ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.11
ಕರ್ನಾಟಕದ ಸಾಮಾಜಿಕ ಪರಿವರ್ತನೆಗೆ ಸ್ವಾಭಿಮಾನಿ ಹೋರಾಟದ ದೀಪ ಹಚ್ಚಿ ಅದಕ್ಕೆ ಭದ್ರವಾದ ಅಡಿಪಾಯ ಹಾಕಿದವರು ಬಿ. ಕೃಷ್ಣಪ್ಪನವರು ಎಂದು ಡಿ ಎಸ್ ಎಸ್ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಚಾಲಕ ಟಿ ಹೆಚ್. ಹಾಲೇಶಪ್ಪ ಸ್ಮರಿಸಿದರು.
ಶಿವಮೊಗ್ಗ ನಗರದ ಆಲ್ಕೊಳ ಬಳಿ ಇರುವ ಪ್ರೊ. ಬಿ. ಕೃಷ್ಣಪ್ಪನವರ ವೃತ್ತದಲ್ಲಿ ಕೃಷ್ಣಪ್ಪನವರ 88 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಸಾಮಾಜಿಕ. ಆರ್ಥಿಕ ಮತ್ತು ಶೈಕ್ಷಣಿಕ ಪರಿವರ್ತನೆಯು ಸ್ವಾಭಿಮಾನದ ಚಿಂತನೆಗಳನ್ನು ಒಳಗೊಂಡಿರಬೇಕು, ಸ್ವಾಭಿಮಾನ ಎಲ್ಲಾ ಹೋರಾಟಗಳ ಭದ್ರ ಬುನಾದಿ ಎಂದರಲ್ಲದೆ, ಸೃಜನಶೀಲ ಮನಸುಗಳು ಕ್ರಿಯಾ ಶೀಲತೆಯಿಂದ ಸಮಾಜ ಕಟ್ಟುವ, ಬೆಳೆಸುವ ಕೆಲಸ ಮಾಡಬೇಕು. ಬಿ. ಕೃಷ್ಣಪ್ಪ ನವರು ಹೋರಾಟ ಮಾಡಿದಲ್ಲದೆ, ಸ್ವಾಭಿಮಾನದ ದೀವಿಗೆಯನ್ನು ಬಡವರ ಗುಡಿಸಿಲಿನಲ್ಲಿ ಹಚ್ಚಿದರು. ಅವರು ಹಚ್ಚಿದ ಹೋರಾಟದ ಹಣತೆ ಕರ್ನಾಟಕದ ಮನೆ ಮನೆಗಳಲ್ಲಿ ಪ್ರಜ್ವಲಿಸುತ್ತಿದೆ ಎಂದರು.
ಗಮನಿಸಿ: ಸಿಇಒ ಯಿಂದ ದೊಡ್ಡಿಮಟ್ಟಿ ಗ್ರಾಮದ ಸ್ಥಳ ಪರಿಶೀಲನೆ
ಹೋರಾಟ ಹಾರಾಟವಾಗಬಾರದು, ನೊಂದ ಜನಗಳ ದನಿಯಾಗಬೇಕು, ಭಾರತದ ಎಲ್ಲಾ ವರ್ಗಗಳ ಏಳಿಗೆಗೆ ಶ್ರಮಿಸಬೇಕು, ದಲಿತರೆಂದರೆ ಕೇವಲ ಪರಿಶಿಷ್ಟ ಜಾತಿಯವರಷ್ಟೆ ಅಲ್ಲಾ, ನಮ್ಮ ದೇಶದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾದ ಎಲ್ಲರೂ ದಲಿತರೆ, ಹಾಗಾಗಿ ವಂಚಿತ ಜನರೆಲ್ಲರೂ ಕೃಷ್ಣಪ್ಪ ನವರ ಹೋರಾಟದ ತತ್ವಗಳನ್ನು ಅರಿತು, ನವಭಾರತ ನಿರ್ಮಾಣಕ್ಕೆ ತೊಡಗಬೇಕು ಎಂದರು.
ಈ ಸಂದರ್ಭದಲ್ಲಿ ನೂತನ ಕಾರ್ಯಕರ್ತರಿಗೆ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಅಲ್ಲಿ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳು, ಮತ್ತೆ ಸರ್ವರಿಗೂ ಸಿಹಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಶೇಷಪ್ಪ ಹುಣಸೊಡು, ಮುಖಂಡರಾದ ಪ್ರಭಾಕರ್, ಶಿವಕುಮಾರ್ ಆಸ್ತಿ, ಆನಂದಪ್ಪ, ಕಲ್ಲಿಹಾಲ್ ಹನುಮಂತಪ್ಪ, ಸೂಗೂರು ಪರಮೇಶ್, ರಂಗಸ್ವಾಮಿ, ಹುಲಿಯಪ್ಪ, ಪ್ರೇಮ್, ಹಳದಪ್ಪ, ರುದ್ರೇಶ್ ಹಾಗೂ ಮಹಿಳಾ ಮುಖಂಡರಾದ ರುದ್ರಮ್ಮ, ಕೀರ್ತಿ, ಪಾರ್ವತಮ್ಮ, ಕೆಂಚಮ್ಮ, ಮೋನಿಕಾ ಮೊದಲಾದವರು ಭಾಗವಹಿಸಿದ್ದರು.
