ದಾರೆ. ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿಕೇಂದ್ರಿತ ರಾಜಕಾರಣ ಎಲ್ಲಾ ಕಾಲಕ್ಕೂ ನಡೆದುಕೊಂಡು ಬಂದಿದೆ. ದಿವಂಗತ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮತ್ತು ಬಿ.ಕೆ ಸಂಗಮೇಶ್ವರ್ ನಡುವೆಯೇ ಈ ವ್ಯಕ್ತಿಗತ ರಾಜಕಾರಣ ನೆಲೆಗೊಂಡಿದ್ದು ಇದೀಗ ಅಪ್ಪಾಜಿ ನಿಧನರಾದ ನಂತರದಲ್ಲಿ ಅವರ ಪತ್ನಿ ರಾಜಕೀಯಕ್ಕೆ ಬಂದಿರುವುದು ಇದೇ ಮಾದರಿಯ ರಾಜಕಾರಣ ಮುಂದುವರೆಯಲಿದೆ. ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯದ ಪ್ರತಿನಿಧಿಗಳಂತೆ ಇದ್ದ ಅಪ್ಪಾಜಿ ಗೌಡ, ,ಮತ್ತು ಬಿ.ಕೆ ಸಂಗಮೇಶ್ ಕ್ಷೇತ್ರದ ದಲಿತರು, ಅಲ್ಪಸಂಖ್ಯಾತರ ಮತಗಳನ್ನು ಶಕ್ತಾನುಸಾರ ಒಲಿಸಿಕೊಂಡು ಗೆಲುವು ಸಾಧಿಸುತ್ತಾ ಬಂದಿದ್ದರು.

ಜೆಡಿಎಸ್‌ನಲ್ಲಿದ್ದ ಎಂ.ಜೆ ಅಪ್ಪಾಜಿ ಅವರ ನಿಧನದ ನಂತರ ಭದ್ರಾವತಿಯಲ್ಲಿ ಬಿ.ಕೆ ಸಂಗಮೇಶ್ವರ್ ಅವರಿಗೆ ಪ್ರಬಲ ಎದುರಾಳಿಯೇ ಇಲ್ಲದಂತಾಗಿದ್ದು, ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಜೆಡಿಎಸ್ (ಅಪ್ಪಾಜಿ) ಗೂ ಹಂಚಿಹೋಗಿದ್ದ ಮುಸ್ಲಿಂ ಮತಗಳು ಸಹಜವಾಗಿಯೇ ಕಾಂಗ್ರೆಸ್(ಸಂಗಮೇಶ್ವರ್) ಕಡೆಗೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಅಲ್ಲೆಗಳೆಯಲಾಗದು, ಇಷ್ಟಾದರೂ ಸಂಗಮೇಶ್ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ನಾಗಿ ಹುಟ್ಟುತ್ತೇನೆ ಎಂದು ಹೇಳಿರುವುದು ೨೦೨೮ ರ ವಿಧಾನಸಭಾ ಚುನಾವಣೆಯ ಆತಂಕಕ್ಕೀಡಾದಂತಿದೆ.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ 2028 ರ ವಿಧಾನಸಭಾ ಚುನಾವಣೆಗೂ ಮುಂದುವರೆದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮ ಉತ್ತರಾಧಿಕಾರಿಯಾಗಿ ಕಣಕ್ಕಿಳಿಯಲಿರುವ ತಮ್ಮ ಮಗನ ಗೆಲುವು ಅಷ್ಟು ಸುಲಭವಲ್ಲ ಎಂಬ ಆತಂಕದಿಂದಲೇ ಮುಸ್ಲಿಂ ಮತಗಳನ್ನು ಹಿಡಿದಿಟ್ಟುಕೊಳ್ಳವಲ್ಲಿ ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಇದರಿಂದ ಮೆರವಣಿಗೆಯಲ್ಲಿದ್ದ ಮುಸ್ಲಿಂ ರು ಸಂತುಷ್ಟರಾಗಿರಬಹುದು. ಆದರೆ ವಾಸ್ತವವಾಗಿ ಇಸ್ಲಾಂ ಧರ್ಮದಲ್ಲಿ ಪುನರ್ ಜನ್ಮದ ನಂಬಿಕೆ ಇಲ್ಲ. ಅದೇನಿದ್ದರೂ ಹಿಂದೂ ಧರ್ಮದಲ್ಲಿ ಮಾತ್ರ. ಲಿಂಗಾಯಿತ ಸಮುದಾಯಕ್ಕೆ ಸೇರಿದ ಸಂಗಮೇಶ್ವರ್ ಹೀಗೆ ಹೇಳು ಮೂಲಕ ಬಸವಾದಿ ಶರಣ ವಿಚಾರಧಾರೆಗೂ ಅಪಚಾರ ವೆಸಗಿದ್ದಾರೆ. ಸಂಗಮೇಶ್ವರ್ ಅವರ ರಾಜಕೀಯ ಓಲೈಕೆಯ ಮಾತು ಮತೀಯವಾದ ರಾಜಕಾರಣವನ್ನೆ ಉಸಿರಾಡುವ ಬಿಜೆಪಿಗೆ ಹೊಸತೊಂದು ಅಸ್ತ್ರಕೊಟ್ಟಂತಾಗಿದೆ. ನನ್ನ ಮಾತುಗಳನ್ನು ತಿರುಚಲಾಗಿದೆ ಎಂಬ ಸಂಗಮೇಶ್ವರ್ ಅವರ ಸ್ಪಷ್ಟೀಕರಣಕೂಡ ರಾಜಕಾರಣಿಗಳ ಎಂದಿನ ವರಸೆಯೇ ಆಗಿದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಸಂಗಮೇಶ್ವರ್ ಅವರ ಮುಸ್ಲಿಂನಾಗಿ ಹುಟ್ಟುವ ಹೇಳಿಕೆ ಇದೊಂದು ರಾಜಕೀಯ ತೀಟೆಯ ಹೇಳಿಕೆ. ನಾನು ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟಬೇಕು ಎಂದು ಹೇಳುತ್ತಾ ಮುಂದುವರೆದು ನಿಮ್ಮ( ಮುಸ್ಲಿಂರ) ಆಶೀರ್ವಾದ ನನ್ನ ಮಗನ ಮೇಲಿರಲಿ ಎಂದಿರುವುದು ಈ ಮಾತಿನ ಹಿಂದಿರುವ ಉದ್ದೇಶವನ್ನು ಮುಸ್ಲಿಂರು ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರು, ಮುಸ್ಲಿಂ ರನ್ನು ಓಲೈಸಿಕೊಳ್ಳಲು ತರಾವರಿ ಹೇಳಿಕೆ, ವಾಗ್ದಾನಗಳು ಮೊಳಗುತ್ತವೆ. ಈ ಸಮುದಾಯಗಳನ್ನು ಕೇವಲ ಮತಗಳಿಗಾಗಿ ಓಲೈಕೆ ಮಾಡಿಕೊಳ್ಳುವ ರಾಜಕಾರಣಿಗಳು ಅಸಲಿಗೆ ಅವರ ಮೂಲಭೂತ ಸಮಸ್ಯೆಗಳು, ಹಕ್ಕುಗಳನ್ನು ನಿರಾಕರಿಸುತ್ತಲೆ ಬಂದಿವೆ.

ಈ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕೂಡ ತಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಎಂದು ಹೇಳಿದ್ದರು, ಅಲ್ಪಸಂಖ್ಯಾತರ ಓಟುಗಳನ್ನು ಕಾಂಗ್ರೇಸ್ ನಿಂದ ತಮ್ಮಡೆಗೆ ಸೆಳೆದುಕೊಳ್ಳಲು ಗೌಡರು ಈ ಮಾತುಗಳನ್ನು ಆಡಿದ್ದರು, ಇದೊಂದು ರಾಜಕೀಯ ವರಸೆ ಎನ್ನುವುದು ಯಾರಿಗೂ ಅರ್ಥವಾಗದ ಸಂಗತಿಯೇನಲ್ಲ. ಹೀಗೆ ಹೇಳಿದ್ದ ದೇವೇಗೌಡರು ಈಗ ಮುಸ್ಲಿಂ ವಿರೋಧಿ ಧೋರಣೆಯನ್ನೆ ರಾಜಕೀಯ ಬಂಡವಾಳವಾಗಿಸಿಕೊಂಡಿರುವ ಬಿಜೆಪಿ ಜೊತೆ ಕೈಜೋಡಿಸಿರುವುದು ಸೈದ್ದಾಂತಿಕ ದಿವಾಳಿತನದ ಸಂಕೇತ. ಅವರ ಮಕ್ಕಳು, ಮೊಮ್ಮಕ್ಕಳು ಈಗ ಬಿಜೆಪಿಗರಿಗಿಂತ ಮಿಗಿಲಾಗಿ ಮುಸ್ಲಿಂ ವಿರೋಧಿ ಮಾತುಗಳನ್ನು ಆಡುತ್ತಿರುವುದನ್ನು ಕಾಣಬಹುದು. ಕಾಂಗ್ರೆಸ್ ನ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಮುಸ್ಲಿಂ ನಾಗಿ ಹುಟ್ಟುವ ಹೇಳಿಕೆ ಮುಸ್ಲಿಂ ತುಷ್ಟೀಕರಣದ ರಾಜಕೀಯವೇ ಆಗಿದೆ. ಇದು ಅಪಾಯಕಾರಿ. ಇಂತಹ ತುಷ್ಟೀಕರಣ ರಾಜಕಾರಣದಿಂದ ಅಸಲಿಗೆ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣೀಕ ಅಭಿವೃದ್ದಿಗೆ ಸಹಕಾರಿಯಾಗುವುದಿಲ್ಲ ಬದಲಿಗೆ ಬಿಜೆಪಿ ಯ ಮತೀಯ ರಾಜಕಾರಣಕ್ಕೆ ವರವಾಗಲಿದೆ ಎಂಬುದನ್ನು ಸಂಗಮೇಶ್ವರ್ ಮನಗಾಣಬೇಕು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments