ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜೂ.11
ಶಿವಮೊಗ್ಗ ತಾಲೂಕು ಕುಂಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಿಮಟ್ಟಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕೆಂಬ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಇದರ ಮಹತ್ವದ ಹೆಜ್ಜೆಯಾಗಿ ಜಿ.ಪಂ. ಸಿಇಓ ಎನ್. ಹೇಮಂತ್ ಅವರು ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಭೋವಿ ಸಮಾಜದ ಮುಖಂಡರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಇಒ ಎನ್. ಹೇಮಂತ್ ಅವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ, ಗ್ರಾಮದ ಮೂಲಸೌಕರ್ಯಗಳ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ರಸ್ತೆ ನಿರ್ಮಾಣ ಕುರಿತು ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಆರ್ಎಫ್ಒ ವಿನೋದ್ ಅಂಗಡಿ ಅವರೊಂದಿಗೆ ಚರ್ಚೆ ನಡೆಸಿದ ಅವರು, ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗಮನಿಸಿ: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ
ಇದೇ ವೇಳೆ ಗ್ರಾಮದಲ್ಲಿನ ಆರೋಗ್ಯ, ಶಿಕ್ಷಣ ಹಾಗೂ ಮಹಿಳೆಯರ ಉದ್ಯೋಗ ಸಮಸ್ಯೆಗಳ ಕುರಿತೂ ಮಾಹಿತಿ ಪಡೆದ ಅವರು, ಸಂಬಂಧಿತ ಇಲಾಖೆಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರೊಂದಿಗೆ ಸಂವಾದ ನಡೆಸಿದ ಸಿಇಒ ಅವರು, ಮಹಿಳಾ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳು ಹಾಗೂ ಗ್ರಾಮದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಕುರಿತು ಕ್ರಮವಹಿಸಲಾಗುವುದು ಎಂದು ಹೇಳಿದರು.

ಗ್ರಾಮದ ಜನಸಂಖ್ಯೆ, ಮನೆಗಳ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದ ಅವರು, ಗ್ರಾಮದಲ್ಲಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಮಂಜುನಾಥ್, ತಾ.ಪಂ. ಇಓ ಪರಮೇಶ್ವರ್, ಸಿಡಿಪಿಓ ಗಂಗಾ ಬಾಯಿ ಅವರೊಂದಿಗೆ ಜಿಲ್ಲಾ ಭೋವಿ ಸಮಾಜದ ಮುಖಂಡರಾದ ವೀರಭದ್ರಪ್ಪ ಪೂಜಾರಿ, ತಿಮ್ಮರಾಜು ಭೋವಿ, ರಾಮಕೃಷ್ಣಪ್ಪ, ಬೂದಿಗೆರೆ ಬಸವರಾಜ್, ವರಲಕ್ಷ್ಮೀ ಪ್ರಕಾಶ್, ರೂಪಾ ಸತೀಶ್, ಆಂಜನೇಯ ಹಾಗೂ ಪತ್ರಕರ್ತ ದೇಶಾದ್ರಿ ಹೊಸ್ಮನೆ, ಕುಂಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಶಾರಾದ ರಂಗನಾಥ್,ಸದಸ್ಯರಾದ ರೂಪಾ ಪ್ರಭಾಕರ್,ಚನ್ನಮ್ಮ, ಸಯೀದಾ ಬೇಗಂ, ಗುರುಮೂರ್ತಿ, ಕೇಶವಮೂರ್ತಿ ಹಾಗೂ ಶ್ರೀನಿವಾಸ ಇದ್ದರು.
